ಸೆಕ್ಷನ್ 66A ರದ್ದು: ರಾಜ್ಯ ಸರ್ಕಾರ-ಹೈಕೋರ್ಟ್‍ಗಳಿಗೆ ಸುಪ್ರೀಂ ನೋಟಿಸ್

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಆ.2- ಮಾಹಿತಿ ಮತ್ತು ತಂತ್ರಜ್ಞಾನ ಕಾಯ್ದೆ ಸೆಕ್ಷನ್ 66 ಎ ಅನ್ನು ಸುಪ್ರೀಂ ಕೋರ್ಟ್ ಅಸಿಂಧುಗೊಳಿಸಿದ ಬಳಿಕವೂ ಕೆಲವು ರಾಜ್ಯಗಳ ಪೊಲೀಸರು ಪ್ರಕರಣ ದಾಖಲಿಸುತ್ತಿರುವುದು ಮತ್ತು ನ್ಯಾಯಾಲಯಗಳಲ್ಲಿ ವಿಚಾರಣೆ ನಡೆಯುತ್ತಿರುವ ಬಗ್ಗೆ ಸ್ಪಷ್ಟ ಆದೇಶ ನೀಡುವುದಾಗಿ ಸುಪ್ರೀಂಕೋರ್ಟ್ ವಿಭಾಗೀಯ ಪೀಠ ತಿಳಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಸಂಗತಿಗಳನ್ನು ಪ್ರಕಟಿಸಿದ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲು ಕಾಯ್ದೆಯ ಸೆಕ್ಷನ್ 66ಎ ಅಡಿ ಅವಕಾಶ ಇತ್ತು. ಮೂರು ವರ್ಷ ಶಿಕ್ಷೆ ಮತ್ತು ದಂಡ ವಿಧಿಸಬಹುದಾಗಿತ್ತು.

ಸೆಕ್ಷನ್ ಕುರಿತು ಆಕ್ಷೇಪ ಸಲ್ಲಿಸಿ ಕೆಲವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ 2015ರಲ್ಲಿ ಸೆಕ್ಷನ್ ಅನ್ನು ರದ್ದು ಪಡಿಸಿತ್ತು. ಅದರ ಹೊರತಾಗಿಯೂ ಕೆಲವು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಪ್ರಕರಣ ದಾಖಲಿಸುವುದನ್ನು ಮುಂದುವರೆಸಿದ್ದವು. ನ್ಯಾಯಾಲಯಗಳಲ್ಲಿ ಪ್ರಕರಣಗಳ ವಿಚಾರಣೆ ಕೂಡ ಮುಂದುವರೆದಿತ್ತು. ಇದನ್ನು ಪ್ರಶ್ನಿಸಿ ಪಿಯುಸಿಎಲ್ ಸ್ವಯಂ ಸೇವಾ ಸಂಸ್ಥೆ ಸುಪ್ರಿಂಕೋರ್ಟ್‍ಗೆ ತಕರಾರು ಅರ್ಜಿ ಸಲ್ಲಿಸಿತ್ತು.

ಇಂದು ವಿಚಾರಣೆ ನಡೆಸಿರುವ ನ್ಯಾಯಮೂರ್ತಿಗಳಾಲದಲ ಆರ್.ಎಫ್.ನಾರಿಮನ್ ಮತ್ತು ಬಿ.ಆರ್.ಗವಾಯಿ ಅವರನ್ನೊಳಗೊಂಡ ವಿಭಾಗೀಯ ಪೀಠ ರಾಜ್ಯ ಸರ್ಕಾರಗಳಿಗೆ, ಎಲ್ಲಾ ಹೈಕೋರ್ಟ್‍ಗಳ ರಿಜಿಸ್ಟರ್‍ಗಳಿಗೆ ನೋಟಿಸ್ ಜಾರಿ ಮಾಡಿದೆ. ವಿಚಾರಣೆ ವೇಳೆ ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಸಂಜಯ್ ಪಾರೀಖ್ ಅವರು, ಪೊಲೀಸರು ಈಗಲೂ ಕೇಸು ದಾಖಲಿಸುತ್ತಿದ್ದಾರೆ. ನ್ಯಾಯಾಲಯಗಳು ವಿಚಾರಣೆ ನಡೆಸುತ್ತಿವೆ ಎಂದು ಗಮನ ಸೆಳೆದರು.

ನ್ಯಾಯಾಲಯದ ಕಡೆಯಿಂದ ಉಂಟಾಗಿರುವ ತೊಂದರೆಯನ್ನು ನಾವು ನಿವಾರಿಸುತ್ತೇವೆ ಎಂದಿರುವ ನ್ಯಾಯಮೂರ್ತಿಗಳು, ಪ್ರಕರಣ ದಾಖಲಿಸುವುದು ರಾಜ್ಯ ಸರ್ಕಾರಗಳಾಗಿರುವುದರಿಂದ ಎಲ್ಲ ಸರ್ಕಾರಗಳನ್ನು ಪ್ರತಿವಾದಿಗಳನ್ನಾಗಿ ಮಾಡುವುದು ಸೂಕ್ತ ಎಂದರು. ಈ ಹಿನ್ನೆಲೆಯಲ್ಲಿ ನೋಟಿಸ್ ಕೂಡ ನೀಡುವುದಾಗಿ ತಿಳಿಸಿದರು.
ಮುಂದಿನ ವಿಚಾರಣೆಯನ್ನು ನಾಲ್ಕು ವಾರಗಳಿಗೆ ಮುಂದೂಡಲಾಗಿದೆ.

Facebook Comments