ಸೆ.21ರಿಂದ ತರಗತಿ ಪ್ರಾರಂಭ, ಶಿಕ್ಷಕರ ಹಾಜರಿ ಕಡ್ಡಾಯ…!

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಸೆ.18- ಶಾಲೆಗಳನ್ನು ಪ್ರಾರಂಭಿಸಲು ಕೇಂದ್ರ ಸರ್ಕಾರದಿಂದ ನಮಗೆ ಇನ್ನೂ ನಿರ್ದೇಶನ ಬಂದಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್‍ಕುಮಾರ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೆ.21ರಿಂದ 9ನೇ ತರಗತಿಯಿಂದ 12ನೇ ತರಗತಿಯವರೆಗೆ ವಿಶೇಷ ತರಗತಿಗಳು ಮಾತ್ರ ನಡೆಯುತ್ತವೆ. ಶಾಲೆಗೆ ಬರುವ ವಿದ್ಯಾರ್ಥಿಗಳು ಪೋಷಕರ ಒಪ್ಪಿಗೆ ಪತ್ರವನ್ನು ಕಡ್ಡಾಯವಾಗಿ ತರಬೇಕು ಎಂದರು.

ಸೆ.21ರಿಂದ ತರಗತಿ ಪ್ರಾರಂಭವಾಗುವ ಸಂದರ್ಭದಲ್ಲಿ ಶಿಕ್ಷಕರು, ಉಪನ್ಯಾಸಕರು ಕಡ್ಡಾಯವಾಗಿ ಹಾಜರಿರಬೇಕು ಎಂದು ಸುರೇಶ್‍ಕುಮಾರ್ ತಿಳಿಸಿದರು. ವಿದ್ಯಾರ್ಥಿಗಳಿಗೆ ಪಠ್ಯದ ಬಗ್ಗೆ ಯಾವುದೇ ಗೊಂದಲವಿದ್ದರೆ ಅದನ್ನು ಪರಿಹರಿಸಿಕೊಳ್ಳಲು ಮಾತ್ರ ಅವಕಾಶ ಇರುತ್ತದೆ. ಆದರೆ, ಪಾಠ, ಪ್ರವಚನ ಇರುವುದಿಲ್ಲ. ಶಾಲೆಗೆ ಬರುವುದು ಬಿಡುವುದು ಅವರಿಗೆ ಬಿಟ್ಟ ವಿಚಾರ. ಕಡ್ಡಾಯ ಖಂಡಿತಾ ಇಲ್ಲ ಎಂದು ಸ್ಪಷ್ಟಪಡಿಸಿದರು.

ಕೇಂದ್ರ ಸರ್ಕಾರದ ಸೂಚನೆ ನಂತರವಷ್ಟೇ ಶಾಲೆಗಳ ಪುನರಾರಂಭದ ಬಗ್ಗೆ ತೀರ್ಮಾನಿಸಲಾಗುವುದು ಎಂದು ಹೇಳಿದರು.  ಕೊರೊನಾ ಕಾಣಿಸಿಕೊಂಡು ಲಾಕ್‍ಡೌನ್ ಜಾರಿಯಾದ ನಂತರ ಇದುವರೆಗೂ ಶಾಲಾ-ಕಾಲೇಜುಗಳು ಆರಂಭಗೊಂಡಿಲ್ಲ. ಶಾಲೆ ಆರಂಭವಾಗದ ಹಿನ್ನೆಲೆಯಲ್ಲಿ 7,8,9ನೆ ತರಗತಿ ವಿದ್ಯಾರ್ಥಿಗಳನ್ನು ಪರೀಕ್ಷೆ ಬರೆಯದೆ ಪಾಸ್ ಮಾಡಲಾಗಿತ್ತು.

ಜೂನ್‍ನಿಂದ ಶಾಲಾ-ಕಾಲೇಜು ಆರಂಭವಾಗಬಹುದು ಎಂಬ ನಿರೀಕ್ಷೆ ಇದ್ದ ವಿದ್ಯಾರ್ಥಿಗಳಿಗೆ ಆಘಾತ ಎದುರಾಯಿತು. ಕೊರೊನಾ ಮಹಾಮಾರಿಯ ಅಟ್ಟಹಾಸ ಮುಂದುವರಿದ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳನ್ನು ಆರಂಭಿಸಲು ಸರ್ಕಾರ ಅನುಮತಿ ನೀಡಲಿಲ್ಲ.

ಆದರೆ, ಖಾಸಗಿ ಶಾಲಾ ಆಡಳಿತ ಮಂಡಳಿಗಳು ಈಗಾಗಲೇ ವಿದ್ಯಾರ್ಥಿಗಳಿಗೆ ಆನ್‍ಲೈನ್ ತರಗತಿಗಳನ್ನು ಆರಂಭಿಸಿದೆ. ಆನ್‍ಲೈನ್ ಶಿಕ್ಷಣ ವಿದ್ಯಾರ್ಥಿಗಳಿಗೆ ವರದಾನವಾಗುವುದೋ ಅಥವಾ ಅಡ್ಡದಾರಿ ತೋರಿಸುವುದೋ ಎಂಬ ಆತಂಕದಲ್ಲಿ ಪೋಷಕರಿದ್ದರು.  ಇದರ ಬೆನ್ನಲ್ಲೇ ಶಿಕ್ಷಣ ಸಚಿವರು 9 ರಿಂದ 12ನೆ ತರಗತಿಗಳ ವಿದ್ಯಾರ್ಥಿಗಳಿಗೆ ಸೆ.21ರಿಂದ ವಿಶೇಷ ತರಗತಿ ನಡೆಸಲು ತೀರ್ಮಾನಿಸಿರುವುದು ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ನೆಮ್ಮದಿ ತರಿಸಿದೆ.

Facebook Comments