ಕರ್ತವ್ಯಲೋಪವೆಸಗಿದ ಕಲಬುರಗಿಯ ಮೂವರು ಅಧಿಕಾರಿಗಳ ಅಮಾನತು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.19- ಪ್ರವಾಹ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ಕರ್ತವ್ಯಲೋಪವೆಸಗಿ ಸಾರ್ವಜನಿಕರ ಕೆಂಗೆಣ್ಣಿಗೆ ಗುರಿಯಾಗಿದ್ದ ಕಲಬುರಗಿಯ ಮೂವರು ಅಧಿಕಾರಿಗಳನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಕಲಬುರಗಿಯಲ್ಲಿ ಗ್ರೇಡ್-2 ತಹಸೀಲ್ದಾರ್ ಪ್ರಭಾಕರ್ ಖಜೋರೆ, ಗ್ರಾಮ ಲೆಕ್ಕಿಗ ಭಾಗೇಶ್ ಯರವಾಳ್ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗುರುನಾಥ್ ಅವರನ್ನು ಜಿಲ್ಲಾಧಿಕಾರಿ ವಿ.ವಿ.ಜೋತ್ಸ್ನಾ ಅವರು ತಕ್ಷಣದಿಂದಲೇ ಜಾರಿಯಾಗುವಂತೆ ಸೇವೆಯಿಂದ ಅಮಾನತುಪಡಿಸಲಾಗಿದೆ.

ಭೀಮಾನದಿಯಲ್ಲಿ ಭಾರೀ ಪ್ರವಾಹ ಉಂಟಾಗಿ ಕಲಬುರಗಿ, ಬೀದರ್, ವಿಜಾಪುರ, ಬಾಗಲಕೋಟೆ, ರಾಯಚೂರು ಜಿಲ್ಲೆ ಸೇರಿದಂತೆ ಮತ್ತಿತರರ ಕಡೆ ಸಾವಿರಾರು ಕುಟುಂಬಗಳು ಬೀದಿಪಾಲಾಗಿ ರೈತರ ಬೆಳೆ, ಜಮೀನು, ಜಾನುವಾರುಗಳು ಸೇರಿದಂತೆ ಮನೆ, ಆಸ್ತಿಪಾಸ್ತಿ ನಷ್ಟ ಸಂಭವಿಸಿತ್ತು.

ಪ್ರವಾಹಕ್ಕೆ ಸಿಲುಕಿ ಸಾವಿರಾರು ಕುಟುಂಬಗಳು ಬೀದಿಪಾಲಾಗಿದ್ದರೂ ಈ ಅಧಿಕಾರಿಗಳು ಎಚ್ಚೆತ್ತುಕೊಳ್ಳದೆ ಪರಿಹಾರ ಒದಗಿಸದೆ ನಿರ್ಲಕ್ಷ್ಯ ತೋರಿದ್ದರು.  ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಂತ್ರಸ್ತರು ಸರ್ಕಾರ ಮತ್ತು ಅಧಿಕಾರಿಗಳ ವಿರುದ್ಧ ಬೇಸರ ವ್ಯಕ್ತಪಡಿಸಿದ್ದರು. ಇದನ್ನು ಗಮನಿಸಿದ ಜಿಲ್ಲಾಧಿಕಾರಿ ಜೋತ್ಸ್ನಾ ಅವರು ತಹಸೀಲ್ದಾರ್, ಪಿಡಿಒ ಮತ್ತು ಗ್ರಾಮ ಲೆಕ್ಕಾಧಿಕಾರಿಯನ್ನು ಸೇವೆಯಿಂದ ಅಮಾನತುಪಡಿಸಿದ್ದಾರೆ.

Facebook Comments