ಸರ್ಕಾರಿ ಶಾಲಾ, ಕಾಲೇಜುಗಳ ಆಸ್ತಿ ರಕ್ಷಣೆಗೆ ಬದ್ಧ : ಸಚಿವ ಸುರೇಶ್‍ಕುಮಾರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಮಾ.15- ರಾಜ್ಯದಲ್ಲಿರುವ ಎಲ್ಲಾ ಸರ್ಕಾರಿ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳ ಆಸ್ತಿಗಳನ್ನು ದಾಖಲಾತಿ ಅನುಸಾರ ಕ್ರಮಬದ್ಧಗೊಳಿಸಲು ಮೂರು ತಿಂಗಳ ಒಳಗಾಗಿ ಕ್ರಮ ಕೈಗೊಳ್ಳುವುದಾಗಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್‍ಕುಮಾರ್ ವಿಧಾನಪರಿಷತ್‍ನಲ್ಲಿ ಹೇಳಿದ್ದಾರೆ.  ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್‍ನ ಕಾಂತರಾಜು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ರಾಜ್ಯದಲ್ಲಿ 20751 ಕಿರಿಯ ಪ್ರಾಥಮಿಕ ಶಾಲೆಗಳು, 22499 ಹಿರಿಯ ಪ್ರಾಥಮಿಕ ಶಾಲೆಗಳು, 4727 ಸರ್ಕಾರಿ ಪ್ರೌಢಶಾಲೆಗಳು, 1234 ಪದವಿ ಪೂರ್ವ ಕಾಲೇಜುಗಳಿವೆ.

ಇವುಗಳ ಆಸ್ತಿಯನ್ನು ರಕ್ಷಣೆ ಮಾಡಲು ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಯನ್ನು ಎಸ್ಟೇಟ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ಅವರು ಶಾಲೆಗಳ ಜಾಗಗಳ ಅಸೆಸ್ಮೆಂಟ್ ರಿಜಿಸ್ಟ್ರಾರನ್ನು ನಿರ್ವಹಣೆ ಮಾಡುತ್ತಿದ್ದಾರೆ. ಈವರೆಗೂ 26 ಸಾವಿರ ಜಾಗಗಳ ಮಾಹಿತಿಯನ್ನು ಕ್ರಮಬದ್ಧಗೊಳಿಸಲಾಗಿದೆ ಎಂದರು. ಬಾಕಿ ಇರುವ ಎಲ್ಲಾ ಆಸ್ತಿಗಳ ಮಾಹಿತಿಯನ್ನು ಮೂರು ತಿಂಗಳ ಒಳಗಾಗಿ ಪಡೆದು ಕ್ರಮಬದ್ಧಗೊಳಿಸಲಾಗುವುದು ಎಂದು ಹೇಳಿದರು.

ಇದಕ್ಕೂ ಮುನ್ನ ಪ್ರಶ್ನೆ ಕೇಳಿದ ಕಾಂತರಾಜು, ಸರ್ಕಾರಿ ಶಾಲೆಗಳಿಗೆ ಬಹಳಷ್ಟು ಮಂದಿ ಜಮೀನು ದಾನ ನೀಡಿದ್ದಾರೆ. ಕೆಲವು ಕಡೆ ದೇವಸ್ಥಾನದ ಜಾಗಗಳು ಬಳಕೆಯಾಗುತ್ತಿವೆ. ಅದರ ದಾಖಲಾತಿಗಳ ನಿರ್ವಹಣೆ ಅಸಮರ್ಪಕವಾಗಿವೆ. ಸರ್ಕಾರ ದಾಖಲಾತಿಗಳನ್ನು ಕ್ರಮಬದ್ಧಗೊಳಿಸಬೇಕೆಂದು ಒತ್ತಾಯಿಸಿದರು. ಪ್ರತಿಪಕ್ಷದ ನಾಯಕ ಎಸ್.ಆರ್.ಪಾಟೀಲ್ ಅದಕ್ಕೆ ಬೆಂಬಲ ನೀಡಿ, ಬಹಳಷ್ಟು ಮಂದಿ ದಾನಿಗಳು ರಾಜ್ಯಪಾಲರ ಹೆಸರಿನಲ್ಲಿ ಶಾಲೆಗೆ ದಾನ ನೀಡಿರುತ್ತಾರೆ.

ಅದನ್ನು ಸರಿಯಾಗಿ ದಾಖಲೆಗಳನ್ನು ನಿರ್ವಹಣೆ ಮಾಡಿ ಬೇಲಿ ಹಾಕಿ ಜಾಗ ರಕ್ಷಣೆ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು. ಸದಸ್ಯ ಅರುಣ ಶಹಪುರ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವ ಸುರೇಶ್‍ಕುಮಾರ್ ಅವರು, 1995ರಿಂದ 2000ರ ನಡುವೆ ಆರಂಭವಾಗಿರುವ ಅನುದಾನ ರಹಿತ ಶಾಲಾ-ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸಲು ಆರ್ಥಿಕ ಇಲಾಖೆಯ ಜತೆ ಚರ್ಚೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

1995ರಿಂದ 2020ರ ನಡುವೆ 19656 ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ಶಿಕ್ಷಕರನ್ನು ನೇಮಿಸಲಾಗಿದೆ. ಇವರಿಗೆ ವಾರ್ಷಿಕ ವೇತನ ನೀಡುವುದಾದರೆ 81,965 ಲಕ್ಷ ರೂ.ಗಳ ವೆಚ್ಚ ತಗಲುತ್ತದೆ. ಪ್ರೌಢಶಾಲೆಗಳ 12031 ಶಿಕ್ಷಕರಿಗೆ, 981 ಬೋಧಕೇತರರಿಗೆ, 68221 ಲಕ್ಷ ರೂ., ಪಿಯು ಕಾಲೇಜಿನ 18750 ಉಪನ್ಯಾಸಕರಿಗೆ 3125 ದೈಹಿಕ ಶಿಕ್ಷಕರಿಗೆ, ದ್ವೀತಿಯ ದರ್ಜೆ ಸಹಾಕರಿಗೆ ಹಾಗೂ ಪ್ರಾಚಾರ್ಯರಿಗೆ ವೇತನ ನೀಡಲು 225 ಕೋಟಿ ರೂ.ಗಳಿಗೂ ಹೆಚ್ಚಿನ ಅನುದಾನ ಬೇಕಾಗುತ್ತದೆ ಎಂದು ಸಚಿವರು ವಿವರಣೆ ನೀಡಿದರು. ಹೀಗಾಗಿ ಸರ್ಕಾರ ಪರಿಶೀಲನೆ ನಡೆಸುತ್ತಿದೆ. ಆದ್ಯತೆ ಮೇರೆಗೆ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.

Facebook Comments