ಕರ್ನಾಟಕಕ್ಕೆ ರಾಜ್ಯಪಾಲರಾಗಿ ಬರ್ತಾರಾ ಸುಷ್ಮಾಸ್ವರಾಜ್…?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.3-ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರ ಹಲವು ರಾಜ್ಯಗಳ ರಾಜ್ಯಪಾಲರನ್ನು ಬದಲಾವಣೆ ಮಾಡಲು ಮುಂದಾಗಿದ್ದು, ರಾಜ್ಯಕ್ಕೆ ನೂತನ ರಾಜ್ಯಪಾಲರು ನೇಮಕವಾಗುವ ಸಾಧ್ಯತೆ ಇದೆ.

ಹಾಲಿ ರಾಜ್ಯಪಾಲರಾಗಿರುವ ವಜುಭಾಯಿ ವಾಲಾ ಅಧಿಕಾರಾವಧಿ ಆಗಸ್ಟ್ ತಿಂಗಳ ಅಂತ್ಯಕ್ಕೆ ಕೊನೆಗೊಳ್ಳಲಿದೆ. ತೆರವಾಗಲಿರುವ ಈ ಸ್ಥಾನಕ್ಕೆ ಲೋಕಸಭೆಯ ಮಾಜಿ ಸ್ಪೀಕರ್ ಸುಮಿತ್ರ ಮಹಾಜನ್, ಮಾಜಿ ಸಚಿವರಾದ ಉಮಾಭಾರತಿ ಹಾಗೂ ಸುಷ್ಮಾಸ್ವರಾಜ್ ಹೆಸರುಗಳು ಕೇಳಿ ಬರುತ್ತಿವೆ.

ಆದರೆ, ಅನಾರೋಗ್ಯದ ಕಾರಣ ಸಂಪುಟಕ್ಕೆ ಸೇರ್ಪಡೆಯಾಗಲು ಸುಷ್ಮಾಸ್ವರಾಜ್ ಹಿಂದೇಟು ಹಾಕಿದ್ದರು. ಹೀಗಾಗಿ ಅವರು ರಾಜ್ಯಪಾಲರಾಗಿ ನೇಮಕವಾಗುವ ಸಾಧ್ಯತೆಗಳು ತೀರಾ ಕಡಿಮೆ. ಅಲ್ಲದೆ, ಈ ಹಿಂದೆ ಸುಷ್ಮಾಸ್ವರಾಜ್ ಅವರು ಮಾಜಿ ಸಚಿವ ಜನಾರ್ಧನರೆಡ್ಡಿ, ಶ್ರೀರಾಮುಲು, ಕರುಣಾಕರರೆಡ್ಡಿ ಜತೆ ಗುರುತಿಸಿಕೊಂಡಿದ್ದರು. ಹೀಗಾಗಿ ಅವರನ್ನು ಕರ್ನಾಟಕದ ರಾಜ್ಯಪಾಲರನ್ನಾಗಿ ಮಾಡುವ ಸಾಧ್ಯತೆ ತೀರ ಕಡಿಮೆ ಎನ್ನುತ್ತಿವೆ.

ಇನ್ನೊಂದು ಮೂಲಗಳ ಪ್ರಕಾರ ಕರ್ನಾಟಕದ ಬಗ್ಗೆ ಸುಷ್ಮಾಸ್ವರಾಜ್‍ಗೆ ಸಮಗ್ರ ಮಾಹಿತಿ ಇರುವ ಕಾರಣ ಕೊನೆ ಕ್ಷಣದಲ್ಲಿ ಅವರನ್ನು ನೇಮಕ ಮಾಡಿದರೂ ಅಚ್ಚರಿಯಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇನ್ನು ಮಾಜಿ ಸಚಿವೆ ಉಮಾಭಾರತಿ ಕೂಡ ಸದ್ಯಕ್ಕೆ ಸಕ್ರಿಯ ರಾಜಕಾರಣದಿಂದ ದೂರ ಸರಿದಿದ್ದಾರೆ. ಈ ಹಿಂದೆ ಮಧ್ಯ ಪ್ರದೇಶದ ಮುಖ್ಯಮಂತ್ರಿಯೂ ಆಗಿದ್ದ ಅವರನ್ನು ಕರ್ನಾಟಕದ ರಾಜ್ಯಪಾಲರನ್ನಾಗಿ ನೇಮಕ ಮಾಡುವ ಬಗ್ಗೆ ಪಕ್ಷದ ವಲಯದಲ್ಲಿ ಚಿಂತನೆ ನಡೆದಿದೆ. ಅಲ್ಲದೆ, ಉಮಾಭಾರತಿಗೆ ಕರ್ನಾಟಕದೊಂದಿಗೆ ಸಾಕಷ್ಟು ಒಡನಾಟ ಇರುವುದರಿಂದ ರಾಜ್ಯಪಾಲರ ಹುದ್ದೆಗೆ ಪಕ್ಷದ ವರಿಷ್ಠರು ಪರಿಗಣಿಸುವ ನಿರೀಕ್ಷೆ ಇದೆ ಎಂದು ಹೇಳಲಾಗುತ್ತಿದೆ.

ಈ ಎಲ್ಲದರ ನಡುವೆ ಕಳೆದ ಸರ್ಕಾರದ ಅವಧಿಯಲ್ಲಿ ಲೋಕಸಭೆಯ ಸ್ಪೀಕರ್ ಆಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದ ಸುಮಿತ್ರಾ ಮಹಾಜನ್ ಅವರನ್ನು ಕರ್ನಾಟಕ್ಕೆ ರಾಜ್ಯಪಾಲರನ್ನಾಗಿ ನೇಮಕ ಮಾಡಲು ಬಿಜೆಪಿ ಗಂಭೀರ ಚಿಂತನೆ ನಡೆಸಿದೆ.

ಈ ಬಾರಿ ಮಧ್ಯಪ್ರದೇಶದ ಇಂಧೂರ್‍ನಿಂದ ಅವರು ಟಿಕೆಟ್ ಕೇಳಿದ್ದರಾದರೂ ವಯಸ್ಸಿನ ಕಾರಣ ವರಿಷ್ಠರು ಟಿಕೆಟ್ ನಿರಾಕರಿಸಿದ್ದರು. ಆರ್‍ಎಸ್‍ಎಸ್ ಮತ್ತು ಬಿಜೆಪಿ ಕಟ್ಟಾಬೆಂಬಲಿಗರಾಗಿರುವ ಸುಮಿತ್ರಾ ಮಹಾಜನ್ ಪಕ್ಷದ ವಲಯದಲ್ಲಿ ಅಜಾತಶತ್ರು ಎಂದೇ ಗುರುತಿಸಿಕೊಂಡಿದ್ದಾರೆ.

ಹಾಲಿ ರಾಜ್ಯಪಾಲರಾಗಿರುವ ವಜುಭಾಯಿ ವಾಲಾ ಅವರು ಇನ್ನೊಂದು ಅವಧಿಗೆ ಮುಂದುವರೆಯುವ ಇಂಗಿತವನ್ನು ಈಗಾಗಲೇ ಪಕ್ಷದ ವರಿಷ್ಠರ ಬಳಿ ವ್ಯಕ್ತಪಡಿಸಿದ್ದಾರೆ. ಆದರೆ, ಮತ್ತೊಂದು ಅವಧಿಗೆ ಅವರನ್ನು ಪರಿಗಣಿಸುವ ಸಾಧ್ಯತೆ ಕ್ಷೀಣಿಸಿದೆ.

ಪಕ್ಷದಲ್ಲಿ 75 ವರ್ಷ ದಾಟಿದವರಿಗೆ ಟಿಕೆಟ್ ನೀಡಿಲ್ಲದ ಕಾರಣ ಅಂತಹವರನ್ನು ಗುರುತಿಸಿ ರಾಜ್ಯಪಾಲರ ಹುದ್ದೆಗೆ ನೇಮಕ ಮಾಡಲು ಹೈ ಕಮಾಂಡ್ ಮುಂದಾಗಿದೆ.

ಕೇಂದ್ರದಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಯುಪಿಎ ಅವಧಿಯಲ್ಲಿ ನೇಮಕಗೊಂಡಿದ್ದ ಬಹುತೇಕ ರಾಜ್ಯಪಾಲರನ್ನು ಬದಲಾಯಿಸಿ ಬಿಜೆಪಿಯ ನಿಷ್ಠರನ್ನು ನೇಮಕ ಮಾಡಲಾಗಿತ್ತು. ಈಗ ಬಹುತೇಕರ ಅವಧಿ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಹೊಸಬರಿಗೆ ಅವಕಾಶ ಸಿಗುವ ಸಂಭವವಿದೆ.

ಮುಖ್ಯವಾಗಿ ಅಸ್ಸೋಮ್‍ನ ಬನ್ವಾರಿಲಾಲ್ ಪುರೋಹಿತ್, ಆಂಧ್ರಪ್ರದೇಶದ ಇ.ಎಸ್.ಎಲ್.ನರಸಿಂಹನ್, ತ್ರಿಪುರದ ಕಫ್ತಲ್‍ಸಿಂಗ್ ಸೋಲಂಕಿ, ಉತ್ತರ ಪ್ರದೇಶದ ರಾಮ್‍ನಾಯಕ್, ಅರುಣಾಚಲಪ್ರದೇಶದ ಬಿ.ಡಿ.ಮಿಶ್ರಾ, ಬಿಹಾರದ ಲಾಲ್‍ಜಿಟಂಡನ್, ಹರಿಯಾಣದ ಸತ್ಯದೇವ ನಾರಾಯಣನ್ ಆರ್ಯ, ಹಿಮಾಚಲಪ್ರದೇಶದ ಆಚಾರ್ಯ ದೇವ್‍ರ್ವತ್, ಜಾರ್ಖಂಡ್‍ನ ದ್ರೌಪದಿ ಮುರುಮ್ಮು ಸೇರಿದಂತೆ ಅನೇಕರ ಅಧಿಕಾರಾವಧಿ ಮುಗಿಯಲಿದೆ.

Facebook Comments