ತಜ್ಞರೊಂದಿಗೆ ಚರ್ಚಿಸಿ ಶಾಲೆಗಳ ಆರಂಭಕ್ಕೆ ನಿರ್ಧಾರ : ಸುರೇಶ್‍ಕುಮಾರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.1-ಶಾಲೆಗಳ ಪ್ರಾರಂಭಕ್ಕೆ ಯಾವುದೇ ಆತುರವಿಲ್ಲ. ಶಿಕ್ಷಣ ತಜ್ಞರು ಹಾಗೂ ಆರೋಗ್ಯ ತಜ್ಞರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್‍ಕುಮಾರ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಕ್ಕಳ ಆರೋಗ್ಯ ಕಾಪಾಡುವುದು ನಮ್ಮ ಧ್ಯೇಯವಾಗಿದೆ. ಎಲ್ಲ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತೇವೆ. ಅವಸರ ಮಾಡುವುದಿಲ್ಲ. ಶಿಕ್ಷಣ ತಜ್ಞರು, ಆರೋಗ್ಯ ತಜ್ಞರ ಜೊತೆ ಸೋಮವಾರ ಚರ್ಚೆ ನಡೆಸಿ ಅಕ್ಟೋಬರ್ 10ರ ನಂತರ ಶಾಲೆಗಳ ಪ್ರಾರಂಭದ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇನೆ ಎಂದರು.

ಶಾಲೆಗಳನ್ನು ತೆರೆಯಲು ಉತ್ಸುಕರಾಗಿದ್ದೇವೆ. ಪೋಷಕರು ಕೂಡ ಕಾಳಜಿ ವಹಿಸಿದ್ದಾರೆ. ಮಕ್ಕಳ ಆರೋಗ್ಯ ನಮಗೆ ಬಹಳ ಮುಖ್ಯವಾಗಿದೆ. ಹೀಗಾಗಿ ನಾವು ಸಾಧಕಬಾಧಕಗಳ ನಡುವೆ ಚರ್ಚೆ ನಡೆಸಬೇಕಾಗಿದೆ. ಅವಸರದ ತೀರ್ಮಾನವನ್ನು ಕೈಗೊಳ್ಳುವುದಿಲ್ಲ ಎಂದು ಹೇಳಿದರು.

ಕೇಂದ್ರ ಸರ್ಕಾರ ಶಾಲಾಕಾಲೇಜುಗಳ ಪುನರಾರಂಭಕ್ಕೆ ಸಮ್ಮತಿ ಸೂಚಿಸಿದೆ. ಶಾಲಾಕಾಲೇಜು, ಕೋಚಿಂಗ್ ಸೆಂಟರ್ ಆರಂಭಿಸುವ ಮೊದಲು ಶೈಕ್ಷಣಿಕ ಸಂಸ್ಥೆಗಳ ಆಡಳಿತ ಮಂಡಳಿ ಹಾಗೂ ಸೋಂಕಿನ ಸ್ಥಿತಿಗತಿ ಆಧರಿಸಿ ಅ.15ರ ನಂತರ ತೀರ್ಮಾನ ಕೈಗೊಳ್ಳುವಂತೆ ರಾಜ್ಯ ಸರ್ಕಾರ ತಮ್ಮ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸೂಚಿಸಿದೆ.

ಎಲ್ಲ ವಿಧದ ಶಿಕ್ಷಣದಲ್ಲಿ ಆನ್‍ಲೈನ್ ಅಥವಾ ದೂರ ಶಿಕ್ಷಣದ ಮೂಲಕ ಕಲಿಕೆಗೆ ಯಾವುದೇ ನಿರ್ಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಶಾಲೆಗಳನ್ನು ತೆರೆಯುವ ಬಗ್ಗೆ ಯಾವುದೇ ಆತುರದ ನಿರ್ಧಾರ ಕೈಗೊಳ್ಳುವುದಕ್ಕೆ ಮುನ್ನ ಆರೋಗ್ಯ ಮತ್ತು ಶಿಕ್ಷಣದ ತಜ್ಞರ ಜೊತೆ ಸುದೀರ್ಘ ಚರ್ಚೆ ನಡೆಸಲಿದೆ ಎಂದು ಸುರೇಶ್‍ಕುಮಾರ್ ತಿಳಿಸಿದರು.

Facebook Comments

Sri Raghav

Admin