“ನಮ್ಮ ಭಾಷೆ ನಶಿಸುತ್ತಿದೆ ಎಂದು ಕೊರಗದೆ, ನಮ್ಮದೇ ಆದ ಕೊಡುಗೆ ನೀಡಬೇಕು”

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.30-ನಮ್ಮ ಭಾಷೆ ನಶಿಸುತ್ತಿದೆ ಎಂದು ಕೊರಗುವುದನ್ನು ಬಿಟ್ಟು ನಮ್ಮದೇ ಆದ ಕೊಡುಗೆಯನ್ನು ನೀಡಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್‍ಕುಮಾರ್ ಇಂದಿಲ್ಲಿ ತಿಳಿಸಿದರು. ಸಪ್ನ ಬುಕ್ ಹೌಸ್ ವತಿಯಿಂದ ನಗರದಲ್ಲಿಂದು ಕನ್ನಡ ರಾಜ್ಯೋತ್ಸವ ಅಂಗವಾಗಿ ಹೊರತಂದ 50 ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕನ್ನಡ ಭಾಷಾ ಬೆಳವಣಿಗೆಗೆ ನಮ್ಮ ಪಾತ್ರ ಏನಿದೆ? ನಮ್ಮ ಕೊಡುಗೆ ಏನು ಎಂದು ನಮ್ಮನ್ನು ನಾವು ಪ್ರಶ್ನಿಸಿಕೊಂಡು ಸಾಧ್ಯವಾದಷ್ಟು ಭಾಷಾ ಬೆಳವಣಿಗೆಗೆ ಪೂರಕವಾದ ಕಾರ್ಯ ಮಾಡಬೇಕು ಎಂದರು.

ಪುಸ್ತಕ ಓದುವ ಹವ್ಯಾಸ ಹೆಚ್ಚಾಗಬೇಕು. ಬಹಳಷ್ಟು ಮಂದಿಗೆ ನಮ್ಮ ಕನ್ನಡ ಭಾಷೆಯ ಶ್ರೀಮಂತಿಕೆ ಅರಿವು ಇರುವುದಿಲ್ಲ. ಪುಸ್ತಕ ಓದುವ ಮೂಲಕ ಶಬ್ಧ ಸಂಪತ್ತು ವೃದ್ಧಿಯಾಗಲಿದೆ ಎಂದರು. ಇತ್ತೀಚೆಗೆ ರಾಜಕಾರಣಿಗಳು ತಮ್ಮ ನಾಲಿಗೆಯನ್ನು ಹರಿಬಿಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ರಾಜಕಾರಣಿಗಳು ಓದುವಂತಹ ಪುಸ್ತಕಗಳನ್ನು ಹೊರಬರಬೇಕಿದೆ. ಪುಸ್ತಕಗಳನ್ನು ಓದಲು ನಾವೇ ಸಮಯಾವಕಾಶವನ್ನು ಮಾಡಿಕೊಳ್ಳಬೇಕೇ ಹೊರತು ಪುಸ್ತಕ ಓದಲು ಸಮಯವಿಲ್ಲ ಎಂಬ ಸಬೂಬು ಹೇಳಬಾರದು ಎಂದು ಹೇಳಿದರು.

ಸಪ್ನಾ ಬುಕ್ ಹೌಸ್ 50 ಪುಸ್ತಕಗಳನ್ನು ಬಿಡುಗಡೆ ಮಾಡುವ ಮೂಲಕ ಕನ್ನಡದ ಕಾರ್ಯವನ್ನು ವಿಭಿನ್ನವಾಗಿ ಮಾಡುತ್ತಿದೆ ಎಂದರು.ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಯುವಜನರು ಕೂಡ ಪುಸ್ತಕ ರಚನೆಯಲ್ಲಿ ತೊಡಗಿಕೊಂಡಿದ್ದಾರೆ. ಒಂದು ಪುಸ್ತಕ ಒಬ್ಬ ವ್ಯಕ್ತಿಯ ಬದುಕನ್ನು ಬದಲಾಯಿಸಲಿದೆ ಎಂಬುದಕ್ಕೆ ವಿಜ್ಞಾನಿ ಐನ್‍ಸ್ಟೀನ್ ಸ್ಪಷ್ಟ ನಿದರ್ಶನ ಎಂದರು.

ಯುವಜನರು ಕಂಪ್ಯೂಟರ್‍ನಲ್ಲಿ ಮುಳುಗಿರುತ್ತಾರೆ ಎಂಬ ಮಾತನ್ನು ಸಾಮಾನ್ಯವಾಗಿ ಕೇಳುತ್ತೇವೆ. ಡಿಜಿಟಲೀಕರಣ ಹೆಚ್ಚಾಗಿ ಬಳಕೆಯಾಗುತ್ತಿದೆ. ಇದರಿಂದ ಮನೆ ಬಾಗಿಲಲ್ಲೇ ಪುಸ್ತಕ ಕೊಳ್ಳುವ ಅವಕಾಶ ದೊರತಿದೆ ಎಂದರು. ಹಿರಿಯ ಸಾಹಿತಿ ನಾಡೋಜ ಡಾ.ಕಮಲಾ ಹಂಪನಾ ಮಾತನಾಡಿ, ಪುಸ್ತಕ ಓದುವುದರಿಂದ ನೋವನ್ನು ದೂರ ಮಾಡಿಕೊಳ್ಳಬಹುದು. ಪುಸ್ತಕಗಳು ಗೆಳೆಯರಿದ್ದಂತೆ. ಪುಸ್ತಕಗಳನ್ನು ಓದುವುದರಿಂದ ಆನಂದ ಪಡೆಯಬಹುದಾಗಿದೆ ಎಂದರು. ಪ್ರಸಿದ್ಧ ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ, ಸಾಹಿತಿ ಹಂಪಾ ನಾಗರಾಜಯ್ಯ ಮತ್ತಿತರರು ಭಾಗವಹಿಸಿದ್ದರು.

Facebook Comments