ಕೇಂದ್ರ ಸರ್ಕಾರದ ನಿರ್ಧಾರದ ನಂತರ ಶಾಲೆ ಆರಂಭ : ಸುರೇಶ್ ಕುಮಾರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.11- ಕೇಂದ್ರ ಸರ್ಕಾರ ತೀರ್ಮಾನ ಮಾಡಿದ ನಂತರ ರಾಜ್ಯದಲ್ಲಿ ಶಾಲೆಗಳನ್ನು ಪ್ರಾರಂಭ ಮಾಡುವ ಬಗ್ಗೆ ಸರ್ಕಾರ ಸೂಕ್ತ ಹೆಜ್ಜೆ ಇಡಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ವಿಧಾನ ಸೌಧದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಕ್ಕಳು, ಪೋಷಕರು ಸೇರಿದಂತೆ ಎಲ್ಲರೂ ಶಾಲೆ ಯಾವಾಗ ಪ್ರಾರಂಭವಾಗುತ್ತದೆ ಎಂಬ ಪ್ರಶ್ನೆ ಕೇಳುತ್ತಾರೆ. ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಸಾಕಷ್ಟು ಆತಂಕವೂ ಇದೆ.

ಕೇಂದ್ರ ಸರ್ಕಾರ ತೀರ್ಮಾನ ಮಾಡಿದ ನಂತರ ರಾಜ್ಯ ಸರ್ಕಾರ ಸೂಕ್ತ ಹೆಜ್ಜೆ ಇಡಲಿದೆ ಎಂದ ಅವರು, 36 ವರ್ಷಗಳ ನಂತರ ರಾಷ್ಟ್ರೀಯ ಶಿಕ್ಷಣ ನೀತಿ ಬಂದಿದೆ ಇದರ ಬಗ್ಗೆ ಚರ್ಚೆ ಸಮಾಲೋಚನೆಗಳು ನಡೆಯುತ್ತಿವೆ. ಪ್ರಧಾನಿಯವರು ಹೇಳುವಂತೆ ಶಿಕ್ಷಣದ ನೀತಿ ಸರ್ಕಾರದ ನೀತಿಯಲ್ಲ. ನಮ್ಮ ಶಿಕ್ಷಣದ ರೀತಿಯಾಗಿದೆ. ರಕ್ಷಣಾ ನೀತಿ ಹೇಗೆ ದೇಶದ ನೀತಿಯಾಗುತ್ತಿಯೋ ಇದು ಹಾಗೆಯೇ ಎಂದರು.

ಒಳ್ಳೆಯ ಶಿಕ್ಷಣ ನೀಡುವ ದೊಡ್ಡ ಜವಾಬ್ದಾರಿ ಶಿಕ್ಷಕರ ಮೇಲಿದೆ. ಸವಾಲನ್ನು ಎದುರಿಸಿದ ರೀತಿಯಲ್ಲಿ ಇದನ್ನು ಮಾಡೋಣ. ಈಗಾಗಲೇ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಆರಂಭವಾಗಿದೆ ಎಂದು ತಿಳಿಸಿದರು. ಶಾಲೆಗಳಲ್ಲಿ ಮಕ್ಕಳ ಸ್ನೇಹಿ ಕಾರ್ಯಕ್ರಮ ತಂದಿದ್ದೇವೆ. ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳುವ ಭರವಸೆ ನೀಡುತ್ತೇವೆ.

ಭಾರತರತ್ನ ಡಾ. ರಾಧಾಕೃಷ್ಣನ್ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯೋಣ. ಕೊರೊನಾದಿಂದಾಗಿ ಸಂಭ್ರಮದಿಂದ ನಡೆಯಬೇಕಿದ್ದ ಶಿಕ್ಷಕರ ದಿನಾಚರಣೆ ಸರಳವಾಗಿ ನಡೆಯುತ್ತಿದೆ ಎಂದು ಹೇಳಿದರ. ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದ್ದು, ಶಿಕ್ಷಣ ಇಲಾಖೆ ಜಾರಿಗೆ ತಂದ ವಿದ್ಯಾಗಮ ಕಾರ್ಯಕ್ರಮ ದೇಶದ ಗಮನ ಸೆಳೆದಿದೆ ಎಂದು ಮಾಹಿತಿ ನೀಡಿದರು.

ಸುಮಾರು 3.5 ಲಕ್ಷ ಖಾಸಗಿ ಅನುದಾನ ರಹಿತ ಶಿಕ್ಷಕರು ಕಳೆದ 4 ತಿಂಗಳಿನಿಂದ ಸಂಕಷ್ಟದಲ್ಲಿದ್ದಾರೆ. ಅವರಿಗೆ ನೆರವು ನೀಡಲು ಮುಂದಾಗಿದ್ದೇವೆ. ಈ ನಿಟ್ಟಿನಲ್ಲಿ ಸರ್ಕಾರ ನೆರವಿಗೆ ಬರಲಿದೆ ಎಂದರು. ರಾಷ್ಟ್ರದ ಉತ್ತಮ ಶಿಕ್ಷಕ ಪ್ರಶಸ್ತಿಗೆ ರಾಜ್ಯದ ಮೂವರು ಭಾಜನಾರಾಗಿರುವುದು ಹೆಮ್ಮೆ ತಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Facebook Comments