ಡಿಜಿಟಲ್ ಗ್ರಂಥಾಲಯಗಳ ಸಂಖ್ಯೆ ಹೆಚ್ಚಿಸಲು ಕ್ರಮ : ಎಸ್.ಸುರೇಶ್‍ಕುಮಾರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.16- ಆಧುನಿಕ ತಂತ್ರಜ್ಞಾನ ಬೆಳೆದಂತೆ ಓದುವ ಅಭ್ಯಾಸ ಕಡಿಮೆಯಾಗುತ್ತಿದೆ. ಬೆರಳ ತುದಿಯಲ್ಲಿ ಸಿಗುವ ಮಾಹಿತಿಗಳು ಅಪೂರ್ಣವಾಗಿರುತ್ತವೆ. ಗ್ರಂಥಾಲಯಗಳಿಗೆ ಬಂದು ಪುಸ್ತಕಗಳನ್ನು ಅಧ್ಯಯನ ಮಾಡಿದರೆ ಮಾತ್ರ ಪರಿಪೂರ್ಣ ಜ್ಞಾನ ಸಂಪಾದಿಸಲು ಸಾಧ್ಯ ಎಂದು ಸಚಿವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್‍ಕುಮಾರ್ ಹೇಳಿದರು.

ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ನಡೆದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹೊಸ ಹೊಸ ತಂತ್ರಜ್ಞಾನದಿಂದ ಓದುವ ಸಂಸ್ಕøತಿ ಕ್ಷೀಣಿಸುತ್ತಿದೆ. ಯುವಕರು, ವಿದ್ಯಾವಂತರು ಗ್ರಂಥಾಲಯಗಳತ್ತ ಬರುತ್ತಿಲ್ಲ. ಮೊಬೈಲ್, ಇಂಟರ್‍ನೆಟ್‍ಗಳಲ್ಲೇ ಸಿಗುವ ಅಲ್ಪಸ್ವಲ್ಪ ಮಾಹಿತಿಗೆ ತೃಪ್ತರಾಗುತ್ತಿದ್ದಾರೆ. ಓದಿನಲ್ಲಿ ಸಿಗುವಷ್ಟು ಜ್ಞಾನಾರ್ಜನೆ, ಅಂತರ್ಜಾಲದಲ್ಲಿ ದಕ್ಕುವುದಿಲ್ಲ.

ನೀವು ಇಂಟರ್‍ನೆಟ್‍ನಲ್ಲಿ ಏನೇ ಹುಡುಕಿದರೂ ಅದನ್ನು ಪುಸ್ತಕದಲ್ಲಿ ಓದಿದಾಗ ಸಿಗುವ ಸ್ಪಷ್ಟತೆ ಕರಾರುವಕ್ಕಾಗಿರುತ್ತದೆ ಎಂದು ಹೇಳಿದರು. ರಾಜ್ಯದಲ್ಲಿ ಸುಮಾರು 7 ಸಾವಿರ ಗ್ರಂಥಾಲಯಗಳಿವೆ. ಓದುಗರ ಕೊರತೆಯಿಂದಾಗಿ ಬಹುತೇಕ ಗ್ರಂಥಾಲಯಗಳು ಮುಚ್ಚುವ ಸ್ಥಿತಿಗೆ ಬಂದಿವೆ. ಗ್ರಂಥಾಲಯ ಇಲಾಖೆ ಕೂಡ ಹೊಸ ತಂತ್ರಜ್ಞಾನ ಹಾಗೂ ಬದಲಾವಣೆಗಳಿಗೆ ಹೊಂದಿಕೊಳ್ಳುವ ಪ್ರಯತ್ನ ನಡೆಸಿದೆ.

ಓದುಗರನ್ನು ಆಕರ್ಷಿಸಲು ಡಿಜಿಟಲ್ ಗ್ರಂಥಾಲಯ ಸ್ಥಾಪಿಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದರು. ಗ್ರಂಥಾಲಯಗಳಲ್ಲಿ ಕುಳಿತು ಲೇಖಕರ ಪುಸ್ತಕಗಳನ್ನು ಅಧ್ಯಯನ ಮಾಡುವ ತಾಳ್ಮೆ ಯುವಸಮುದಾಯಕ್ಕಿಲ್ಲ. ಯಾವ ವಿಷಯದ ಆಧಾರದ ಮೇಲೆ ಚರ್ಚೆ ಮಾಡಬೇಕು ಎಂಬುದೇ ಈಗಿನ ಯುವ ಸಮುದಾಯಕ್ಕೆ ತಿಳಿಯುತ್ತಿಲ್ಲ. ಬಹಳಷ್ಟು ಗಂಭೀರ ವಿಷಯಗಳು ಚರ್ಚೆಯೇ ಆಗುತ್ತಿಲ್ಲ. ಕೇವಲ ಮೊಬೈಲ್‍ನಲ್ಲಿ ಸಿಗುವ ಮಾಹಿತಿಯನ್ನು ನಂಬುತ್ತಾರೆ. ಮೊಬೈಲ್ ಗೇಮ್‍ಗಳಲ್ಲೇ ಕಾಲ ಕಳೆಯುತ್ತಾರೆ ಎಂದು ವಿಷಾದಿಸಿದರು.

ನಾಡು, ನುಡಿ, ಪರಂಪರೆ, ಸಂಸ್ಕøತಿ ಬಗ್ಗೆ ಪುಸ್ತಕಗಳಲ್ಲಿ ಸಿಗುವಷ್ಟು ಆಕರ ಮಾಹಿತಿಗಳು ನಿಮಗೆ ಅಂತರ್ಜಾಲದಲ್ಲಿ ಸಿಗುವುದಿಲ್ಲ. ಪುಸ್ತಕ ಓದುವುದರ ಅನುಭವವೇ ಅವರ್ಚನೀಯ ಎಂದು ಸಚಿವರು ಹೇಳಿದರು.

ಮಾಜಿ ಸಚಿವೆ ಲೀಲಾದೇವಿ ಆರ್.ಪ್ರಸಾದ್ ಮಾತನಾಡಿ, ಹೆಣ್ಣು ಮಕ್ಕಳು ಟಿ.ವಿ. ಧಾರಾವಾಹಿಗಳನ್ನು ಬಿಟ್ಟು ಪುಸ್ತಕಗಳನ್ನು ಹಿಡಿಯಬೇಕು. ಪುಸ್ತಕದಿಂದ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ. ದೇಶ, ರಾಜ್ಯದ ಅಭಿವೃದ್ಧಿಗೆ ಜಾಗೃತಿ ಮುಖ್ಯ. ಜಾಗೃತಿ ಪುಸ್ತಕಗಳಿಂದ ದೊರೆತಷ್ಟು ಬೇರೆ ಮೂಲಗಳಿಂದ ಸಿಗುವುದಿಲ್ಲ ಎಂದು ಹೇಳಿದರು.

ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗಡೆ, ಲೇಖಕರಾದ ಲಲಿತಾ ಶೇಷಾದ್ರಿ, ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ.ಸತೀಶ್‍ಕುಮಾರ್ ಎಸ್.ಹೊಸಮನಿ, ಕಂಠೀರವ ಸ್ಟುಡಿಯೋದ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮಿ ಮತ್ತಿತರರು ಪಾಲ್ಗೊಂಡಿದ್ದರು.

Facebook Comments