ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಪದವೀಧರ ಶಿಕ್ಷಕರೇ ಸಿಗುತ್ತಿಲ್ಲ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಮಾ.22- ರಾಜ್ಯ ಸರ್ಕಾರದ ಶಾಲೆಗಳಿಗೆ ಪದವೀಧರ ಪ್ರಾಥಮಿಕ ಶಿಕ್ಷಕರ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಅಭ್ಯರ್ಥಿಗಳೇ ಸಿಗುತ್ತಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್‍ಕುಮಾರ್ ವಿಷಾದಿಸಿದರು. ವಿಧಾನಪರಿಷತ್‍ನಲ್ಲಿ ಬಿಜೆಪಿ ಸದಸ್ಯರಾದ ಭಾರತಿ ಶೆಟ್ಟಿ ರಾಜ್ಯದ ವಿದ್ಯಾರ್ಥಿಗಳಿಗೆ ವಿಜ್ಞಾನ ಕಲಿಕೆಯ ಆಸಕ್ತಿಯ ಬಗ್ಗೆ ಪ್ರಶ್ನೆ ಕೇಳಿದರು. ಇದಕ್ಕೆ ಉತ್ತರಿಸಿದ ಸಚಿವರು, ಮೂಲ ವಿಜ್ಞಾನದ ಅಧ್ಯಯನದಲ್ಲಿ 6ರಿಂದ 8ನೇ ತರಗತಿಗೆ ನೇಮಿಸಬೇಕಾದ ಶಿಕ್ಷಕರ ಅರ್ಹತೆಯನ್ನು ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಪರಿಷತ್ ನಿಗದಿಪಡಿಸಿದೆ.

ಅದರಂತೆ 2014ರಲ್ಲಿ 10 ಸಾವಿರ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಲಾಗಿತ್ತು. 3,389 ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗಿದೆ. ಬಾಕಿ ಉಳಿದ 6611 ಹುದ್ದೆಗಳು ಜೊತೆಗೆ 4 ಸಾವಿರ ಹುದ್ದೆಗಳನ್ನು ಸೇರಿ ಒಟ್ಟು 10611 ಉದ್ದೇಶಿತ ಹುದ್ದೆಗಳ ಪೈಕಿ 10565 ಪದವೀಧರ ಪ್ರಾಥಮಿಕ ಶಿಕ್ಷಕರ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು 2019ರಂದು ಅಧಿಸೂಚನೆ ಹೊರಡಿಸಲಾಯಿತು. 1994 ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗಿದೆ. ಅರ್ಹ ಅಭ್ಯರ್ಥಿಗಳ ಕೊರತೆಯಿಂದ ನಿರೀಕ್ಷಿತ ಮಟ್ಟದಲ್ಲಿ ನೇಮಕಾತಿ ಆಗಿಲ್ಲ ಎಂದು ವಿವರಿಸಿದರು.

2019-20ನೇ ಸಾಲಿನಲ್ಲಿ 954 ಶಾಲೆಗಳಿಂದ 31,334 ವಿದ್ಯಾರ್ಥಿಗಳ ಮೌಲ್ಯಮಾಪನ ಮಾಡಿದಾಗ ಶೇ.24ರಷ್ಟು ಜ್ಞಾನಮಟ್ಟ ಇರುವುದು ತಿಳಿದುಬಂದಿದೆ. ವಿವಿಧ ರಚನಾತ್ಮಕ ಕ್ರಮಗಳನ್ನು ಕೈಗೊಂಡಿರುವ ಪ್ರಮಾಣ ಜ್ಞಾನದ ಮಟ್ಟ ಶೇ.13ರಷ್ಟು ಹೆಚ್ಚಾಗಿದೆ. ಪ್ರಸ್ತುತ ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಶೇ.37ರಷ್ಟು ಜ್ಞಾನಮಟ್ಟ ಇದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಪಕ್ಷದ ನಾಯಕ ಎಸ್.ಆರ್.ಪಾಟೀಲ್, ಯಾರನ್ನೇ ನೋಡಿದ ಇಂಜಿನಿಯರ್, ಐಪಿಎಸ್, ಐಎಎಸ್ ಆಗಬೇಕೆಂದು ಆಸೆಪಡುತ್ತಾರೆ. ಮೂಲ ವಿಜ್ಞಾನದಲ್ಲಿ ಆಸಕ್ತಿ ಬೆಳೆಸಲು ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದಾಗ, ಈ ನಿಟ್ಟಿನಲ್ಲಿ ಸರ್ಕಾರ ಪರಿಣಾಮಕಾರಿ ಕ್ರಮ ಕೈಗೊಳ್ಳುತ್ತಿದೆ ಎಂದು ಹೇಳಿದರು.

ಪದವೀಧರ ಕ್ಷೇತ್ರದ ಸದಸ್ಯರಾದ ಚಿದಾನಂದ.ಎಂ ಅವರು ಗಡಿ ಶಾಲೆಗಳ ಅಭಿವೃದ್ಧಿ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಗಡಿ ಅಭಿವೃದ್ಧಿ ಪ್ರಾಧಿಕಾರ ರಾಜ್ಯದಲ್ಲಿ 19 ಗಡಿ ಜಿಲ್ಲೆಗಳನ್ನು ಗುರುತಿಸಿದೆ. 59 ತಾಲ್ಲೂಕುಗಳಲ್ಲಿ 13,211 ಪ್ರಾಥಮಿಕ ಶಾಲೆಗಳು, 1384 ಪ್ರೌಢಶಾಲೆಗಳು ಸೇರಿ 14595 ಶಾಲೆಗಳಿವೆ. ಇಲ್ಲಿ ಶಿಕ್ಷಕರ ಕೊರತೆ ಇರುವುದು ಸರ್ಕಾರದ ಗಮನಕ್ಕೆ ಬಂದಿದೆ. ಅಲ್ಲಿ ಕೆಲಸ ಮಾಡಲು ಶಿಕ್ಷಕರು ಹಿಂದೇಟು ಹಾಕುತ್ತಿದ್ದಾರೆ.

ಹೊಸದಾಗಿ ನೇಮಕ ಮಾಡಿಕೊಳ್ಳುವಾಗ ಗಡಿ ಜಿಲ್ಲೆಗಳಲ್ಲಿ ಕೆಲಸ ಮಾಡಬೇಕೆಂಬ ಷರತ್ತು ವಿಧಿಸಿ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು. ಆಗ ಸಭಾಪತಿಯವರು, ಕೌನ್ಸಿಲ್ ಮೂಲಕ ವರ್ಗಾವಣೆ ಪ್ರಕ್ರಿಯೆ ನಡೆಯುತ್ತಿದೆ. ಶಿಕ್ಷಕರು ಅಲ್ಲಿಗೆ ಹೋಗಲು ಎಂದು ಹೇಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

Facebook Comments