ವಿವಿಪ್ಯಾಟ್ ಕುರಿತ ಸುಪ್ರೀಂ ತೀರ್ಪು ಬಗ್ಗೆ ವಿಪಕ್ಷಗಳ ಚರ್ಚೆ, ಒಕ್ಕೂಟ ರಂಗ ರಚನೆಗೆ ಕಸರತ್ತು

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮೇ 21- ಹೈವೋಲ್ಟೇಜ್ ಲೋಕಸಭಾ ಚುನಾವಣೆ ಮತ ಎಣಿಕೆಗೆ ಒಂದು ದಿನ ಮಾತ್ರ ಬಾಕಿ ಇದ್ದು, ಕೇಂದ್ರದಲ್ಲಿ ಸರ್ಕಾರ ರಚನೆ ಸಾಧ್ಯತೆಗಾಗಿ ಸಮಾನ ಮನಸ್ಕ ಪಕ್ಷಗಳ ಒಕ್ಕೂಟ ರಂಗ ಅಸ್ತಿತ್ವಕ್ಕೆ ತರಲು ಪ್ರಮುಖ ವಿರೋಧ ಪಕ್ಷಗಳು ದೆಹಲಿಯಲ್ಲಿ ಇಂದು ತೀವ್ರ ಕಸರತ್ತು ಮುಂದುವರಿಸಿದೆ.

ಎನ್‍ಡಿಎ ಬಹುಮತ ಗಳಿಸಲು ವಿಫಲವಾದಲ್ಲಿ ಸರ್ಕಾರ ರಚನೆಗಾಗಿ ಸಮಾನ ಮನಸ್ಕ ವಿರೋಧಪಕ್ಷಗಳು ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಬಗ್ಗೆ ಚರ್ಚೆಗಳು ನಡೆದಿವೆ.

ಚುನಾವಣೋತ್ತರ ಸಮೀಕ್ಷೆಗಳು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿರುವುದರಿಂದ ನಿರಾಶೆಗೊಂಡಿರುವ ಪ್ರತಿಪಕ್ಷಗಳನ್ನು ಒಗ್ಗೂಡಿಸಲು ಆಂಧ್ರ ಪ್ರದೇಶ ಮುಖ್ಯಮಂತ್ರಿ ಮತ್ತು ತೆಲುಗು ದೇಶಂ ಪಾರ್ಟಿ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಶುಕ್ರವಾರದಿಂದಲೇ ಕಸರತ್ತು ಆರಂಭಿಸಿದ್ದಾರೆ.

ಇಂದೂ ಕೂಡ ದೆಹಲಿಯಲ್ಲಿ ಪ್ರಮುಖ ವಿರೋಧ ಪಕ್ಷಗಳ ಧುರೀಣರು ಮಹತ್ವದ ಚರ್ಚೆ ನಡೆಸುತ್ತಿದ್ದಾರೆ. ಈ ಮಧ್ಯೆ, ವಿದ್ಯುನ್ಮಾನ ಮತಯಂತ್ರಗಳೊಂದಿಗೆ ಶೇಕಡ 100ರಷ್ಟು ವಿವಿಪ್ಯಾಟ್‍ಗಳನ್ನು ತಾಳೆ ನೋಡಲು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಇಂದು ವಜಾಗೊಳಿಸಿರುವುದರಿಂದ ಆ ಬಗ್ಗೆಯೂ ಮುಖಂಡರು ಗಹನ ಚರ್ಚೆ ನಡೆಸಿದ್ದಾರೆ.

ವಿವಿಪ್ಯಾಟ್‍ಗೆ ಸಂಬಂಧಪಟ್ಟ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಬಿಗಿಪಟ್ಟು ಹಿಡಿದಿರುವ ವಿರೋಧ ಪಕ್ಷಗಳು ಕೇಂದ್ರ ಚುನಾವಣಾ ಆಯೋಗದ ಮೇಲೆ ಮತ್ತಷ್ಟು ಒತ್ತಡ ಹೇರಿವೆ.

ಬಹುಮತ ಗಳಿಸಲು ಎನ್‍ಡಿಎ ವಿಫಲವಾದಲ್ಲಿ ಸರ್ಕಾರ ರಚನೆ ಸಾಧ್ಯತೆ ಹಕ್ಕು ಮಂಡಿಸಲು ಇರುವ ಮಾರ್ಗೋಪಾಯಗಳ ಕುರಿತು ಕಾಂಗ್ರೆಸ್, ಟಿಡಿಪಿ, ಎಡ ಪಕ್ಷಗಳು, ಬಿಎಸ್‍ಪಿ, ಎನ್‍ಸಿಪಿ ಮತ್ತು ಟಿಎಂಸಿ ನಾಯಕರು ರಾಜಧಾನಿಯಲ್ಲಿ ಸಮಾಲೋಚನೆಯಲ್ಲಿ ತೊಡಗಿದ್ದಾರೆ.

ಕಾಂಗ್ರೆಸ್ ಹಿರಿಯ ಧುರೀಣರಾದ ಗುಲಾಂ ನಬಿ ಅಜಾದ್ ಮತ್ತು ಅಹಮದ್ ಪಟೇಲ್. ಎನ್‍ಸಿಪಿ ಮುಖ್ಯಸ್ಥ ಶರದ್ ಪವಾರ್, ಟಿಡಿಪಿ ಮುಖಂಡ ಚಂದ್ರಬಾಬು ನಾಯ್ಡು, ಬಿಎಸ್‍ಪಿಯ ಸತೀಶ್ ಚಂದ್ರ ಮಿಶ್ರಾ, ಸಿಪಿಐ (ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ, ಸಿಪಿಐನ ಡಿ ರಾಜಾ ಮತ್ತು ಟಇಎಂಸಿ ಡೆರೆಕ್ ಓಬ್ರಿಯಾನ್ ಇಂದಿನ ಸಭೆಯಲ್ಲಿ ಪಾಲ್ಗೊಂಡಿದ್ದ್ಧಾರೆ.

ಈ ಮಧ್ಯೆ, ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಇಂದು ಬೆಳಗ್ಗೆ ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಚುನಾವಣೆ ಫಲಿತಾಂಶದ ನಂತರ ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಕುರಿತು ಸಮಾಲೋಚಿಸಿದರು.

ದೆಹಲಿ ಮತ್ತು ಉತ್ತರಪ್ರದೇಶದಲ್ಲಿ ಇಂದು ಬೆಳಗ್ಗೆಯಿಂದಲೇ ಬಿರುಸಿನ ರಾಜಕೀಯ ಚಟುವಟಿಕೆಗಳು ನಡೆಯುತ್ತಿದ್ದು, ಒಟ್ಟಾರೆ ಮುಂದಿನ ಬೆಳವಣಿಗೆ ತೀವ್ರ ಕುತೂಹಲ ಕೆರಳಿಸಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ