ಇನ್ನೆರಡು ದಿನದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷಾಭಿಮುಖ ಪಠ್ಯಾಂಶ ಪ್ರಕಟ : ಸುರೇಶ್ ಕುಮಾರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು:  ಹತ್ತನೇ ತರಗತಿಯ ಪರೀಕ್ಷಾಭಿಮುಖವಾಗಿ ಬೋಧನೆ, ಕಲಿಕೆಯ ಮೌಲ್ಯಮಾಪನಕ್ಕೆ ಗುರುತಿಸಲಾದ ಪಠ್ಯವನ್ನು ಒಂದೆರಡು ದಿನಗಳಲ್ಲಿ ಪ್ರಕಟಿಸಲಾಗುವುದು ಎಂದು  ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ  ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

ಮಂಗಳವಾರ ಚಾಮರಾಜನಗರ ಜಿಲ್ಲೆಯ ವಿವಿಧ ಹಿರಿಯ ಪ್ರಾಥಮಿಕ ಶಾಲೆಗಳು, ಪ್ರೌಢಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳಿಗೆ ಭೇಟಿ ನೀಡಿ ತರಗತಿಗಳನ್ನು ಪರಿಶೀಲಿಸಿ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದ್ಯಾರ್ಥಿಗಳ ಕಲಿಕೆಯ ಹಿತದೃಷ್ಟಿಯಿಂದ ಹಾಗೂ ಅವರ ಕಲಿಕೆಗೆ ಖಚಿತತೆಯನ್ನು ಒದಗಿಸುವ ಸಲುವಾಗಿ, ಎಸ್ ಎಸ್ ಎಲ್ ಸಿ ಪರೀಕ್ಷಾ ಮೌಲ್ಯಮಾಪನಕ್ಕೆ ಗುರುತಿಸಲಾಗುವ ಅಂಶಗಳನ್ನು ಒದಗಿಸಲಾಗುವುದು ಎಂದರು.

ಬೋಧನೆ-ಕಲಿಕೆ ಹಾಗೂ ಮೌಲ್ಯಮಾಪನಕ್ಕೆ ಪಠ್ಯಾಂಶಗಳನ್ನು  ಈಗಾಗಲೇ ಗುರುತಿಸಲಾಗಿದ್ದು, ಶೀಘ್ರವೇ ಪ್ರಕಟಿಸಿ ಈ ವಿಷಯಗಳನ್ನೊಳಗೊಂಡ ಸವಿವರವಾದ ಕೈಪಿಡಿಯನ್ನು ಎಲ್ಲ ಶಾಲೆಗಳಿಗೆ ಒದಗಿಸಲಾಗುವುದು. ಯಾವುದೇ ಆತಂಕಕ್ಕೆ ಅವಕಾಶವಿಲ್ಲ  ಎಂದು ಸುರೇಶ್ ಕುಮಾರ್  ಹೇಳಿದರು.

ಪ್ರತಿ ವರ್ಷ ಲಭ್ಯವಾಗುತ್ತಿದ್ದ ಶಾಲಾ ಕೆಲಸದ ದಿನಗಳಿಗೆ ಅನುಗುಣವಾಗಿ ಸಿದ್ಧಪಡಿಸಿದ್ದ ಪಠ್ಯಪುಸ್ತಕಗಳನ್ನು ಈಗಾಗಲೇ ವಿದ್ಯಾರ್ಥಿಗಳಿಗೆ ತಲುಪಿಸಲಾಗಿದೆ. ಪಠ್ಯಪುಸ್ತಕಗಳಲ್ಲಿರುವ ಪೂರ್ಣ ವಿಷಯಗಳನ್ನು ಈ ಸಾಲಿನಲ್ಲಿ ಬೋಧಿಸುವುದು ಕಷ್ಟಸಾಧ್ಯವಾದ್ದರಿಂದ 2020-21 ಶೈಕ್ಷಣಿಕ ಸಾಲಿಗೆ ಲಭ್ಯವಾಗಬಹುದಾದ ದಿನಗಳಿಗೆ ಅನುಸಾರವಾಗಿ ಕೆಲವು ಪಠ್ಯಾಂಶಗಳನ್ನು ಮೌಲ್ಯಮಾಪನಕ್ಕೆ ಪರಿಗಣಿಸದಿರಲು ಇಲಾಖೆ ನಿರ್ಧರಿಸಿದೆ. ಸೂಚಿಸಿರುವ ವಿಷಯಾಂಶಗಳ ಅನುಸಾರ ಯಾವ ಘಟಕಗಳ ಬೋಧನಾ-ಕಲಿಕೆಗೆ,  ಯಾವ ಸ್ವರೂಪದ ಕಲಿಕಾ ಪ್ರಕ್ರಿಯೆ ಹೊಂದಿಕೊಳ್ಳುತ್ತದೆ ಎಂದು ತೀರ್ಮಾನಿಸಿ ಅದರಂತೆ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಅವರು ಹೇಳಿದರು.

ಮಕ್ಕಳು ಮತ್ತು ಪಾಲಕರಲ್ಲಿ ಆತ್ಮವಿಶ್ವಾಸ ತುಂಬುವ ಅಗತ್ಯ ಇರುವುದರಿಂದ ಶಾಲೆಗಳಿಗೆ ಭೇಟಿ ನೀಡುತ್ತಿದ್ದೇನೆ. ಶಾಲಾರಂಭದ ನಂತರ ಈತನಕ 150-170 ಶಾಲಾ ಕಾಲೇಜುಗಳಿಗೆ ಭೇಟಿ ನೀಡಿದ್ದೇನೆ. ಶಾಲಾರಂಭ, ಪರೀಕ್ಷೆ, ಸುರಕ್ಷತೆ, ಪಠ್ಯ ನಿಗದಿ ಸೇರಿದಂತೆ ಮಕ್ಕಳ ಹಿತದೃಷ್ಟಿಯಿಂದ  ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಕ್ಕಳ ಅನಿಸಿಕೆಯನ್ನು ಪಡೆಯುತ್ತಿದ್ದೇನೆ. ಈ ವಾರದಲ್ಲಿ  ನಾನು ಬಾಗಲಕೋಟೆ ಜಿಲ್ಲೆಯ ಹುನಗುಂದ, ಸಾವಳಗಿ ಸೇರಿದಂತೆ ಮುಂಬೈ ಕರ್ನಾಟಕದ ವಿವಿಧ ಶಾಲೆಗಳಿಗೆ   ಭೇಟಿ ನೀಡುತ್ತಿದ್ದೇನೆ ಎಂದರು.

# ಉಳಿದ ತರಗತಿಗಳ ಆರಂಭ- ತಾಂತ್ರಿಕ ಸಲಹಾ ಸಮಿತಿ ಸಲಹೆ:
ಜ. 15ರಿಂದ ಉಳಿದ ತರಗತಿಗಳನ್ನೂ ಆರಂಭಿಸಬೇಕೆಂದು  ಪೋಷಕರು ಒತ್ತಾಯಿಸುತ್ತಿದ್ದಾರೆ. ಈ ಕುರಿತಂತೆ ಆರೋಗ್ಯ ಇಲಾಖೆ ಮತ್ತು ಕೋವಿಡ್ ರಾಜ್ಯ ತಾಂತ್ರಿಕ ಸಮಿತಿಯ ಸಲಹೆಗಳನ್ನು ಪಡೆದು, ಮುಂದಿನ ಕ್ರಮ ವಹಿಸಲಾಗುವುದು ಎಂದು ಸಚಿವರು ವಿವರಿಸಿದರು.

ನಾನು ಶಾಲೆಗಳಿಗೆ ಭೇಟಿ ನೀಡಿ ಮಕ್ಕಳೊಂದಿಗೆ ಮಾತನಾಡಿದಾಗ ಶಾಲಾರಂಭ ಕುರಿತು ಮಕ್ಕಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅವರಿಗೆ ಶಾಲೆಗಳಲ್ಲಿನ ಸುರಕ್ಷಾ ಕ್ರಮಗಳ ಕುರಿತು ಭರವಸೆ ಮೂಡಿದ್ದು, ಸ್ವತಃ ಮಕ್ಕಳು ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಾ ತಮ್ಮ ಅರೋಗ್ಯದ ದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು.

Facebook Comments

Sri Raghav

Admin