ಪದವಿಪೂರ್ವ ಶಿಕ್ಷಣ ಇಲಾಖೆಯ ಪ್ರಾಂಶುಪಾಲರ, ಉಪನ್ಯಾಸಕರ ಜೊತೆ ಶಿಕ್ಷಣ ಸಚಿವ ಸುರೇಶ್ ಕುಮಾರ್‌ ಸಭೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು ಡಿಸೆಂಬರ್ 6 – ಪದವಿಪೂರ್ವ ಶಿಕ್ಷಣ‌ ಇಲಾಖೆಯ ಉಪನ್ಯಾಸಕರು, ಪ್ರಾಂಶುಪಾಲರುಗಳ‌ ಹಲವು ಬೇಡಿಕೆಗಳನ್ನು ಪರಿಹರಿಸಲು‌ ತಾವು ಈಗಾಗಲೇ ಹಲವು‌ ನಿರ್ಣಯಗಳನ್ನು ತೆಗೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ವಿವಿಧ ಸಂಘಟನೆಗಳ ಎಲ್ಲಾ‌ ಬೇಡಿಕೆಗಳನ್ನು‌ ಈಡೇರಿಸಲು‌ ಪ್ರಾಮಾಣಿಕವಾದ ತಮ್ಮ ಪ್ರಯತ್ನವನ್ನು ಮುಂದುವರೆಸುವವರಿದ್ದು, ಯಾವುದೇ ಸಂಘಟನೆಗಳು ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಬಹಿಷ್ಕರಿಸುವ ಆಲೋಚನೆಯನ್ನು ಮಾಡಬಾರದೆಂದು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದರು.

ಇಂದು ಪದವಿಪೂರ್ವ ಶಿಕ್ಷಣ ಇಲಾಖೆಯ ವಿವಿಧ‌ ಪ್ರಾಂಶುಪಾಲರ, ಉಪನ್ಯಾಸಕರ ಸಂಘಟನೆಗಳೊಂದಿಗೆ ನಡೆಸಿದ ಸಭೆಯಲ್ಲಿ‌ ಅವರು ಮಾತನಾಡಿದರು. ಉಪನ್ಯಾಸಕರ ಇಂತಹ ನಿರ್ಣಯಗಳು ಸಾಮಾಜಿಕವಾಗಿ ನಕಾರಾತ್ಮಕ ಸಂದೇಶವನ್ನು ರವಾನಿಸುವುದಾಗಿದ್ದು, ಭವ್ಯ ಭವಿಷ್ಯದ ಕನಸನ್ನು ಹೊತ್ತ‌ ವಿದ್ಯಾರ್ಥಿಗಳ ಹಿತ ಕಾಯುವುದು ಮುಖ್ಯವೆನ್ನುವುದನ್ನು ಎಲ್ಲರೂ ಗಮನದಲ್ಲಿಟ್ಟುಕೊಳ್ಳಬೇಕೆಂದು ಸಚಿವ ಸುರೇಶ್‌ಕುಮಾರ್ ಸಂಘಟನೆಗಳ ಪದಾಧಿಕಾರಿಗಳಿಗೆ ತಿಳಿ ಹೇಳಿದರು.

Facebook Comments