ನಿಗದಿತ ಸಂಖ್ಯೆಯ ಬೆಡ್ ನೀಡದ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ : ಸುರೇಶ್ ಕುಮಾರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು: ಕೊರೋನಾ ರೋಗಿಗಳಿಗಾಗಿ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಬೊಮ್ಮನಹಳ್ಳಿ ವಲಯದ ಖಾಸಗಿ ಆಸ್ಪತ್ರೆಗಳು ಇಲಾಖೆಗೆ ಒದಗಿಸಬೇಕಾದ ನಿಗದಿತ ಹಾಸಿಗೆಗಳನ್ನು ನೀಡಲು ವಿಳಂಬ ಮಾಡುತ್ತಿದ್ದು, ವಿಳಂಬ ಇದೇ ರೀತಿ ಮುಂದುವರೆದರೆ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಎಚ್ಚರಿಸಿದ್ದಾರೆ.

ಸೋಮವಾರ ಬೆಳಗ್ಗೆ ಮುಖ್ಯಮಂತ್ರಿಯವರು ನಡೆಸಿದ ಬೆಂಗಳೂರು ವಲಯವಾರು ಪರಿಶೀಲನೆಯ ವಿಡಿಯೋ ಸಂವಾದದಲ್ಲಿ ಬೊಮ್ಮನಹಳ್ಳಿ ವಲಯದ ಕೊರೋನಾ ಉಸ್ತುವಾರಿಗೆ ನಿಯುಕ್ತಿಗೊಂಡಿರುವ ಅವರು, ಈ ಕುರಿತು ನಿನ್ನೆ ಖಾಸಗಿ ವಲಯದ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ಚರ್ಚಿಸಿದ್ದು, ತಕ್ಷಣವೇ ನಿಗದಿತ ಬೆಡ್ ಗಳನ್ನು ಒದಗಿಸಬೇಕೆಂದು ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿಯವರ ಗಮನಕ್ಕೆ ತಂದರು.

ಈ ವಲಯದ ಖಾಸಗಿ ಆಸ್ಪತ್ರೆಗಳಲ್ಲಿ ಒಟ್ಟು ೧೨೬೧ ಬೆಡ್‌ ಗಳಿವೆ. ಅವುಗಳಲ್ಲಿ ನಿಗದಿತ ಸಂಖ್ಯೆಯ ಶೇ ೫೦ ರಷ್ಟು ಬೆಡ್ ಗಳನ್ನು ಒದಗಿಸಬೇಕಾಗಿದ್ದು, ಈತನಕ ಕೇವಲ 118 ಬೆಡ್ ಗಳನ್ನಷ್ಟೇ ಇಲಾಖೆಗೆ ನೀಡಲಾಗಿದೆ. ಸೋಂಕು ಏರುತ್ತಿರುವ ಈ ಸಂದರ್ಭದಲ್ಲಿ ಇಂತಹ ವಿಷಯಗಳಲ್ಲಿ ವಿಳಂಬಕ್ಕೆ ಅವಕಾಶವೇ ಇಲ್ಲ, ಏನಾದರೂ ವಿಳಂಬ ಮಾಡಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿರುವುದಾಗಿ ಅವರು ಸಿಎಂ ಅವರ ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಯಡಿಯೂರಪ್ಪ, ತಮ್ಮ ತಮ್ಮ ವಲಯಗಳಲ್ಲಿ ಕೋವಿಡ್ ನಿಯಂತ್ರಣಕ್ಕೆ ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳಲು ವಲಯ ಉಸ್ತುವಾರಿಗಳಾಗಿರುವ ತಮಗೆ ಪೂರ್ಣ ಸ್ವಾತಂತ್ರ್ಯವಿದ್ದು, ವಿಳಂಬ ಮಾಡುವ ಆಸ್ಪತ್ರೆಗಳ ವಿರುದ್ಧ ಅಗತ್ಯ ಕ್ರಮಕ್ಕೆ ಸೂಚಿಸಿ ಎಂದು ಸಲಹೆ ನೀಡಿದರು.

ಬೆಂಗಳೂರಿನ ಬೊಮ್ಮನಹಳ್ಳಿ ವಲಯದ ಅತ್ತಿಬೆಲೆ ತನಿಖಾಠಾಣೆಯಿಂದ ಬರುವ ಜನರನ್ನು ನಿಯಂತ್ರಿಸುವುದು ಮತ್ತು ಅವರನ್ನು ಪರೀಕ್ಷೆಗೆ ಒಳಪಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು. ಈ ವಲಯದಲ್ಲಿ ಸಾಕಷ್ಟು ಖಾಸಗಿ ಅಪಾರ್ಟ ಮೆಂಟ್‌ಗಳಿದ್ದು ಇಂತಹ ಅಪಾರ್ಟ ಮೆಂಟ್ಗಳಲ್ಲಿ ಜನರ ಆರೋಗ್ಯ ತಪಾಸಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸುರೇಶ್ ಕುಮಾರ್ ಹೇಳಿದರು.

ಬೂತ್ ಮಟ್ಟದಲ್ಲಿ ಸ್ವಯಂ ಸೇವಕರ ತಂಡ ರಚಿಸಿ ಕಾಂಟಾಕ್ಟ್ ಟ್ರೇಸಿಂಗ್ನ್ನು ಪರಿಣಾಮಕಾರಿಯಾಗಿ ಮಾಡಲಾಗುತ್ತಿದೆ ಎಂದ ಸುರೇಶ್ ಕುಮಾರ್, ತಾವು ಉಸ್ತುವಾರಿ ವಹಿಸಿಕೊಂಡ ನಂತರ ಬೊಮ್ಮನಹಳ್ಳಿ ವಲಯದಲ್ಲಿ ಕೈಗೊಂಡ ಕ್ರಮಗಳ ಕುರಿತು ಅಧಿಕಾರಿಗಳ ಸಭೆಯ ವಿವರಗಳನ್ನು ಮುಖ್ಯಮಂತ್ರಿಯವರ ಗಮನಕ್ಕೆ ತಂದರು. ಮೊದಲು ಸದರಿ ವಾರ್ಡ್ಗೆ 16 ಅಂಬುಲೆನ್ಸ್ ಗಳ ಅಗತ್ಯವಿದ್ದು, ತಕ್ಷಣವೇ 10 ವಾಹನಗಳನ್ನು ಒದಗಿಸಬೇಕೆಂದು ಸಚಿವರು ಮನವಿ ಮಾಡಿದರು.

ಕೋವಿಡ್ ಪರೀಕ್ಷಾ ಫಲಿತಾಂಶ ಬರಲು ಪ್ರಸ್ತುತ 4 ರಿಂದ 5 ದಿನಗಳಾಗುತ್ತಿವೆ. ಆರೋಗ್ಯ ಇಲಾಖೆ ನಡೆಸಿದ್ದು, ಪರೀಕ್ಷಾ ಪ್ರಯೋಗಾಲಯಗಳ ಸಾಮರ್ಥ್ಯ ವನ್ನು ಪೂರ್ಣಪ್ರಮಾಣದಲ್ಲಿ ಬಳಸಿಕೊಂಡರೆ ಒಂದು ಇಲ್ಲವೇ ಎರಡು ದಿನಗಳಲ್ಲಿ ಪರೀಕ್ಷಾ ಫಲಿತಾಂಶ ಲಭ್ಯವಾಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.

Facebook Comments

Sri Raghav

Admin