ಶಾಸಕ ಮುನಿರತ್ನ ಮನೆ ಬಳಿ ನಿಗೂಢ ಸ್ಫೋಟ, ಓರ್ವ ವ್ಯಕ್ತಿ ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 19- ರಾಜರಾಜೇಶ್ವರಿನಗರ ಕ್ಷೇತ್ರದ ಶಾಸಕ ಮುನಿರತ್ನ ಅವರ ನಿವಾಸದ ಬಳಿ ನಿಗೂಢ ಸ್ಫೋಟ ಸಂಭವಿಸಿ ವ್ಯಕ್ತಿಯೊಬ್ಬ ಛಿದ್ರಗೊಂಡು ಸಾವನ್ನಪ್ಪಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ.

ವಯ್ಯಾಲಿಕಾವಲ್‍ನ 11ನೆ ಬಿ ಕ್ರಾಸ್ ಬಳಿ ಇರುವ ಮುನಿರತ್ನ ಅವರ ಒಡೆತನದ ಕಟ್ಟಡದ ಕಾರ್‍ಪಾರ್ಕಿಂಗ್ ಬಳಿ ಈ ಸ್ಫೋಟ ನಡೆದಿದೆ. ಮನೆ ಎದುರು ದೋಭಿ ಕೆಲಸ ಮಾಡುತ್ತಿದ್ದ ವೆಂಕಟೇಶ್ ಎಂಬುವವರು ಮೃತಪಟ್ಟಿದ್ದಾರೆ.

ಇಂದು ಬೆಳಗ್ಗೆ ಸುಮಾರು 9.30ರ ಸಂದರ್ಭದಲ್ಲಿ ಭಾರೀ ಸ್ಫೋಟದ ಸದ್ದು ಕೇಳಿಸಿದ್ದು, ಸುತ್ತಮುತ್ತಲಿನ ಸುಮಾರು ಒಂದು ಕಿಲೋ ಮೀಟರ್ ಪ್ರದೇಶದ ಜನರು ಬೆಚ್ಚಿಬಿದ್ದಿದ್ದಾರೆ.

ಏನಾಯಿತೋ ಏನೋ ಎಂದು ತಿಳಿಯುವಷ್ಟರಲ್ಲಿ ಮುನಿರತ್ನ ಅವರ ನಿವಾಸದ ಬಳಿ ವ್ಯಕ್ತಿಯೊಬ್ಬರ ದೇಹ ಛಿದ್ರ ಛಿದ್ರವಾಗಿ ಬಿದ್ದಿರುವುದನ್ನು ನೋಡಿ ಸ್ಥಳೀಯರು ಆತಂಕಗೊಂಡಿದ್ದಾರೆ.

ಸಮೀಪದಲ್ಲೇ ಇರುವ ವಯ್ಯಾಲಿಕಾವಲ್ ಠಾಣೆ ಪೊಲೀಸರು ಸ್ಥಳಕ್ಕೆ ದಾವಿಸಿ ಪ್ರದೇಶವನ್ನು ತಮ್ಮ ವಶಕ್ಕೆ ಪಡೆದು ಘಟನೆ ಬಗ್ಗೆ ತನಿಖೆ ಆರಂಭಿಸಿದ್ದಾರೆ.
ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಸುನಿಲ್‍ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿ, ಸ್ಫೋಟಕ್ಕೆ ಇನ್ನೂ ನಿಖರ ಕಾರಣ ತಿಳಿದುಬಂದಿಲ್ಲ ಎಂದು ಸ್ಪಷ್ಟಪಡಿಸಿದರು.

ಸ್ಥಳಕ್ಕೆ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ಭೇಟಿ ನೀಡಿ ತನಿಖೆ ನಡೆಸಲಿದ್ದಾರೆ. ನಂತರ ನಿಖರವಾದ ಕಾರಣ ತಿಳಿಯಲಿದೆ. ಪ್ರಾಥಮಿಕ ಹಂತದಲ್ಲೇ ನಾವು ನಿಖರವಾಗಿ ಏನೂ ಹೇಳಲು ಸಾಧ್ಯವಿಲ್ಲ. ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸುವುದಾಗಿ ತಿಳಿಸಿದರು.

ಸ್ಫೋಟಕ್ಕೆ ಯಾವುದಾದರೂ ರಾಸಾಯನಿಕ ವಸ್ತು ಬಳಸಲಾಗಿದೆಯೇ ಎಂಬುದರ ಬಗ್ಗೆಯೂ ತನಿಖೆ ಮಾಡುತ್ತೇವೆ. ಸ್ಫೋಟದ ಹಾನಿಗೆ ಮನೆಯ ಕಿಟಕಿ, ಗಾಜುಗಳು ಮತ್ತಿತರ ವಸ್ತುಗಳು ಹಾನಿಯಾಗಿವೆ. ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಲಾಗುವುದು. ಸಾರ್ವಜನಿಕರು ಈ ಬಗ್ಗೆ ಭಯಭೀತರಾಗುವುದು ಬೇಡ. ಅನಗತ್ಯವಾಗಿ ಸುಳ್ಳು ವದಂತಿಗಳಿಗೆ ಕಿವಿಗೊಡಬಾರದು ಎಂದು ಆಯುಕ್ತರಾದ ಸುನಿಲ್‍ಕುಮಾರ್ ಮನವಿ ಮಾಡಿದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin