ಗೊಂದಲವಿಲ್ಲದೆ ಪಿಯುಸಿ ಪರೀಕ್ಷೆ ನಡೆಸಿ : ಅಧಿಕಾರಿಗಳಿಗೆ ಸಚಿವ ಸುರೇಶ್‍ಕುಮಾರ್ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.14-ದ್ವಿತೀಯ ಪಿಯುಸಿ ಪರೀಕ್ಷೆ ಯಾವುದೇ ಗೊಂದಲವಿಲ್ಲದೆ, ಸುಸೂತ್ರವಾಗಿ ನಡೆಯಲು ಅಧಿಕಾರಿಗಳು ಕ್ರಮ ವಹಿಸಬೇಕೆಂದು ಶಿಕ್ಷಣ ಸಚಿವ ಸುರೇಶ್‍ಕುಮಾರ್ ಸೂಚಿಸಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಮಹತ್ವದ್ದಾಗಿದೆ.

ಎಸ್‍ಎಸ್‍ಎಲ್‍ಸಿಗೆ ಒಂದು ರೀತಿ ಮಹತ್ವವಿದ್ದರೆ, ದ್ವಿತೀಯ ಪಿಯುಸಿಗೆ ಇನ್ನೊಂದು ರೀತಿಯ ಮಹತ್ವವಿರುತ್ತದೆ ಎಂದು ಹೇಳಿದರು. ಕಳೆದ ವರ್ಷ ಪಿಯುಸಿ ಪರೀಕ್ಷೆಗಳು ಸುಸೂತ್ರವಾಗಿ ನಡೆದಿವೆ ಅದಕ್ಕಾಗಿ ಅಧಿಕಾರಿಗಳಿಗೆ ಧನ್ಯವಾದ ಸಲ್ಲಿಸುತ್ತೇನೆ. ಈ ವರ್ಷ ಕೂಡ ಸುಸೂತ್ರವಾಗಿ ಪರೀಕ್ಷೆ ನಡೆಯಬೇಕು. ಯಾವುದೇ ರೀತಿಯ ಗೊಂದಲಗಳಿಗೆ ಆಸ್ಪದ ಕೊಡಬಾರದು.

ಹಾಗಾಗಿ ಇಲಾಖೆ ಅನೇಕ ಕ್ರಮಗಳನ್ನು ತೆಗೆದುಕೊಂಡಿದೆ ಎಂದರು. ಕಳೆದ ವಾರವಷ್ಟೇ ಪರೀಕ್ಷೆ ಸಂಬಂಧ ಪೊಲೀಸ್ ಇಲಾಖೆ, ಸಿಐಡಿ ಇಲಾಖೆ, ಖಜಾನೆ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇನೆ. ಈಗ ಒಂದೊಂದು ವಿಭಾಗದ ಚೀಫ್ ಎಕ್ಸಾಮಿನರ್‍ಗಳ ಜೊತೆ ಸಭೆ ನಡೆಸಿ ಸಲಹೆಗಳನ್ನು ನೀಡಲಾಗುತ್ತಿದೆ ಎಂದು ಹೇಳಿದರು.

ಮಾ.4 ರಿಂದ 23ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಖಜಾನಾಧಿಕಾರಿಗಳು ಮತ್ತು ಎಡಿಸಿಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಎಲ್ಲರೂ ಒಟ್ಟುಗೂಡಿ ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಬೇಕೆಂದು ಸುರೇಶ್‍ಕುಮಾರ್ ಸಲಹೆ ನೀಡಿದರು.

Facebook Comments