ಅಜೀವ ನಿಷೇಧ ಆದೇಶ ವಜಾ ಮಾಡಿದ ಸುಪ್ರೀಂ, ನಿಟ್ಟುಸಿರುಬಿಟ್ಟ ಶ್ರೀಶಾಂತ್

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮಾ.15-ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಶಾಮೀಲಾದ ಆರೋಪಕ್ಕಾಗಿ ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಎಸ್. ಶ್ರೀಶಾಂತ್ ಅವರಿಗೆ ಅಜೀವ ನಿಷೇಧ ಹೇರಿದ್ದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ಶಿಸ್ತು ಸಮಿತಿ ಆದೇಶವನ್ನು ಸುಪ್ರೀಂಕೋರ್ಟ್ ಇಂದು ವಜಾಗೊಳಿಸಿದೆ.

ಶ್ರೀಶಾಂತ್‍ಗೆ ನೀಡಬೇಕಾದ ಶಿಕ್ಷೆಯ ಪ್ರಮಾಣವನ್ನು ಮರುಪರಿಶೀಲನೆ ಮಾಡುವಂತೆಯೂ ಸರ್ವೋಚ್ಚ ನ್ಯಾಯಾಲಯ ಬಿಸಿಸಿಐಗೆ ಸೂಚಿಸಿದೆ. ಇದರಿಂದ ಶ್ರೀಶಾಂತ್‍ಗೆ ದೊಡ್ಡ ಮಟ್ಟದ ರಿಲೀಫ್ ದೊರೆತಂತಾಗಿದೆ. ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್ ಮತ್ತು ಕೆ.ಎಂ.ಜೋಸೆಫ್ ಅವರನ್ನು ಒಳಗೊಂಡ ಪೀಠವು ಬಿಸಿಸಿಐ ಶಿಸ್ತು ಸಮಿತಿ ಆದೇಶವನ್ನು ಪಕ್ಕಕ್ಕೆ ಇರಿಸಿತು.

2013ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ 35 ವರ್ಷದ ಶ್ರೀಶಾಂತ್ ಅವರಿಗೆ ನೀಡಬಹುದಾದ ಶಿಕ್ಷೆಯ ಸ್ವರೂಪ ಮತ್ತು ಪ್ರಮಾಣದ ಬಗ್ಗೆ ಮೂರು ತಿಂಗಳ ಒಳಗೆ ಮರು ಪರಿಶೀಲನೆ ನಡೆಸುವಂತೆಯೂ ಪೀಠವು ಬಿಸಿಸಿಐ ಶಿಸ್ತು ಸಮಿತಿಗೆ ಸೂಚಿಸಿದೆ. ಶಿಕ್ಷೆಯ ಪ್ರಮಾಣ ಕುರಿತು ಸಮಿತಿಯಿಂದ ನಡೆಸಲಾಗುವ ವಿಚಾರಣೆ ವೇಳೆ ಶ್ರೀಶಾಂತ್ ಅವರ ಹೇಳಿಕೆಯನ್ನೂ ಪಡೆಯಲೂ ಪೀಠವು ಅವಕಾಶ ನೀಡಿದೆ.

ದೆಹಲಿ ಹೈಕೋರ್ಟ್‍ನಲ್ಲಿ ಮಾಜಿ ಕ್ರಿಕೆಟ್ ಪಟು ವಿರುದ್ಧ ವಿಚಾರಣೆಗೆ ಬಾಕಿ ಇರುವ ಕ್ರಿಮಿನಲ್ ಪ್ರಕರಣಗಳ ಮೇಲೆ ಸುಪ್ರೀಂಕೋರ್ಟ್‍ನ ತೀರ್ಪು ಪರಿಣಾಮ ಬೀರುವುದಿಲ್ಲ ಎಂದು ಪೀಠವು ಇದೇ ವೇಳೆ ಪೀಠವು ಸ್ಪಷ್ಟಪಡಿಸಿದೆ.

ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣ ಸೇರಿದಂತೆ ಶ್ರೀಶಾಂತ್ ಸೇರಿದಂತೆ ಎಲ್ಲ ಆರೋಪಿಗಳನ್ನು ವಿಮುಕ್ತಿಗೊಳಿಸಿರುವ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ದೆಹಲಿ ಪೊಲೀಸರು ಹೈಕೋರ್ಟ್ ಮೇಲ್ಮನವಿ ಸಲ್ಲಿಸಿದ್ದು, ಆ ಪ್ರಕರಣದ ವಿಚಾರಣೆ ನಡೆಯಬೇಕಿದೆ.

ಬಿಸಿಸಿಐನಿಂದ ತಮ್ಮ ಮೇಲೆ ವಿಧಿಸಲಾದ ಅಜೀವ ನಿಷೇಧವನ್ನು ಎತ್ತಿ ಹಿಡಿದ ಕೇರಳ ಹೈಕೋರ್ಟ್‍ನ ವಿಭಾಗೀಯ ಪೀಠದ ನಿರ್ಧಾರವನ್ನು ಪ್ರಶ್ನಿಸಿ ಶ್ರೀಶಾಂತ್ ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಸರ್ವೋನ್ನತ ನ್ಯಾಯಾಲಯವು ಅವರ ಮೇಲಿನ ಅಜೀವ ನಿಷೇಧವನ್ನು ವಜಾಗೊಳಿಸಿ ಶಿಕ್ಷೆಯ ಪ್ರಮಾಣವನ್ನು ನಿಗದಿಗೊಳಿಸುವಂತೆ ಸೂಚಿಸಿದೆ.

ಬಿಸಿಸಿಐ ಪ್ರತಿಕ್ರಿಯೆ : ಸುಪ್ರೀಂಕೋರ್ಟ್ ಆದೇಶವನ್ನು ಪಾಲಿಸುವುದಾಗಿ ಹೇಳಿರುವ ಬಿಸಿಸಿಐ ಈ ವಿಷಯವನ್ನು ಆಡಳಿತಗಾರರ ಸಮಿತಿ (ಕಮಿಟಿ ಆಫ್ ಆಡ್ಮಿನಿಸ್ಟ್ರೇಟರ್-ಸಿಒಎ)ನಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದೆ.

Facebook Comments