ಕ್ರಿಕೆಟ್ ಅಭಿಮಾನಿಗಳಿಗೆ ಡಬಲ್ ಶಾಕ್ : ಧೋನಿ ಜೊತೆಗೆ ವಿಧಾಯ ಘೋಷಿಸಿದ ಸುರೇಶ್ ರೈನಾ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಆಗಸ್ಟ್ 15: ಕ್ಯಾಪ್ಟನ್ ಕೂಲ್ ಎಂದೇ ಖ್ಯಾತರಾಗಿದ್ದ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಅಭಿಮಾನಿಗಳಿಗೆ ನಿವೃತ್ತಿ ಘೋಷಿಸಿ ಆಘಾತ ನೀಡಿದ ಬೆನ್ನಲ್ಲೇ ಟೀಮ್ ಇಂಡಿಯಾದ ಮತ್ತೊಬ್ಬ ಸ್ಪೋಟಕ ಬ್ಯಾಟ್ಸ್ಮೆನ್ ಸುರೇಶ್ ರೈನಾ ಕೂಡ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಈ ಮೂಲಕ ಕ್ರಿಕೆಟ್ ಅಭಿಮಾನಿಗಳಿಗೆ ಒಂದೇ ದಿನ ಡಬಲ್ ಆಘಾತವಾಗಿದೆ.

33 ವರ್ಷದ ಸುರೇಶ್ ರೈನಾ ಕಳೆದ 2 ವರ್ಷಗಳಿಂದ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ವಿಲರಾಗಿದ್ದರು. ಧೋನಿ ಸಾರಥ್ಯದ ಸಿಎಸ್‌ಕೆ ತಂಡದ ಪ್ರಮುಖ ಆಟಗಾರನಾಗಿರುವ ರೈನಾ, ನಾನು ನಿಮ್ಮ ಜತೆಯಲ್ಲೇ ಸಾಗಲು ಇಷ್ಟಪಡುವೆ ಧೋನಿ ಎಂದು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

2011ರ ಏಕದಿನ ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದರು. ಜತೆಗೆ ಐಪಿಎಲ್ ಆರಂಭದಿಂದಲೂ ಧೋನಿ ಜತೆಯಲ್ಲೇ ಸಿಎಸ್‌ಕೆ ತಂಡದಲ್ಲಿದ್ದಾರೆ.

2013ರ ಸ್ಪಾಟ್ ಫಿಕ್ಸಿಂಗ್‌ನಿಂದಾಗಿ ಸಿಎಸ್‌ಕೆ ಎರಡು ವರ್ಷ ನಿಷೇಧದಲ್ಲಿದ್ದಾಗ ರೈನಾ ಗುಜರಾತ್ ತಂಡದಲ್ಲಿದ್ದರೆ, ಧೋನಿ ಪುಣೆ ತಂಡದ ಪರ ಆಡಿದ್ದರು. ಉತ್ತರ ಪ್ರದೇಶದ ಸುರೇಶ್ ರೈನಾ, 18 ಟೆಸ್ಟ್ ಪಂದ್ಯಗಳಿಂದ 768 ರನ್ ಕಲೆಹಾಕಿದ್ದರೆ, 226 ಏಕದಿನ ಪಂದ್ಯಗಳಿಂದ 5 ಶತಕ ಸೇರಿದಂತೆ 5615ರನ್, 78 ಟಿ20 ಪಂದ್ಯಗಳಿಂದ 1 ಶತಕ, 5 ಅರ್ಧಶತಕ 1605 ರನ್ ಬಾರಿಸಿದ್ದಾರೆ.

ಟೆಸ್ಟ್ ನಲ್ಲಿ 13, ಏಕದಿನ ಪಂದ್ಯಗಳಲ್ಲಿ 36, ಟಿ20 ಯಲ್ಲಿ 13, ಐಪಿಎಲ್ ನಲ್ಲಿ 25 ವಿಕೆಟ್ ಗಳಿಸಿದ್ದಾರೆ.

ಭಾರತ ಕ್ರಿಕೆಟ್‌ನ ಹೀರೋಗಳಲ್ಲಿ ಒಬ್ಬರಾದ ಮಹೇಂದ್ರ ಸಿಂಗ್ ಧೋನಿ, 15 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕನ್ನು ಅಂತ್ಯಗೊಳಿಸಿದ್ದಾರೆ. ಇದರಲ್ಲಿ ನಾಯಕರಾಗಿ ಏಕದಿನ ಮತ್ತು ಟಿ20 ವಿಶ್ವಕಪ್‌ಗಳನ್ನು ಗೆದ್ದು ತಂದ ಖ್ಯಾತಿ ಅವರಿಗಿದೆ.

ಧೋನಿ ನಿವೃತ್ತಿಯ ಬಗ್ಗೆ ಹಲವು ಸಮಯದಿಂದ ಊಹಾಪೋಹಗಳು ಕೇಳಿಬರುತ್ತಿದ್ದವು. ಇವುಗಳಿಗೆ ಧೋನಿ ಪ್ರತಿಕ್ರಿಯೆ ನೀಡಿರಲಿಲ್ಲ. ಕಳೆದ ಕೆಲವು ಟೂರ್ನಿಗಳಿಗೆ ಧೋನಿ ಅವರನ್ನು ಕೈಬಿಡಲಾಗಿತ್ತು. ಅವರು ಕ್ರಿಕೆಟ್ ತಂಡಕ್ಕೆ ಮರಳಲಿದ್ದಾರೆ ಎಂದು ಆಯ್ಕೆ ಸಮಿತಿಯ ಸದಸ್ಯರು ಹೇಳಿಕೆ ನೀಡಿದ್ದರೂ ಅದರ ಬಗ್ಗೆ ಅಭಿಮಾನಿಗಳಲ್ಲಿ ಅನುಮಾನವಿತ್ತು. ಅದೀಗ ಖಚಿತವಾಗಿದೆ. ಸುರೇಶ್ ರೈನಾ ಕೂಡ ಭಾರತ ತಂಡಕ್ಕೆ ಮರಳುವ ಪ್ರಯತ್ನ ಮಾಡಿದ್ದರು. ಆದರೆ ಅವರಿಗೆ ತಂಡದಲ್ಲಿ ಸ್ಥಾನ ಸಿಕ್ಕಿರಲಿಲ್ಲ. ಈ ಇಬ್ಬರೂ ಆಟಗಾರರು ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

Facebook Comments

Sri Raghav

Admin