ಹೋಮ್‍ಕ್ವಾರಂಟೈನ್ ನಲ್ಲಿ ಸಚಿವ ಸುರೇಶ್‍ಕುಮಾರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.18- ಕಳೆದ 13 ದಿನಗಳಿಂದ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್‍ಕುಮಾರ್ ಅವರ ಆರೋಗ್ಯ ಸುಧಾರಿಸಿದ್ದು, ಹೋಮ್‍ಕ್ವಾರಂಟೈನ್ ನಿಗಾ ವ್ಯವಸ್ಥೆಯಲ್ಲಿದ್ದಾರೆ.

ಈ ಬಗ್ಗೆ ಖುದ್ದಾಗಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅವರು, ಅ.5ರಂದು ನನಗೆ ಕೊರೋನಾ ಸೋಂಕು ತಗುಲಿದೆ ಎಂದು ತಿಳಿದ ನಂತರ ಬಿಬಿಎಂಪಿ ವೈದ್ಯರ ತಂಡದ ಸಲಹೆಯಂತೆ ನಾನು ಮನೆಯಲ್ಲಿಯೇ ಹೋಂ ಐಸೋಲೇಷನ್ ನಲ್ಲಿದ್ದು. ವೈದ್ಯರು ಸೂಚಿಸಿದ ಔಷಧಗಳನ್ನು ತೆಗೆದುಕೊಳ್ಳುತ್ತಿದ್ದು. ಆದರೆ, ಅ.10 ರಂದು ಮನೆಗೆ ಬಂದ ವೈದ್ಯರೊಬ್ಬರು ನನ್ನ ಉಸಿರಾಟದಲ್ಲಿ ವ್ಯತ್ಯಾಸವನ್ನು ಗಮನಿಸಿ ತಕ್ಷಣ ಪರೀಕ್ಷೆಗೆ ಒಳಗಾಗ ಬೇಕೆಂದು ಆಗ್ರಹಿಸಿದ್ದರು.

ಅವರ ಸೂಚನೆ ಮೇರೆಗೆ ನಾನು ಅವರೊಡನೇ ಹೋಗಿ ಶ್ವಾಸಕೋಶದ ಸಿಟಿ ಸ್ಕ್ಯಾನ್ ಗೆ ಒಳಗಾದೆ. ಆಗ ನನ್ನ ಶ್ವಾಸಕೋಶಕ್ಕೆ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿಯೇ ಸೋಂಕು ಹರಡಿದೆ ಎಂದು ತಿಳಿದುಬಂತು. ಕಳೆದ ಎಂಟು ದಿನಗಳಿಂದ ನನಗೆ ಎಲ್ಲಾ ರೀತಿಯ ಚಿಕಿತ್ಸೆ ನೀಡಿ, ಶುಶ್ರೂಷೆ ಮಾಡಿ ನಾನು ಗುಣಮುಖನಾಗಲು ಸಹಕರಿಸಿದ ಡಾ. ಶಶಾಂಕ್, ಡಾ. ಶ್ರೀನಾಥ್, ಡಾ. ಪೂರ್ಣ ಪ್ರಸಾದ್, ಡಾ. ಕೃಪೇಶ್ ಮತ್ತು ಎಲ್ಲಾ ದಾದಿಯರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ತಿಳಿಸುತ್ತಿದ್ದೇನೆ ಎಂದಿದ್ದಾರೆ.

ನನಗೆ ಇನ್ನೂ ಎರಡು ವಾರಗಳ ಕಾಲ ಮನೆಯಿಂದ ಹೊರ ಹೋಗಬಾರದು ಎಂಬ ಷರತ್ತಿನ ಮೇಲೆ ನನ್ನನ್ನು ಬಿಡುಗಡೆ ಮಾಡಿದ್ದಾರೆ. ನಾನು ವೈದ್ಯರ ಸಲಹೆ ಪಾಲಿಸುತ್ತೇನೆ ಎಂದು ಮಾತು ಕೊಟ್ಟು ಮನೆ ಸೇರಿದ್ದೇನೆ. ಮನೆಯಲ್ಲಿ ಕೆಲ ಚಿಕಿತ್ಸೆ ಮುಂದುವರೆಯಲಿದೆ ಎಂದು ಸುರೇಶ್‍ಕುಮಾರ್ ಹೇಳಿಕೊಂಡಿದ್ದಾರೆ.

Facebook Comments