ನನ್ನ ಮೇಲೆ ವಿಶ್ವಾಸವಿಟ್ಟು ಮುಷ್ಕರ ಕೈಬಿಡಿ: ಶಿಕ್ಷಕರಿಗೆ ಸಚಿವ ಸುರೇಶ್‍ ಕುಮಾರ್ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.17- ನನ್ನ ಮೇಲೆ ನೀವು ಭರವಸೆ ಇಡುವುದಾದರೆ ತಕ್ಷಣವೇ ನಿಮ್ಮ ಹೋರಾಟವನ್ನು ಕೈಬಿಡಿ ಎಂದು ಧರಣಿನಿರತ ಪಿಯು ಉಪನ್ಯಾಸಕರಲ್ಲಿ ಶಿಕ್ಷಣ ಸಚಿವ ಸುರೇಶ್‍ಕುಮಾರ್ ಮನವಿ ಮಾಡಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು, ನಿಮ್ಮ ಪ್ರತಿಭಟನೆ ಇನ್ನೂ ಮುಂದುವರೆದಿರುವುದು ನಿಜಕ್ಕೂ ನನಗೆ ವೇದನೆಯಾಗಿದೆ.

ಇಷ್ಟೆಲ್ಲಾ ಮನವಿಗಳ ಬಳಿಕವೂ ಹೀಗೆ ಹಠ ಮಾಡುವುದು ಒಳಿತಲ್ಲ. ನನಗೆ ವೈದ್ಯರು ಅನುಮತಿ ಕೊಟ್ಟಿದ್ದರೆ ನಾನೇ ತಮ್ಮನ್ನೆಲ್ಲಾ ಬಂದು ಭೇಟಿ ಮಾತನಾಡುತ್ತಿದ್ದೆ. ಆದರೆ ಅದಕ್ಕೆ ಈಗ ಅವಕಾಶವಿಲ್ಲ ಅಂತ ತಿಳಿಸಿದ್ದಾರೆ. ನೇಮಕಾತಿ ಎಷ್ಟು ವರ್ಷಗಳಿಂದ ಬಾಕಿಯಿತ್ತು, ಅದು ಈ ಹಂತದವರೆಗೆ ಬರುವಲ್ಲಿ ನಾನು ನಿಮಗೆ ಎಷ್ಟು ಸಹಕರಿಸಿದ್ದೇನೆಂಬ ವಿಷಯ ನಿಮಗೆಲ್ಲಾ ತಿಳಿದಿದೆ.

ಸಚಿವನಾಗಿ ಖಾತೆ ಹಂಚಿಕೆಗೂ ಮುನ್ನವೇ ಕಳೆದ ಆ.21ರಂದು ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಚರ್ಚಿಸಿ ನಾನು ನೀಡಿದ ಸೂಚನೆಗಳು, ನಂತರ ಉದ್ಭವವಾದ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ನಾನು ತೆಗೆದುಕೊಂಡ ಕ್ರಮಗಳು, ಕಡೆಗೆ ಕೌನ್ಸೆಲಿಂಗ್ ನಡೆಸುವ ಪ್ರಕ್ರಿಯೆ ಹೀಗೆ ಪ್ರತಿ ಬಾರಿ ನಿಮಗೆ ಒಳಿತಾಗಲೆಂಬ ಆಶಯವಷ್ಟೇ ನನ್ನಲ್ಲಿ ಇತ್ತು ಎಂದು ಹೇಳಿದ್ದಾರೆ.

ಕೊರೊನಾ ಮಹಾಮಾರಿ ನಮ್ಮ ಶೈಕ್ಷಣಿಕ ಚಟುವಟಿಕೆ ಹಾಗೂ ಆರ್ಥಿಕತೆಯ ಮೇಲೆ ಪರಿಣಾಮ ಬೀರಿದೆ. ಬೇರಾವ ಇಲಾಖೆಗಳ ನೇಮಕಾತಿಗೆ ಇಂದು ನಮ್ಮ ಸರ್ಕಾರ ಅನುಮತಿಸಿಲ್ಲ. ನಿಮ್ಮದೊಂದು ವಿಶೇಷ ಪ್ರಕರಣವೆಂಬಂತೆ ಮುಖ್ಯಮಂತ್ರಿ ಹಾಗೂ ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸಿ ಶಾಲಾಕಾಲೇಜು ಪ್ರಾರಂಭದ ಬಳಿಕ ನೇಮಕಾತಿ ಆದೇಶ ಹೊರಡಿಸುವ ಅನುಮತಿ ಪಡೆದಿದ್ದೇನೆ ಎಂದಿದ್ದಾರೆ.

ಉಪಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ ಅವರು ಇದೆಲ್ಲವನ್ನೂ ನಿಮಗೆ ವಿವರಿಸಿದ್ದಾರೆ. ಆದರೂ ನೀವು ನೇಮಕಾತಿ ಆದೇಶ ನೀಡಬೇಕೆಂದು ಹಠ ಮಾಡುತ್ತಾ ಕೂರುವುದು ಒಳ್ಳೆಯದಲ್ಲ, ಹೋರಾಟ ತಾರ್ಕಿಕವಾಗಿರಬೇಕು. ಎಲ್ಲ ಭರವಸೆಗಳು ದೊರೆತ ನಂತರವೂ ಹಠ ಹಿಡಿಯುವುದು ಹೋರಾಟದ ಅರ್ಥ ಕಳೆದುಕೊಳ್ಳುವ ಹಾಗೆ ಮಾಡುತ್ತದೆ ಎಂದು ತಿಳಿಸಿದ್ದಾರೆ.

ಹೆಣ್ಣುಮಕ್ಕಳೂ ಪ್ರತಿಭಟನೆಯಲ್ಲಿದ್ದೀರಿ. ಸಾಂಕ್ರಾಮಿಕದ ಸಂದರ್ಭದಲ್ಲಿ ಎಲ್ಲರ ಆರೋಗ್ಯ ಸೂಕ್ಷ್ಮ ಸ್ಥಿತಿಯಲ್ಲಿ ಇರುತ್ತದೆ. ಯಾರಿಗೂ ಸಮಸ್ಯೆಯಾಗಬಾರದು. ಜೀವದ ಬೆಲೆ ದೊಡ್ಡದು. ನೀವೆಲ್ಲಾ ಇನ್ನೂ ಯುವಕರು, ವಿಶೇಷವಾಗಿ ಗುರು ಸ್ಥಾನವನ್ನು ಅಲಂಕರಿಸುವವರು. ಹತ್ತಾರು ವರ್ಷ ಇಲಾಖೆಯ ಸೇವೆ ಮಾಡಬೇಕಾದವರು, ಸಾವಿರಾರು, ಲಕ್ಷಾಂತರ ಯುವಕರಿಗೆ ದಾರಿದೀಪವಾಗಬೇಕಾದವರು ಹೀಗೆಲ್ಲಾ ಪ್ರತಿಭಟನೆ ಮಾಡಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.

ನೇಮಕಾತಿ ಆದೇಶ ನೀಡುವುದರ ಕುರಿತು ನನ್ನ ಮೇಲೆ ನೀವು ಭರವಸೆ ಇಡುವುದಾದಲ್ಲಿ ತಕ್ಷಣವೇ ಈ ಹೋರಾಟವನ್ನ ಕೈಬಿಡಿ. ನಿಮ್ಮ ಬಗ್ಗೆ ಇನ್ನಷ್ಟು ಪ್ರೀತಿಯಿಂದ, ಆಸ್ಥೆಯಿಂದ ಮುಂದಿನ ಕೆಲಸಗಳನ್ನು ಮಾಡಲು ಅದು ನನಗೆ ಶಕ್ತಿ ತುಂಬುತ್ತದೆ ಎಂದು ಸುರೇಶ್‍ಕುಮಾರ್ ಉಪನ್ಯಾಸಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

Facebook Comments