ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಸುಪ್ರೀಂ ಮಹತ್ವದ ಆದೇಶ, ಸದ್ಯಕ್ಕೆ ದೋಸ್ತಿ ಸರ್ಕಾರ ಸೇಫ್..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜು.12- ದೇಶಾದ್ಯಂತ ಕುತೂಹಲ ಕೆರಳಿಸಿರುವ ಕರ್ನಾಟಕ ರಾಜ್ಯ ರಾಜಕೀಯ ಬಿಕ್ಕಟ್ಟು ಏಳನೆ ದಿನವಾದ ಇಂದೂ ಕೂಡ ಬಗೆಹರಿಯಲಿಲ್ಲ. 10 ಬಂಡಾಯ ಶಾಸಕರ ರಾಜೀನಾಮೆ ಅಂಗೀಕಾರ ಅಥವಾ ಅನರ್ಹತೆ ವಿಷಯದಲ್ಲಿ ಮಂಗಳವಾರದವರೆಗೆ ಯಥಾಸ್ಥಿತಿ ಕಾಪಾಡಿಕೊಳ್ಳಲು ಸುಪ್ರೀಂಕೋರ್ಟ್ ಸ್ಪೀಕರ್ ಅವರಿಗೆ ಆದೇಶ ನೀಡಿದೆ.

ಸುಪ್ರೀಂಕೋರ್ಟ್‍ನ ಈ ಆದೇಶದಿಂದ ಶಾಸಕರ ರಾಜೀನಾಮೆಯನ್ನು ಮಂಗಳವಾರದವರೆಗೆ ಅಂಗೀಕರಿಸುವಂತೆಯೂ ಇಲ್ಲ ಅಥವಾ ಅವರನ್ನು ಅನರ್ಹಗೊಳಿಸುವಂತೆಯೂ ಇಲ್ಲದಂತಹ ಯಥಾಸ್ಥಿತಿ ಸೃಷ್ಟಿಯಾಗಿದೆ. ಇದರೊಂದಿಗೆ ಪತನದ ಅಂಚಿನಲ್ಲಿರುವ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ತಾತ್ಕಾಲಿಕ ನಿರಾಳ ಸಿಕ್ಕಿದಂತಾಗಿದೆ.

ಅಲ್ಲದೆ, ಅತ್ಯಂತ ಸೂಕ್ಷ್ಮ ಸಂವಿಧಾನಿಕ ಬಿಕ್ಕಟ್ಟಿನ ಬಗ್ಗೆ ನಿರ್ಧಾರ ಕೈಗೊಳ್ಳಲು ಸಭಾಧ್ಯಕ್ಷ ರಮೇಶ್‍ಕುಮಾರ್ ಅವರಿಗೂ ಸ್ವಲ್ಪ ಸಮಯ ಸಿಕ್ಕಂತಾಗಿದ್ದು, ಅತೃಪ್ತರೂ ಸಹ ನಿರಾಳರಾಗಿದ್ದಾರೆ.  ಜುಲೈ 16ರಂದು ಮಂಗಳವಾರ ಈ ಪ್ರಕರಣದ ವಿಸ್ತೃತ ವಿಚಾರಣೆ ಕೈಗೊಳ್ಳುವುದಾಗಿ ಸುಪ್ರೀಂಕೋರ್ಟ್ ತಿಳಿಸಿದ್ದು, ಮುಂದಿನ ನಿರ್ಧಾರ ಭಾರೀ ಕುತೂಹಲ ಕೆರಳಿಸಿದೆ.

ಬಂಡಾಯ ಶಾಸಕರ ರಾಜೀನಾಮೆ ಅಂಗೀಕಾರವಾಗುತ್ತದೆಯೋ ಅಥವಾ ಇಲ್ಲವೋ ಎಂಬ ಬಗ್ಗೆ ನಿನ್ನೆಯಿಂದ ಅಪಾರ ಕುತೂಹಲ ಕೆರಳಿಸಿದ್ದ ಪ್ರಕರಣದ ವಿಚಾರಣೆ ಇಂದು ಸುಪ್ರೀಂಕೋರ್ಟ್‍ನಲ್ಲಿ ಮುಂದುವರಿಯಿತು. ಅತೃಪ್ತ ಶಾಸಕರ ಪರ ಹಿರಿಯ ವಕೀಲ ಮುಕುಲ್ ರೋಹಟಗಿ ಮತ್ತು ಸರ್ಕಾರದ ಪರ ವಕೀಲ ಅಭಿಷೇಕ್ ಮನೋಜ್ ಸಿಂಘ್ವಿ ನಡುವೆ ಭಾರೀ ವಾದ-ವಾಗ್ವಾದಕ್ಕೆ ಸುಪ್ರೀಂಕೋರ್ಟ್ ಇಂದು ಸಾಕ್ಷಿಯಾಯಿತು.

ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗಯ್ ನೇತೃತ್ವದ ಪೀಠವು ಇಂದು ಸ್ಪೀಕರ್ ರಮೇಶ್‍ಕುಮಾರ್, ಬಂಡಾಯ ಶಾಸಕರು ಹಾಗೂ ಮುಖ್ಯಮಂತ್ರಿ ಪರ ವಕೀಲರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿತು. ಮೂರು ಪಕ್ಷಗಾರರ ಪರ ವಕೀಲರು ಸುಪ್ರೀಂಕೋರ್ಟ್‍ನಲ್ಲಿ ತಮ್ಮ ವಾದಗಳನ್ನು ಸಮರ್ಥವಾಗಿ ಮಂಡಿಸಿ ಕಾನೂನು ಅಂಶಗಳನ್ನು ಉಲ್ಲೇಖಿಸಿ ವಾಕ್ಚಾತುರ್ಯ ಪ್ರದರ್ಶಿಸಿದರು.

ಸ್ಪೀಕರ್ ಪರವಾಗಿ ಮೊದಲು ವಾದ ಮಂಡಿಸಿದ ಅಭಿಷೇಕ್ ಮನೋಜ್ ಸಿಂಘ್ವಿ ನಿಯಮಾವಳಿಗಳ ಪ್ರಕಾರ ಸಭಾಧ್ಯಕ್ಷರ ಕೈಗೆ ರಾಜೀನಾಮೆ ಕೊಡಬೇಕು. ಅದನ್ನು ರಮೇಶ್‍ಕುಮಾರ್ ಅವರು ವಿಚಾರಣೆ ಮಾಡಬೇಕು. ಸಂವಿಧಾನದ ಪ್ರಕಾರ ಸರಿ ಇದ್ದರೆ ಮಾತ್ರ ಅವರು ರಾಜೀನಾಮೆ ಅಂಗೀಕರಿಸುತ್ತಾರೆ. ಈ ವಿಷಯದಲ್ಲಿ ಸ್ಪೀಕರ್ ಅವರಿಗೆ ಸ್ಪಷ್ಟ ವಿವೇಚನೆ ಇದೆ ಎಂದು ವಾದಿಸಿದರು.

ಶಾಸಕರ ವಿಚಾರಣೆಗೆ ಸ್ಪೀಕರ್ ಸಮಯ ನಿಗದಿ ಮಾಡಿದ್ದಾರೆ. ಅವರಿಗೆ ಮನವರಿಕೆಯಾದರೆ ರಾಜೀನಾಮೆ ಅಂಗೀಕರಿಸಬಹುದು. ಇದು ಸಂವಿಧಾನದಲ್ಲೂ ಕೂಡ ಸ್ಪಷ್ಟವಾಗಿದೆ. ರಮೇಶ್‍ಕುಮಾರ್ ಅವರು ಹಿರಿಯರು. ಸಂವಿಧಾನದ ಬಗ್ಗೆ ಜ್ಞಾನ ಹೊಂದಿದ್ದಾರೆ. ಅಲ್ಲದೆ, ಅವರಿಗೆ ಬಂಡಾಯ ಶಾಸಕರ ಮೇಲೆ ಯಾವುದೇ ವೈಯಕ್ತಿಕ ದ್ವೇಷ ಅಥವಾ ಹಗೆತನವಾಗಲಿ ಇಲ್ಲ ಎಂದು ಸಿಂಘ್ವಿ ಹೇಳಿದರು.

ಸುಪ್ರೀಂಕೋರ್ಟ್ ಆದೇಶವನ್ನು ಪ್ರಶ್ನಿಸುವ ಅಧಿಕಾರ ಸ್ಪೀಕರ್ ಅವರಿಗೆ ಇದೆಯೇ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗಯ್ ವಕೀಲ ಸಿಂಘ್ವಿ ಅವರನ್ನು ಪ್ರಶ್ನಿಸಿದರು. ಅವರು ಸಂವಿಧಾನದ ಪ್ರಕಾರವಾಗಿಯೇ ಕ್ರಮ ಕೈಗೊಂಡಿದ್ದಾರೆ. ಈ ಹಿಂದೆ ಹರಿಯಾಣದಲ್ಲಿ ಶಾಸಕರ ರಾಜೀನಾಮೆ ಪ್ರಕರಣಕ್ಕೆ ಆರು ತಿಂಗಳು ಗಡುವು ನೀಡಲಾಗಿತ್ತು ಎಂಬ ಅಂಶವನ್ನು ಉಲ್ಲೇಖಿಸಿದರು.

ಕಾಂಗ್ರೆಸ್-ಜೆಡಿಎಸ್ ಬಂಡಾಯ ಶಾಸಕರ ಪರ ವಾದ ಮಂಡಿಸಿದ ಮುಕುಲ್ ರೊಹಟಗಿ ನಮ್ಮ ಕಕ್ಷಿದಾರರು (ಶಾಸಕರು) ನಿನ್ನೆ ಸ್ಪೀಕರ್ ಅವರ ಮುಂದೆ ಮತ್ತೆ ರಾಜೀನಾಮೆ ನೀಡಲು ತೆರಳಿದ ಸಂದರ್ಭದಲ್ಲಿ ರಮೇಶ್‍ಕುಮಾರ್ ಅವರು ಶಾಸಕರು ಸುಪ್ರೀಂಕೋರ್ಟ್‍ಗೆ ಏಕೆ ಮೊರೆ ಹೋದಿರಿ ಎಂದು ಪ್ರಶ್ನಿಸಿದ್ದಲ್ಲದೆ ನರಕಕ್ಕೆ ಹೋಗಿ ಎಂದು ಮಾಧ್ಯಮಗಳ ಎದುರು ಅವಹೇಳನ ಮಾಡಿದ್ದರು ಎಂಬ ಅಂಶವನ್ನು ನ್ಯಾಯಾಲಯದ ಗಮನಕ್ಕೆ ತಂದರು.

ಸಿಂಘ್ವಿ, ರೊಹಟಗಿ ಅವರ ಈ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದಾಗ ಕೆಲಕಾಲ ವಾದ-ವಾಗ್ವಾದ ನಡೆಯಿತು. ತಮ್ಮ ಕಕ್ಷಿದಾರರಿಗೆ ಅರ್ಜಿಯ ಪ್ರತಿಯನ್ನು ಸಲ್ಲಿಸಿಲ್ಲ. ಬಂಡಾಯ ಶಾಸಕರಿಂದಲೇ ಬೇಕಾಬಿಟ್ಟಿ ರೀತಿಯಲ್ಲಿ ರಾಜೀನಾಮೆಗಳನ್ನು ಸಲ್ಲಿಸಲಾಗಿದೆ ಎಂದು ಸಿಂಘ್ವಿ ಹೇಳಿದರು.ಇದಕ್ಕೆ ಪ್ರತ್ಯುತ್ತರ ನೀಡಿದ ರೊಹಟಗಿ ಹೊಸದಾಗಿ ರಾಜೀನಾಮೆ ನೀಡಿದ ಶಾಸಕರ ತ್ಯಾಗ ಪತ್ರಗಳನ್ನು ಸ್ಪೀಕರ್ ಅವರು ಏಕೆ ಅಂಗೀಕರಿಸಿಲ್ಲ ಎಂದು ಪ್ರಶ್ನಿಸಿದರು.

ಅನರ್ಹತೆ ಅರ್ಜಿಗೂ ಮೊದಲೇ ಎಂಟು ಮಂದಿ ರಾಜೀನಾಮೆ ನೀಡಿದ್ದಾರೆ. ಮೊದಲೇ ನೀಡಿದ್ದ ಇಬ್ಬರ ರಾಜೀನಾಮೆ ಬಗ್ಗೆ ನಾವು ಪ್ರಶ್ನಿಸುವುದಿಲ್ಲ. ಆದರೆ, ಉಳಿದವರ ರಾಜೀನಾಮೆಯನ್ನು ಏಕೆ ಅಂಗೀಕರಿಸಿಲ್ಲ ಎಂದು ಪ್ರಶ್ನಿಸಿದರು. ಇಂದಿನಿಂದ ಕರ್ನಾಟಕ ವಿಧಾನಮಂಡಲ ಅಧಿವೇಶನ ಆರಂಭವಾಗಿದ್ದು, ಉದ್ದೇಶಪೂರ್ವಕವಾಗಿಯೇ ವಿಪ್ ನೀಡಲಾಗಿದೆ ಎಂದು ರೊಹಟಗಿ ಆರೋಪಿಸಿದರು.

ಈ ಮಧ್ಯೆ ಮುಖ್ಯಮಂತ್ರಿ ಪರ ವಕೀಲ ರಾಜೀವ್ ದವನ್ ವಾದ ಮಂಡಿಸಿದರು. ಎಚ್.ಡಿ.ಕುಮಾರಸ್ವಾಮಿ ಅವರಿಗೆ ವಿಧಾನಸಭೆಯಲ್ಲಿ ವಿಶ್ವಾಸಮತವಿದೆ. ಸರ್ಕಾರ ಅಲ್ಪಮತಕ್ಕೆ ಕುಸಿಯಬೇಕೆಂಬ ಕಾರಣದಿಂದಲೇ ರಾಜೀನಾಮೆ ನೀಡಿದ್ದಾರೆ ಎಂದು ವಾದಿಸಿದರು.  ದುರಾಡಳಿತ, ಹಗರಣಗಳಿಂದ ಬೇಸತ್ತು ತಾವು ರಾಜೀನಾಮೆ ನೀಡಿರುವುದಾಗಿ ಶಾಸಕರು ಹೇಳುತ್ತಿರುವುದು ಸರಿಯಲ್ಲ. ಒಂದು ಭಾರೀ ವಂಚನೆ ಪ್ರಕರಣದಲ್ಲಿ ರಾಜೀನಾಮೆ ನೀಡಿದ ಶಾಸಕರೊಬ್ಬರೂ ಶಾಮೀಲಾಗಿದ್ದಾರೆ ಎಂಬ ಅಂಶವನ್ನು ರಾಜೀವ್ ದವನ್ ತಮ್ಮ ವಾದದಲ್ಲಿ ಮಂಡಿಸಿದರು.

ಅಲ್ಪಮತಕ್ಕೆ ಕುಸಿಯುವಂತೆ ಯೋಜನೆ ರೂಪಿಸಲಾಗಿದೆ. ವಿಶ್ವಾಸಮತ ಇಲ್ಲವೆಂದು ಬಂಡಾಯ ಶಾಸಕರು ದೂರುತ್ತಿದ್ದಾರೆ. ನೇರವಾಗಿ ಸುಪ್ರೀಂಕೋರ್ಟ್ ಈ ಅರ್ಜಿಯನ್ನು ಸ್ವೀಕರಿಸಬಾರದಿತ್ತು ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದರು. ರಾಜ್ಯಪಾಲರಿಗೆ ಈ ಪ್ರಕರಣದಲ್ಲಿ ಯಾವುದೇ ಅಧಿಕಾರವಿಲ್ಲ. ಇವರು ಯಾವ ಅಧಿಕಾರದಿಂದ ಸುಪ್ರೀಂಕೋರ್ಟ್ ಮಧ್ಯ ಪ್ರವೇಶಿಸುವಂತೆ ಹೇಳಿದ್ದಾರೆ ಎಂದು ರಾಜೀವ್‍ದವನ್ ವಾದಿಸಿದರು.

ಪರ ಮತ್ತು ವಿರೋಧಿ ವಾದ-ಪ್ರತಿವಾದಗಳನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗಯ್ ನೇತೃತ್ವದ ಪೀಠ ಜೂ.16ರ ಮಂಗಳವಾದವರೆಗೂ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸ್ಪೀಕರ್ ರಮೇಶ್‍ಕುಮಾರ್ ಅವರಿಗೆ ಸೂಚಿಸಿತು. ಇದರಿಂದಾಗಿ ಬಂಡಾಯ ಶಾಸಕರ ರಾಜೀನಾಮೆ ಅಂಗೀಕಾರ ಅಥವಾ ಅನರ್ಹಗೊಳಿಸುವ ನಿರ್ಧಾರವು ಮಂಗಳವಾದವರೆಗೆ ಮುಂದೂಡಲ್ಪಟ್ಟಿತು. ಯಥಾಸ್ಥಿತಿಯಿಂದಾಗಿ ಸರ್ಕಾರಕ್ಕೆ ತಾತ್ಕಾಲಿಕ ನಿರಾಳವಾಗಿದ್ದು, ಸಂವಿಧಾನ ಬಿಕ್ಕಟ್ಟಿನ ಬಗ್ಗೆ ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ಸ್ಪೀಕರ್ ಅವರಿಗೆ ಸಮಯ ಲಭಿಸಿದಂತಾಗಿದೆ.

ಈ ಎಲ್ಲ ಬೆಳವಣಿಗೆಗಳನ್ನೂ ಗಮನಿಸಿರುವ ಬಿಜೆಪಿ ಕಾದು ನೋಡುವ ತಂತ್ರ ಅನುಸರಿಸಿದೆ. ಮಂಗಳವಾರ ಸುಪ್ರೀಂಕೋರ್ಟ್‍ನಲ್ಲಿ ಈ ಪ್ರಕರಣದ ವಿಸ್ತೃತ ವಿಚಾರಣೆ ನಡೆಯಲಿದ್ದು, ಹೊರಬರುವ ಆದೇಶದ ಮೇಲೆ ಸರ್ಕಾರದ ಅಳಿವು-ಉಳಿವಿನ ಪ್ರಶ್ನೆ ನಿರ್ಧಾರವಾಗಲಿದೆ.

Facebook Comments

Sri Raghav

Admin