ಸ್ಪೀಕರ್ ಆದೇಶ ಕುರಿತು ಮಹತ್ವದ ಅಂಶ ಉಲ್ಲೇಖಿಸಿದ ಸುಪ್ರೀಂ ಕೋರ್ಟ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.13- ಸ್ಪೀಕರ್ ಅವರು ರಾಜೀನಾಮೆ ಪರಿಶೀಲಿಸುವಾಗ ಸಾಂವಿಧಾನಿಕ ನೈತಿಕತೆಗಳನ್ನು ಗಣನೆಗೆ ತೆಗೆದುಕೊಳ್ಳಬೇಕೇ ಹೊರತು ರಾಜಕೀಯ ಪರಿಸ್ಥಿತಿಗಳನ್ನಲ್ಲ ಎಂದು ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ಉಲ್ಲೇಖ ಮಾಡಿರುವುದು ದೇಶದ ರಾಜಕೀಯ ಪರಿಸ್ಥಿತಿ ಮೇಲೆ ಭಾರೀ ಪರಿಣಾಮ ಬೀರುವ ಸಾಧ್ಯತೆಗಳಿವೆ.

ಕರ್ನಾಟಕದ ರಾಜಕೀಯ ಬೆಳವಣಿಗೆಯಲ್ಲಿ ಸ್ಪೀಕರ್ ರಮೇಶ್‍ಕುಮಾರ್ ಅವರು ಶಾಸಕರ ನೈತಿಕತೆಯನ್ನು ಪ್ರಶ್ನಿಸಿ ತೀರ್ಪು ನೀಡಿದ್ದರು. ಜನರಿಂದ ಆಯ್ಕೆಯಾದ ಸರ್ಕಾರವನ್ನು ಅಸ್ಥಿರಗೊಳಿಸಲು ವಾಮಮಾರ್ಗಗಳನ್ನು ಬಳಸಲಾಗುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಎಂಬುದು ಸ್ಪೀಕರ್ ಆದೇಶದ ಪ್ರಮುಖ ಭಾಗವಾಗಿತ್ತು.

ಸುಪ್ರೀಂಕೋರ್ಟ್ ಕೂಡ ಜನಪ್ರತಿನಿಧಿಗಳಲ್ಲಿ ನೈತಿಕತೆ ಇರಬೇಕು ಎಂದು ಅಭಿಪ್ರಾಯಪಟ್ಟಿದೆ. ಆದರೆ, ಶಾಸಕರ ರಾಜೀನಾಮೆ ಅಂಗೀಕಾರದ ವೇಳೆ ಸಂವಿಧಾನದಲ್ಲಿನ ನೈತಿಕತೆಯನ್ನು ಕಾಪಾಡಿಕೊಳ್ಳಬೇಕು ಎಂದು ಸ್ಪಷ್ಟಪಡಿಸಿದೆ.

ರಾಜಕೀಯವಾಗಿ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿದ್ದು, ತಂತ್ರ-ಕುತಂತ್ರಗಳು, ವಾಮಮಾರ್ಗಗಳು, ಪರೋಕ್ಷವಾದ ಅಡ್ಡ ಹಾದಿಗಳು ಎಲ್ಲವನ್ನೂ ಬಳಕೆ ಮಾಡಲಾಗುತ್ತಿದೆ. ನೇರವಾಗಿ ಎಲ್ಲಿಯೂ ಸಿಕ್ಕಿಹಾಕಿಕೊಳ್ಳದೆ ಹಿಂಬಾಗಿಲ ಮೂಲಕ ರಾಜಕಾರಣವನ್ನು ಮಾಡಲಾಗುತ್ತಿದ್ದು, ಇದು ಒಂದು ಸ್ಥಿರ ಸರ್ಕಾರಕ್ಕೆ ಸದಾಕಾಲ ಗಂಡಾಂತರ ತಂದೊಡ್ಡುವ ಪರಿಸ್ಥಿತಿ ನಿರ್ಮಿಸುತ್ತಿದೆ.

ಪ್ರಸ್ತುತ ಕರ್ನಾಟಕದ ರಾಜಕೀಯ ಬೆಳವಣಿಗೆಯಲ್ಲಿ 17 ಮಂದಿ ಶಾಸಕರು ರಾಜೀನಾಮೆ ನೀಡಿಯಾಗಿದೆ. ಸಮ್ಮಿಶ್ರ ಸರ್ಕಾರ ಪತನವಾಗಿದೆ. ಸ್ಪೀಕರ್ ಅವರು 17 ಮಂದಿಯನ್ನು ಅನರ್ಹಗೊಳಿಸಿ ಆಯಿತು. ಈಗ ಸುಪ್ರೀಂಕೋರ್ಟ್ ಅನರ್ಹತೆಯನ್ನು ಎತ್ತಿ ಹಿಡಿದು ಉಪಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದು ಹೇಳಿದೆ.

ಇನ್ನು ಮುಂದಿನ ಬೆಳವಣಿಗೆಯಲ್ಲಿ ಉಪಚುನಾವಣೆಗಳು ಜಿದ್ದಾಜಿದ್ದಿನ ಕಣವಾಗಲಿವೆ. ಆಡಳಿತಾರೂಢ ಪಕ್ಷ ಸಹಜವಾಗಿಯೇ ಸರ್ಕಾರ ಉಳಿಸಿಕೊಳ್ಳಲು 8ಕ್ಕಿಂತ ಹೆಚ್ಚು ಮಂದಿ ಶಾಸಕರನ್ನು ಗೆಲ್ಲಿಸಿಕೊಳ್ಳಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಹೀಗಾಗಿ ಚುನಾವಣೆ ಕಣದಲ್ಲಿ ಹಣ ಹಾಗೂ ಇತರ ಆಮಿಷಗಳ ಹೊಳೆಯೇ ಹರಿಯಲಿದೆ.

ನ್ಯಾಯಾಂಗದ ಅನುಸಾರ ಸುಪ್ರೀಂಕೋರ್ಟ್ ತೀರ್ಪು ಏನೇ ಇರಲಿ, ಜನಸಾಮಾನ್ಯರ ದೃಷ್ಟಿಯಲ್ಲಿ ಶಾಸಕರು ಮಾಡಿದ್ದು ಸರಿಯೇ, ತಪ್ಪೇ ಎಂಬುದರ ನೈಜ ವಿಶ್ಲೇಷಣೆಯಾಗಬೇಕಿದೆ. ಚುನಾವಣೆಯಲ್ಲಿ ನೈಜ ಪ್ರಜಾಪ್ರಭುತ್ವ ರಕ್ಷಣೆಯಾಗಬೇಕು. ಜನರ ಅಭಿಪ್ರಾಯ ಈ ಸಂದರ್ಭದಲ್ಲಿ ಅತ್ಯಂತ ಮಹತ್ವದ್ದಾಗಿದೆ. ಜನ ನೀಡುವ ತೀರ್ಪು ಮುಂದಿನ ದಿನಗಳಲ್ಲಿ ಜನಪ್ರತಿನಿಧಿಗಳಿಗೆ ಎಚ್ಚರಿಕೆಯ ಗಂಟೆಯಾಗಬೇಕು.

Facebook Comments

Sri Raghav

Admin