ಸುಶಾಂತ್ ಸಾವಿನ ಪ್ರಕರಣದ ನಿಷ್ಪಕ್ಷಪಾತ ತನಿಖೆಗೆ ಸುಪ್ರೀಂ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಆ.5- ಬಾಲಿವುಡ್ ಖ್ಯಾತ ನಟ ಸುಶಾಂತ್‍ಸಿಂಗ್ ರಜಪೂತ್ ಸಾವಿನ ಪ್ರಕರಣದ ಬಗ್ಗೆ ಸತ್ಯಾಂಶ ಹೊರಬರಲು ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಸುಪ್ರೀಂಕೋರ್ಟ್ ಇಂದು ಮುಂಬೈ ಮತ್ತು ಪಾಟ್ನಾ ಪೊಲೀಸರಿಗೆ ಸೂಚನೆ ನೀಡಿದೆ.

ಈ ಪ್ರಕರಣದ ತನಿಖೆಯನ್ನು ಬಿಹಾರದ ಪಾಟ್ನಾದಿಂದ ಮುಂಬೈಗೆ ವರ್ಗಾಯಿಸಲು ಅನುಮತಿ ನೀಡುವಂತೆ ಕೋರಿ ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ ಸಲ್ಲಿಸಿದ್ದ ಅರ್ಜಿ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಈ ಪ್ರಕರಣದಲ್ಲಿ ಸತ್ಯಾಂಶ ಹೊರಬರಲು ಎರಡೂ ರಾಜ್ಯಗಳ ಪೊಲೀಸ್ ಇಲಾಖೆ ಪರಸ್ಪರ ಸಮನ್ವಯತೆ ಮತ್ತು ಸಹಕಾರದಿಂದ ಕಾರ್ಯನಿರ್ವಹಿಸಬೇಕು ಎಂದು ಸಲಹೆ ಮಾಡಿತು.

ತನಿಖೆಗಾಗಿ ಮುಂಬೈಗೆ ಆಗಮಿಸಿದ್ದ ಪಾಟ್ನಾದ ಐಪಿಎಸ್ ಅಧಿಕಾರಿ ವಿನಯ್ ತಿವಾರಿ ಅವರನ್ನು ಬಲವಂತವಾಗಿ ಕ್ವಾರಂಟೈನ್‍ಗೆ ಒಳಪಡಿಸಿದ ಪ್ರಕರಣವನ್ನು ಉಲ್ಲೇಖಿಸಿದ ನ್ಯಾಯಾಲಯ ಇದು ಉತ್ತಮ ಸಂದೇಶ ನೀಡುವ ಕ್ರಮವಲ್ಲ.

ಮುಂಬೈ ಪೊಲೀಸ್ ಇಲಾಖೆ ಮತ್ತು ಬೃಹನ್ ಮುಂಬೈ ಮಹಾನಗರ ಪಾಲಿಕೆಗೆ ಉತ್ತಮ ಹೆಸರಿದೆ. ಆದರೆ, ಈ ಬೆಳವಣಿಗೆ ಅಸಮಾಧಾನಕ್ಕೆ ಎಡೆಮಾಡಿಕೊಟ್ಟಿದೆ ಎಂದು ಹೇಳಿತು.

ಸುಶಾಂತ್‍ಸಿಂಗ್ ರಜಪೂತ್ ಅವರ ತಂದೆ ಪರ ವಕೀಲ ವಾದ ಮಂಡಿಸಿ ಮುಂಬೈ ಪೊಲೀಸರು ಉದ್ದೇಶಪೂರ್ವಕವಾಗಿ ಸಾಕ್ಷ್ಯಾಧಾರಗಳನ್ನು ತಿರುಚಿ ಹಾಕುತ್ತಿದ್ದಾರೆ. ಪಾಟ್ನಾ ಪೊಲೀಸರಿಗೆ ಸಹಕಾರ ನೀಡುತ್ತಿಲ್ಲ ಎಂದು ನ್ಯಾಯಾಲಯದಲ್ಲಿ ಆರೋಪಿಸಿದರು.

ಕೇಂದ್ರ ಸರ್ಕಾರದ ಪರವಾಗಿ ಹಾಜರಿದ್ದ ವಕೀಲರು ಈಗಾಗಲೇ ಬಿಹಾರ ಸರ್ಕಾರ ಸುಶಾಂತ್ ಸಾವು ಪ್ರಕರಣವನ್ನು ಸಿಬಿಐಗೆ ಒಪ್ಪಿಸಿದೆ. ಇದಕ್ಕೆ ಕೇಂದ್ರ ಸರ್ಕಾರ ಸಹ ಸಮ್ಮತಿ ನೀಡಿದೆ ಎಂದು ಆರೋಪಿಸಿದರು.

ರಿಯಾ ಚಕ್ರವರ್ತಿ ಪರ ವಕೀಲರು ವಾದ ಮಂಡಿಸಿ ತಮ್ಮ ಕಕ್ಷಿದಾರರ ಮೇಲೆ ಅನಗತ್ಯವಾಗಿ ಇಲ್ಲಸಲ್ಲದ ಆರೋಪಗಳನ್ನು ಮಾಡಲಾಗುತ್ತಿದೆ. ಈ ಪ್ರಕರಣದ ವಿಚಾರಣೆಯನ್ನು ಪಾಟ್ನಾದಿಂದ ಮುಂಬೈಗೆ ವರ್ಗಾಯಿಸಬೇಕು ಎಂದು ಹೇಳಿದರು.

ತಮ್ಮ ಕಕ್ಷಿದಾರರಾದ ರಿಯಾ ಚಕ್ರವರ್ತಿ ನಾಪತ್ತೆಯಾಗಿಲ್ಲ. ಆದರೆ, ಬಿಹಾರ ಪೊಲೀಸರು ಅವರಿಗೆ ಸಮನ್ಸ್ ನೀಡದೆ ಆಕೆ ನಾಪತ್ತೆಯಾಗಿದ್ದಾರೆ ಎಂದು ಹೇಳುವುದು ಸರಿಯಲ್ಲ ಎಂದು ತಿಳಿಸಿದರು.

Facebook Comments

Sri Raghav

Admin