ನಶಿಸಿ ಹೋಗುತ್ತಿದ್ದ ಶಾಲೆಗೆ ಸಚಿವ ಸುರೇಶ್‍ಕುಮಾರ್ ಭೇಟಿ

ಈ ಸುದ್ದಿಯನ್ನು ಶೇರ್ ಮಾಡಿ

ದಾಬಸ್‍ಪೇಟೆ, ಸೆ.3- ಶಾಲೆ ಉಳಿಸಿಕೊಡುವಂತೆ ಹಳೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಮಾಡಿದ್ದ ಮನವಿ ಮೇರೆಗೆ ಪಟ್ಟಣದಲ್ಲಿರುವ ಸಿವಿಜಿ ಗ್ರಾಮಾಂತರ ಪ್ರೌಢಶಾಲೆಗೆ ಖುದ್ದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್‍ಕುಮಾರ್ ಭೇಟಿ ನೀಡಿ ಶಾಲಾ ಶಿಕ್ಷಕರು, ಜನಪ್ರತಿನಿಧಿಗಳು, ಹಳೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರೊಂದಿಗೆ ಚರ್ಚಿಸಿದರು.

ಅತ್ಯಂತ ಭವ್ಯವಾಗಿದ್ದ ಈ ಶಾಲೆ ಇಂದು ವ್ಯವಸ್ಥಾಪಕ ಆಡಳಿತ ಮಂಡಳಿ ಹಾಗೂ ಶಿಕ್ಷಕರ ಕೊರತೆಯಿಂದಾಗಿ ನಶಿಸಿದೆ ಹಾಗೂ ಕೆಲವರು ಭೂಮಿಯನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳುವ ಉದ್ದೇಶದಿಂದ ಸಾವಿರಾರು ಮಕ್ಕಳಿಗೆ ಅಕ್ಷರದ ಬೆಳಕು ನೀಡಬೇಕಾದ ಶಾಲೆಯನ್ನು ಮುಚ್ಚಲು ಆಡಳಿತ ಮಂಡಳಿ ಪ್ರಯತ್ನಿಸುತ್ತಿರುವ ವಿಷಯ ಕೇಳಿ ನನಗೆ ನೋವಾಗಿದೆ ಎಂದು ಶಾಲಾ ಆಡಳಿತ ಮಂಡಳಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಮುಂದಿನ ವಾರ ಈ ಶಾಲೆ ಉಳಿಸಿಕೊಳ್ಳುವ ಬಗ್ಗೆ ಕಾನೂನು ತಜ್ಞರ ಬಳಿ ಹಾಗೂ ಶಿಕ್ಷಣ ಇಲಾಖೆಯ ಬಳಿ ಚರ್ಚಿಸುತ್ತೇನೆ. ಅನಂತರ ಬಿಇಒ, ಡಿಡಿಪಿಐ ಹಾಗೂ ಹಳೆ ವಿದ್ಯಾರ್ಥಿಗಳು, ಜನಪ್ರತಿನಿದಿಗಳ ಸಭೆ ಕರೆದು ಮಾತನಾಡಿ ಶಾಲೆ ಉಳಿವಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

ಜಿ.ಪಂ. ಸದಸ್ಯ ನಂಜುಂಡಪ್ಪ ಮಾತನಾಡಿ, ದಾಬಸ್‍ಪೇಟೆಯಲ್ಲಿನ ಸಿ.ವಿ.ಜಿ. ಗ್ರಾಮಾಂತರ ಪ್ರೌಢಶಾಲೆಯನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದೆಂದು ಮನವಿ ಮಾಡಿದರು. ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಮಂಜುನಾಥ್ ಮಾತನಾಡಿ, ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಲ್ಲಿ ಪರಿಶಿಷ್ಟ ಜÁತಿ ಮತ್ತು ವರ್ಗ ಹಾಗೂ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯದ ಮಕ್ಕಳೆ ಶೇ.90ರಷ್ಟು ಇದ್ದು ವಿಶೇಷವಾಗಿ ಹೆಣ್ಣು ಮಕ್ಕಳೇ ಇದ್ದಾರೆ. ಹಾಗಾಗಿ ಶಾಲೆ ಉಳಿಸಿಕೊಡಬೇಕು ಎಂದು ಕೋರಿದರು.

ತಾ.ಪಂ.ಸದಸ್ಯ ಜಿ.ಪ್ರಕಾಶ್, ಡಿಡಿಪಿಐ ಗಂಗಮಾರೇಗೌಡ, ಬಿಇಒ ರಮೇಶ್, ಹಳೆ ವಿದ್ಯಾರ್ಥಿಗಳಾದ ನಟರಾಜು, ಪ್ರಕಾಶ್‍ಸಿಂಹ, ಅಶೋಕ್, ವಸಂತ, ಎಚ್.ಕೆ.ರವೀಶ್, ಜಗದೀಶ್, ಶಶಿಕಲಾ ಸೇರಿದಂತೆ ಶಿಕ್ಷಕರು, ಹಳೆ ವಿದ್ಯಾರ್ಥಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

Facebook Comments