ಶಾಲೆಯಲ್ಲಿ ಮಕ್ಕಳೊಡನೆ ಕಾಲ ಕಳೆದ ಶಿಕ್ಷಣ ಸಚಿವ ಸುರೇಶ್ ಕುಮಾರ್

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕಮಗಳೂರು, ಫೆ.25- ಕಳೆದ ಆಗಸ್ಟ್ ತಿಂಗಳಲ್ಲಿ ಅಧಿಕ ಮಳೆಯಿಂದ ಭೂಕುಸಿತ ಉಂಟಾಗಿ ಬಾಳೂರು ಹೊರಟ್ಟಿ ಶಾಲೆ ಕಟ್ಟಡ ಕುಸಿದು ಹೋಗಿದ್ದು ವಿದ್ಯಾರ್ಥಿಗಳು ಕಲಿಯುತ್ತಿರುವ ತಾತ್ಕಾಲಿಕ ಶೆಡ್ಡಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು.  ಕಿರಿಯ ಪ್ರಾಥಮಿಕ ಶಾಲೆಗೆ ಒಂದು ವರ್ಷದಲ್ಲಿ ನೂತನ ಕಟ್ಟಡ ನಿರ್ಮಿಸಲಾಗುವುದು ಎಂದ ಸಚಿವರು, ಕಟ್ಟಡ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆಗೆ ನಿರ್ದೇಶನ ನೀಡಲಾಗಿದ್ದು, ಶೀಘ್ರದಲ್ಲೇ ಕಟ್ಟಡ ಕಾಮಗಾರಿ ಆರಂಭವಾಗಲಿದೆ ಎಂದರು.

ರಾಜ್ಯದಲ್ಲಿ ಶಾಲೆಗಳ ದುರಸ್ತಿಗಾಗಿ ಈಗಾಗಲೇ 199 ಕೋಟಿ ರೂ .ಅನುದಾನ ಬಿಡುಗಡೆಯಾಗಿದೆ. ನೂತನ ಶಾಲಾ ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ ಹೆಚ್ಚಿನ ಅನುದಾನ ಕೇಳಲಾಗಿದೆ. ಮಾಧ್ಯಮಗಳ ಮೂಲಕ ಕುಗ್ರಾಮದ ಶಾಲೆ ಸ್ಥಿತಿ ನನ್ನ ಗಮನಕ್ಕೆ ಬಂದಿದೆ ಅಭಿವೃದ್ಧಿಗೆ ಇಲಾಖೆಯಿಂದ ಶ್ರಮಿಸಲಾಗುವುದು ಎಂದು ಸುರೇಶ್‍ಕುಮಾರ್ ಇದೇ ವೇಳೆ ಭರವಸೆ ನೀಡಿದರು.

ಸಚಿವರು ಮಕ್ಕಳೊಡನೆ ನೆಲದ ಮೇಲೆ ಕುಳಿತು ವಿದ್ಯಾರ್ಥಿಗಳಿಗೆ ನಿನಗೆ ಮಗ್ಗಿ ಬರುತ್ತಾ ಎಂದು ಕೇಳಿದರು.  ಹಿಂದಿದ್ದ ನಿಮ್ಮ ಶಾಲೆ ಏನಾಯಿತು ಎಂದು ಮಕ್ಕಳಲ್ಲಿ ಕೇಳಿದಾಗ ಮಕ್ಕಳು ಮಳೆಗೆ ಕುಸಿದಿದೆ ಎಂದರು ನಿಮಗೆ ಹೊಸ ಸ್ಕೂಲ ಬೇಕಾ ? ಕಟ್ಟೋಣ ಚೆನ್ನಾಗಿ ಓದಬೇಕು ಎಂದು ಕೆಲಕಾಲ ಮಕ್ಕಳೊಡನೆ ಸಮಯ ಕಳೆದರು. ನಂತರ ನಿರ್ಮಾಣವಾಗುವ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಶ್ಯಾಮಣ್ಣ, ತಾಲೂಕು ಪಂಚಾಯಿತಿ ಅಧ್ಯಕ್ಷ ಕೆ.ಸಿ.ರತನ್, ಮೂಡಿಗೆರೆ ರಾಜ ಮತ್ತಿತರರಿದ್ದರು.

Facebook Comments