ಉದ್ಯಮಶೀಲರಾಗಲು ಪತ್ರಕರ್ತರಿಗೆ ಕರೆ : ಸಚಿವ ಸುರೇಶ್‍ಕುಮಾರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.12- ಪತ್ರಕರ್ತರು ಉದ್ಯಮಿಗಳಾಗಿ ಮಾರ್ಪಡುವ ಬಗ್ಗೆ ಗಂಭೀರ ಚಿಂತನೆ ನಡೆಸುವ ಅಗತ್ಯವಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್‍ಕುಮಾರ್ ತಿಳಿಸಿದರು. ಕರ್ನಾಟಕ ಪತ್ರಕರ್ತರ ಸಹಕಾರ ಸಂಘ, ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಸಂಭ್ರಮಾಚರಣೆ ನಿಮಿತ್ತ ಪತ್ರಕರ್ತರು ಮತ್ತು ಉದ್ಯಮ ಕುರಿತ ರಾಜ್ಯಮಟ್ಟದ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮುಂದಿನ ದಿನಗಳಲ್ಲಿ ಪತ್ರಕರ್ತರು ಉದ್ಯಮಿಯಾಗಿ ಬದಲಾಗುವ ಬಗ್ಗೆ ಎಲ್ಲಾ ಆಯಾಮಗಳಿಂದಲೂ ಸಾಕಷ್ಟು ಚರ್ಚೆಯಾಗಬೇಕು. ತಮ್ಮ ಪರಿದಿಯಲ್ಲಿ ಸಾಧ್ಯವಿರುವ ಎಲ್ಲಾ ರೀತಿಯ ಸಹಾಯವನ್ನು ಮಾಡಲು ಸಿದ್ಧವಿರುವುದಾಗಿ ಹೇಳಿದರು. ಪತ್ರಕರ್ತರನ್ನು ಉದ್ಯಮಿ ಗಳನ್ನಾಗಿ ನೋಡಲು ಊಹಿಸು ವುದು ಕಷ್ಟವಾಗುತ್ತದೆ. ಏಕೆಂದರೆ ನಿರ್ಭೀತಿಯಿಂದ ಹಲವು ಸಂಗತಿಗಳನ್ನು ಬಯಲಿಗೆಳೆ ಯುವುದು ಪತ್ರಕರ್ತರು. ಆದರೆ, ಉದ್ಯಮದಲ್ಲಿ ಲಾಭ, ನಷ್ಟದ ಜತೆಗೆ ಉದ್ಯಮದ ಬೆಳವಣಿಗೆಯತ್ತ ಗಮನ ಹರಿಸಲಾಗುತ್ತದೆ ಎಂದರು.

ಪತ್ರಕರ್ತರು ತಮ್ಮ ಶಕ್ತಿಯನ್ನು ಉದ್ಯಮವಾಗಿ ಮಾರ್ಪಡಿಸುವ ದಿನಗಳು ಮುಂದೆ ಬರಬಹುದು. ಇದಕ್ಕೆ ಸಾಕಷ್ಟು ಕಸರತ್ತು, ಮಾರ್ಗದರ್ಶನದ ಅಗತ್ಯವಿದೆ. ಈ ರೀತಿಯ ಚರ್ಚೆಗೆ ನಾಂದಿ ಹಾಡಿರುವುದು ಆರೋಗ್ಯರ ಬೆಳವಣಿಗೆ. ಏಕೆಂದರೆ ಪತ್ರಕರ್ತರ ಪರಿಸ್ಥಿತಿ ತುಂಬಾ ಕಷ್ಟದಲ್ಲಿದೆ. ಅದರಲ್ಲೂ ವಿದ್ಯುನ್ಮಾನ ಮಾಧ್ಯಮದ ಪತ್ರಕರ್ತರ ಸಂಕಷ್ಟ ಗಳು ಏನೆಂಬುದರ ಅರಿವಿದೆ. ಉದ್ಯಮ ಸ್ಥಾಪಿಸಲು ಸಾಕಷ್ಟು ಅವಕಾಶ ಇರುವಂತೆಯೇ ಸವಾಲುಗಳೂ ಇವೆ. ಈ ಬಗ್ಗೆ ಸಾಕಷ್ಟು ಮಾರ್ಗದರ್ಶನದ ಅಗತ್ಯವಿದೆ ಎಂದು ಹೇಳಿದರು.

ಎಂಎಸ್‍ಎಂಇ ಹೆಚ್ಚುವರಿ ನಿರ್ದೇಶಕ ಹೊನ್ನಮಾನೆ ಅವರು ಉದ್ಯಮ ಸ್ಥಾಪನೆಗೆ ಇರುವ ಸರ್ಕಾರದ ಸೌಲಭ್ಯಗಳು ಕುರಿತು ಮಾತನಾಡಿ, ಪ್ರಧಾನಮಂತ್ರಿ ಉದ್ಯೋಗ ಸೃಜನೆ ಯೋಜನೆಯಡಿ 25 ಲಕ್ಷ ದವರೆಗೂ ಉದ್ಯಮ ಸ್ಥಾಪನೆ ಮಾಡಲು ಅವಕಾಶವಿದೆ. 18 ವರ್ಷ ಮೇಲ್ಪಟ್ಟವರು ನಗರ ಮತ್ತು ಗ್ರಾಮೀಣ ಪ್ರದೇಶ ಎರಡರಲ್ಲೂ ಉದ್ಯಮವನ್ನು ಸ್ಥಾಪಿಸಬಹುದಾಗಿದೆ. ಶೇ.35ರವರೆಗೂ ಸಹಾಯಧನದ ಸೌಲಭ್ಯವಿದೆ.

ಅದೇ ರೀತಿ ಮುಖ್ಯಮಂತ್ರಿಗಳ ಉದ್ಯೋಗ ಸೃಜನೆ ಯೋಜನೆಯಲ್ಲಿ 18ರಿಂದ 30 ವರ್ಷದ ವಯೋಮಾನದವರು ಗ್ರಾಮೀಣ ಭಾಗದಲ್ಲಿ ಉದ್ದಿಮೆ ಪ್ರಾರಂಭಿಸಬಹುದು. ಶೇ.30 ರವರೆಗೂ ಸಹಾಯಧನವಿದ್ದು, ಅತಿ ಸಣ್ಣ ಕೈಗಾರಿಕೆಗೆ ಶೇ.5ರ ಬಡ್ಡಿದರದಲ್ಲಿ ಸಹಾಯ ಧನ ಇದೆ ಎಂದು ತಿಳಿಸಿದರು.

ಎಫ್‍ಕೆಸಿಸಿಐನ ಮಾಜಿ ಅಧ್ಯಕ್ಷ ತಲ್ಲಂ ವೆಂಕಟೇಶ್ ಪತ್ರಕರ್ತರಿಗೆ ಮಾಧ್ಯಮ ಕ್ಷೇತ್ರದಲ್ಲಿ ಉದ್ಯಮ ಸ್ಥಾಪಿಸಲು ಇರುವ ಅವಕಾಶ ಕುರಿತು ಮಾತನಾಡಿ, ಪತ್ರಕರ್ತರು ಉದ್ಯೋಗಿ ಆಗಬೇಡಿ. ಉದ್ಯಮಿಯಾಗಿ ಇದಕ್ಕೆ ಸಾಕಷ್ಟು ಅವಕಾಶವಿದ್ದು, ಸಮುದಾಯಕ್ಕೆ ಒಳ್ಳೆಯದಾಗುವ ರೀತಿಯಲ್ಲಿ ಯೋಚಿಸಿ ಉದ್ಯಮ ಪ್ರಾರಂಭಿಸಬೇಕು. ಸೇವಾ ಕ್ಷೇತ್ರದಲ್ಲಿ ಹÉಚ್ಚಿನ ಅವಕಾಶಗಳೂ ಇವೆ ಎಂದು ಮಾಹಿತಿ ನೀಡಿದರು.

ಎಫ್‍ಕೆಸಿಸಿಐ ಅಧ್ಯಕ್ಷ ಸಿ.ಆರ್. ಜನಾರ್ಧನ್, ಹಿರಿಯ ಉಪಾಧ್ಯಕ್ಷ ಪೆರಿಕಲ್ ಸುಂದರ್, ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಆರ್.ರಾಜು, ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಎಂ.ಎಸ್.ರಾಜೇಂದ್ರಕುಮಾರ್, ಉಪಾಧ್ಯಕ್ಷ ಎಸ್.ಲಕ್ಷ್ಮಿನಾರಾಯಣ, ಖಜಾಂಚಿ ಯತಿರಾಜು ಉಪಸ್ಥಿತರಿದ್ದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ