ರೈಲ್ವೆ ಉದ್ಯೋಗ : ಹುಬ್ಬಳ್ಳಿಯಲ್ಲಿ ಪ್ರಾದೇಶಿಕ ಉಪ ಕಾರ್ಯಾಲಯ ಆರಂಭ

ಈ ಸುದ್ದಿಯನ್ನು ಶೇರ್ ಮಾಡಿ

ಹುಬ್ಬಳ್ಳಿ, ಡಿ.18-ಸ್ಥಳೀಯರಿಗೆ (ಕನ್ನಡಿಗರಿಗೆ) ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದಲೇ ಆರ್ ಆರ್ ಬಿ   ಕಚೇರಿಯನ್ನು ಹುಬ್ಬಳ್ಳಿಯಲ್ಲಿ ಆರಂಭಿಸಲಾಗಿದೆ. ಈ ಭಾಗದ ಯುವಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್‍ಅಂಗಡಿ ತಿಳಿಸಿದರು.

ನಗರದಲ್ಲಿ ನಡೆದ ರೈಲ್ವೆ ನೇಮಕಾತಿ ಮಂಡಳಿ, ಆರ್‍ಆರ್‍ಬಿ ಉಪಕಾರ್ಯಾಲಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹುಬ್ಬಳ್ಳಿ ಕಚೇರಿಯಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಅಗತ್ಯ ಮಾಹಿತಿ ನೀಡಲಾಗುತ್ತದೆ. ಪರೀಕ್ಷೆ ಕುರಿತ ಮಾಹಿತಿ, ಮಾದರಿ ಪ್ರಶ್ನೆಪತ್ರಿಕೆ ಕೂಡ ಲಭ್ಯವಾಗಲಿದ್ದು, ಅವುಗಳನ್ನು ಬಳಸಿಕೊಳ್ಳಬೇಕು ಎಂದು ಹೇಳಿದರು.

ಬೇರೆ ರಾಜ್ಯದವರು ಹೆಚ್ಚು ಬಾರಿ ಪರೀಕ್ಷೆಗೆ ಕುಳಿತುಕೊಳ್ಳುತ್ತಾರೆ. ರಾಜ್ಯದ ಅಭ್ಯರ್ಥಿಗಳು ಒಂದೆರಡು ಪ್ರಯತ್ನದಲ್ಲಿ ಪಾಸಾಗದಿದ್ದರೆ ಕೈ ಬಿಡುತ್ತಾರೆ. ಉದ್ಯೋಗ ಸಿಗದಿದ್ದರೆ ನಿರಂತರ ಪ್ರಯತ್ನ ಅಗತ್ಯ ಎಂದರು. ರೈಲ್ವೆ ನೇಮಕಾತಿ ಸಂಪೂರ್ಣ ಡಿಜಿಟಲ್ ಹಾಗೂ ಪಾರದರ್ಶಕ ವಾಗಿದ್ದು, ಭ್ರಷ್ಟಾಚಾರಕ್ಕೆ ಆಸ್ಪದವಿಲ್ಲ ಎಂದು ಹೇಳಿದರು.

ತ್ರಿವಳಿ ನಗರ ಜೋಡಣೆ: ಧಾರವಾಡ-ಬೆಳಗಾವಿ ನೇರ ರೈಲು ಮಾರ್ಗದ ಪ್ರಸ್ತಾವನೆ ಮಂಡಳಿ ಎದುರು ಬಂದಿದ್ದು, ಆದಷ್ಟು ಬೇಗ ತ್ರಿವಳಿ ನಗರ ಜೋಡಣೆ ಸಿದ್ಧವಾ ಗಲಿದೆ. ತ್ರಿವಳಿ ನಗರಗಳು ಕೈಗಾರಿಕಾ ಕಾರಿಡಾರ್‍ನಲ್ಲಿ ಬರುತ್ತವೆ. ಕಿತ್ತೂರಿನಲ್ಲಿ ಎಕ್ಸ್‍ಪೋರ್ಟ್ ಝೋನ್ ಮಾಡುವ ಆಶಯವಿದ್ದು, ಮೇಕ್ ಇನ್ ಇಂಡಿಯಾ ಮೂಲಕ ಇಲಾಖೆಗೆ ಬೇಕಾದ ವಸ್ತುಗಳನ್ನು ಅಲ್ಲಿಂದ ಪೂರೈಸಬಹುದು, ರಫ್ತು ಕೂಡ ಮಾಡಬಹುದಾಗಿದೆ ಎಂದು ಹೇಳಿದರು.

ರಾಜಧಾನಿಗೆ ವೇಗದ ರೈಲು: ಹುಬ್ಬಳ್ಳಿಯಿಂದ ಬೆಂಗಳೂರಿಗೆ ವೇಗದ (5 ತಾಸು) ರೈಲು ಆರಂಭಿಸಲು ಶೀಘ್ರ ನಿರ್ಧಾರ ಕೈಗೊಳ್ಳಲಾಗುವುದು. ಹುಬ್ಬಳ್ಳಿ ಅಂಕೋಲಾ ರೈಲು ಮಾರ್ಗಕ್ಕೆ ಇರುವ ಅಡೆ ತಡೆ ನಿವಾರಣೆಗೆ ಸಂಬಂಧ ಪಟ್ಟ ಇಲಾಖೆಯೊಂದಿಗೆ ಸಮಾಲೋಚನೆ ನಡೆಸಲಾಗುವುದು ಎಂದು ಹೇಳಿದರು. ಬೆಂಗಳೂರು- ಮಂಗಳೂರು, ಬೀದರ್-ಕಲಬುರಗಿ, ಬೀದರ್-ಬೆಂಗಳೂರು ಹೊಸ ರೈಲು ಆರಂಭ ಸೇರಿ ಅಗತ್ಯವಿರುವೆಡೆ ಹೆಚ್ಚಿನ ರೈಲು ಸೇವೆ ಆರಂಭಿಸಲಾಗುವುದು ಎಂದು ಹೇಳಿದರು.

ಸ್ಥಳೀಯರಿಗೆ ಅವಕಾಶ:ರೈಲು ನಿಲ್ದಾಣಗಳಲ್ಲಿ ಆಹಾರ ಪೂರೈಕೆಗೆ ಸ್ಥಳೀಯರಿಗೆ ಹೆಚ್ಚಿನ ಅವಕಾಶ ಕೊಡಬೇಕು. ಆದ್ದರಿಂದ ಜನರಿಗೆ ಆಯಾ ಸ್ಥಳೀಯ ಆಹಾರ ಲಭ್ಯವಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಪೂರ್ಣ ಪ್ರಮಾಣದ ಕಚೇರಿ: ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಮಾತನಾಡಿ, ಆರ್‍ಆರ್‍ಬಿ ಉಪಕಾರ್ಯಾಲಯ ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡು ವಂತಾಗಬೇಕು. ಬೆಂಗಳೂರಿಗೆ ಎಕ್ಸ್‍ಪ್ರೆಸ್ ರೈಲು ಆರಂಭಿಸಬೇಕು. ಧಾರವಾಡ- ಕಿತ್ತೂರು ಮಾರ್ಗವಾಗಿ ಬೆಳಗಾವಿ ಮಾರ್ಗ ರಚನೆ, ಅಂಕೋಲಾ ಮಾರ್ಗ ರಚನೆಗೆ ಕ್ರಮಕೈಗಳ್ಳಬೇಕೆಂದು ಮನವಿ ಮಾಡಿದರು.

ಕೇಂದ್ರ ಸಚಿವ ಪ್ರಹ್ಲಾದ್ ಜೋಷಿಮಾತನಾಡಿ, ಆರ್‍ಆರ್‍ಬಿ ಕಚೇರಿ ಈ ಭಾಗದ ಜನರ ಬಹುಬೇಡಿಕೆಯಾಗಿತ್ತು. ಅದು ಈಗ ಈಡೇರಿದೆ. ಈ ಭಾಗಕ್ಕೆ ಪ್ರತಿಯೊಂದನ್ನೂ ಹೋರಾಟ ಮಾಡಿಯೇ ಪಡೆದಿದ್ದೇವೆ. ದೇವೇ ಗೌಡರು ಪ್ರಧಾನಿ ಯಾಗಿದ್ದಾಗ ರೈಲ್ವೆ ವಲಯ ಕಚೇರಿಗಾಗಿ ಬಂದ್‍ಗೆ ಕರೆ ಕೊಟ್ಟಾಗ ಅಂದಿನ ಸಂಸದ ವಿಜಯ್ ಸಂಕೇಶ್ವರ್ ನಾವೆಲ್ಲರೂ ಬಂಧನಕ್ಕೊಳಗಾಗಿದ್ದೆವು ಎಂದು ಸ್ಮರಿಸಿದರು.

ಕೇಂದ್ರ ಸರ್ಕಾರದ ಇಲಾಖೆಗಳ ನೇಮಕಾತಿ ಸಂದರ್ಭದಲ್ಲಿ ಬಹುತೇಕ ಸಂದರ್ಶನವನ್ನು ತೆಗೆದು ಹಾಕಿದೆ. ಆನ್‍ಲೈನ್ ಪರೀಕ್ಷೆ ಮೂಲಕ ನೇರ ನೇಮಕ ಆಗುವುದರಿಂದ ಭ್ರಷ್ಟಾಚಾರಕ್ಕೆ ಅವಕಾಶ ಇಲ್ಲ. ಮುಂಬರುವ ಐದು ವರ್ಷದಲ್ಲಿ ರೈಲ್ವೆ ಇಲಾಖೆಯಲ್ಲಿ 50 ಲಕ್ಷ ಕೋಟಿ ರೂ. ಹೂಡಿಕೆಗೆ ಪ್ರಧಾನಿ ಮೋದಿ ಯೋಜನೆ ರೂಪಿಸಿದ್ದಾರೆ ಎಂದು ಹೇಳಿದರು.
ಶಾಸಕರಾದ ಅರವಿಂದ್ ಬೆಲ್ಲದ್, ಪ್ರದೀಪ್ ಶೆಟ್ಟರ್, ನೈರುತ್ಯ ರೈಲ್ವೆ ಮಹಾ ಪ್ರಬಂಧಕ ಎ.ಕೆ.ಸಿಂಗ್, ಆರ್‍ಆರ್‍ಬಿ ಜಿ.ಎಂ.ಕಾಶಿ ಪಾಲ್ಗೊಂಡಿದ್ದರು.

Facebook Comments