‘ಅಧಿಕಾರಕ್ಕೆ ಅಂಟಿಕೊಳ್ಳದ ಸುಷ್ಮಾ’ : ಸಿ.ಟಿ.ರವಿ ಬಣ್ಣನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.7- ಅಧಿಕಾರದ ಕುರ್ಚಿಗೆ ಅಂಟಿಕೊಳ್ಳದೆ ರಾಜಕಾರಣದಲ್ಲಿ ಬೇರೆಯವರು ಬೆಳೆಯಲು ಅವಕಾಶ ಮಾಡಿಕೊಟ್ಟ ಕೀರ್ತಿ ಸುಷ್ಮಾ ಸ್ವರಾಜ್ ಅವರಿಗೆ ಸಲ್ಲುತ್ತದೆ ಎಂದು ಶಾಸಕ ಹಾಗೂ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಬಣ್ಣಿಸಿದರು.

ನಿನ್ನೆ ರಾತ್ರಿ ಹೃದಯಾಘಾತದಿಂದ ನಿಧನರಾದ ಸುಷ್ಮಾ ಸ್ವರಾಜ್ ಅವರಿಗೆ ಪಕ್ಷದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವೀಲ್ ಚೇರ್‍ನಲ್ಲಿದ್ದರೂ ಅಧಿಕಾರ ಬಿಟ್ಟುಕೊಡದವರ ನಡುವೆ ಅವರು ರಾಜಕೀಯ ನಿವೃತ್ತಿ ಘೋಷಣೆ ಮಾಡಿ ಇತರರಿಗೆ ಮಾದರಿಯಾದರು ಎಂದು ಶ್ಲಾಘಿಸಿದರು.

ಸುಷ್ಮಾ ಸ್ವರಾಜ್ ಎಂದಿಗೂ ಅಧಿಕಾರಕ್ಕೆ ಅಂಟಿ ಕುಳಿತವರಲ್ಲ. 2019ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದು ಪಕ್ಷ ಒತ್ತಡ ಹಾಕಿದರೂ ನನ್ನಂತೆ ಬೇರೆಯವರು ಬೆಳೆಯಬೇಕೆಂದು ಸಕ್ರಿಯ ರಾಜಕಾರಣದಿಂದಲೇ ನಿವೃತ್ತಿಯಾದರು. ಇಂಥವರು ಈಗಿನ ರಾಜಕಾರಣದಲ್ಲಿ ಅಪರೂಪ ಎಂದರು.

ಸುಷ್ಮಾ ಸ್ವರಾಜ್ ನಮ್ಮ ಕನ್ನಡದವರೇ ಆಗಿದ್ದರು. ಕರ್ನಾಟಕದ ಜೊತೆ ನಿರಂತರವಾದ ಸಂಪರ್ಕವಿಟ್ಟುಕೊಂಡಿದ್ದರು. ಒಂದು ರೀತಿ ಕನ್ನಡಿಯೇ ಆಗಿದ್ದ ಅವರು ಇನ್ನಿಲ್ಲ ಎಂದರೆ ನಂಬಲು ಸಾಧ್ಯವಾಗುತ್ತಿಲ್ಲ ಎಂದು ವಿಷಾದಿಸಿದರು. ದೇಶದ ಬಗ್ಗೆ ಸದಾ ಮಿಡಿಯುತ್ತಿದ್ದ ಸುಷ್ಮಾ ಸ್ವರಾಜ್ ಆರೋಗ್ಯದ ಕಡೆ ಗಮನಕೊಡಲಿಲ್ಲ. ವಿದೇಶಾಂಗ ಸಚಿವರಾಗಿ ದೇಶ, ವಿದೇಶಗಳಲ್ಲೂ ಕೀರ್ತಿಯನ್ನು ಸಂಪಾದಿಸಿದ್ದರು. ಅವರ ಅಗಲಿಕೆಯು ರಾಜಕೀಯ ಶೂನ್ಯ ತಂದಿದೆ ಎಂದು ನೋವನ್ನು ಹೊರ ಹಾಕಿದರು.

ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಮಾತನಾಡಿ, ಸಾಮಾನ ಕುಟುಂಬವೊಂದರಲ್ಲಿ ಜನಿಸಿದ ಸುಷ್ಮಾ ಸ್ವರಾಜ್ ಬಹುದೊಡ್ಡ ಹುದ್ದೆ ಏರಿ ಅಸಾಮಾನ್ಯ ಸಾಧನೆ ಮಾಡಿದರು. ಅವರು ನೋವು ಕೇವಲ ಬಿಜೆಪಿಗೆ ಮಾತ್ರವಲ್ಲ ಇಡೀ ಭಾರತಕ್ಕೆ ತುಂಬಲಾರದ ನಷ್ಟ ಎಂದು ಕಂಬನಿ ಮಿಡಿದರು.

ವಿಧಾನಪರಿಷತ್ ಸದಸ್ಯ ಲೆಹರ್ ಸಿಂಗ್ ಮಾತನಾಡಿ, ನಾನು ಕಳೆದ 41 ವರ್ಷಗಳಿಂದ ಕರ್ನಾಟಕದಲ್ಲಿ ಇದ್ದೇನೆ. ಈಗಲೂ ನನಗೆ ಕನ್ನಡವನ್ನು ಸರಿಯಾಗಿ ಮಾತನಾಡಲು ಬರುವುದಿಲ್ಲ. ಬಳ್ಳಾರಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅವರು ಕೇವಲ 15 ದಿನದಲ್ಲಿ ಕನ್ನಡ ಕಲಿತರು ಎಂದು ಸ್ಮರಿಸಿದರು. ಕಾರ್ಯಕ್ರಮದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್‍ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Facebook Comments