ಸುರಕ್ಷಾ ಆ್ಯಪ್ ಕರೆಗಳಿಗೆ ಸ್ಪಂದಿಸಿ, ಪೊಲೀಸ್ ಸಿಬ್ಬಂದಿಗಳಿಗೆ ಡಿಸಿಪಿ ಡಾ.ಶರಣಪ್ಪ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.11- ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿಯೇ ಇರುವ ಸುರಕ್ಷಾ ಆ್ಯಪ್‍ಗೆ ಬರುವ ಕರೆಗಳನ್ನು ನಿರ್ಲಕ್ಷಿಸದೆ ತಕ್ಷಣ ಸ್ಪಂದಿಸಿ, ಕ್ಷಣಾರ್ಧದಲ್ಲಿ ಸ್ಥಳಕ್ಕೆ ತೆರಳಿ ಪರಿಶೀಲಿಸುವಂತೆ ಪೂರ್ವ ವಿಭಾಗದ ಡಿಸಿಪಿ ಡಾ.ಶರಣಪ್ಪ ಸಿಬ್ಬಂದಿಗಳಿಗೆ ತಿಳಿಸಿದರು.

ಹಲಸೂರಿನ ಶಾಲೆಯೊಂದರ ಆವರಣದಲ್ಲಿ ನಿನ್ನೆ ಹೊಯ್ಸಳ ಹಾಗೂ ಚೀತಾ ವಾಹನಗಳನ್ನು ಪರಿಶೀಲಿಸಿದ ನಂತರ ಈ ವಾಹನಗಳ ಸಿಬ್ಬಂದಿಗಳಿಗೆ ಹಲವು ಮಾರ್ಗದರ್ಶನಗಳನ್ನು ನೀಡಿ, ಡಯಲ್ 100 ಮತ್ತು ಸುರಕ್ಷಾ ಆ್ಯಪ್‍ಗಳಿಂದ ಬರುವ ಕರೆಗಳನ್ನು ನಿರ್ಲಕ್ಷ್ಯಸದೆ ಸೂಕ್ತವಾಗಿ ಸ್ಪಂದಿಸಬೇಕೆಂದು ಅವರು ಸೂಚನೆ ನೀಡಿದರು.

ಅಲ್ಲದೆ ಕಂಟ್ರೋಲ್ ರೂಂಗೆ ಬರುವ ಕರೆಗಳನ್ನು ಹಾಗೂ ಸಾರ್ವಜನಿಕರು ನೀಡುವ ದೂರುಗಳನ್ನು ಮೊದಲು ಸ್ವೀಕರಿಸಿ ಅವರಿಗೆ ಧೈರ್ಯ ತುಂಬಬೇಕು. ಒಂದು ವೇಳೆ ಆ ದೂರುಗಳು ತಮ್ಮ ವ್ಯಾಪ್ತಿಗೆ ಬರದಿದ್ದರೂ ಸಹ ಅವರಿಂದ ದೂರು ಪಡೆದು ನಂತರ ಸಂಬಂಧಿಸಿದ ಠಾಣೆಗೆ ಹಸ್ತಾಂತರಿಸಬೇಕೆಂದು ಸೂಚಿಸಿದರು.

ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗೆ ಒತ್ತು ನೀಡಬೇಕು. ಶಾಲಾ-ಕಾಲೇಜುಗಳ ಬಳಿ ಹಾಗೂ ಆಸ್ಪತ್ರೆಗಳ ಬಳಿ ಗಸ್ತು ಮಾಡಿ ಸೂಕ್ಷ್ಮವಾಗಿ ಗಮನಿಸಬೇಕು. ಯಾವುದೇ ಪ್ರಕರಣವನ್ನೂ ಸಹ ನಿರ್ಲಕ್ಷಿಸಬಾರದು. ಒಂದು ವೇಳೆ ಉದಾಸೀನ ಕಂಡು ಬಂದರೆ ಅಂತಹ ಸಿಬ್ಬಂದಿ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಡಿಸಿಪಿ ಶರಣಪ್ಪ ಎಚ್ಚರಿಸಿದ್ದಾರೆ.

Facebook Comments