2 ತಿಂಗಳ ಗರ್ಭಿಣಿ ಅನುಮಾನಾಸ್ಪದ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಜು.1- ಎರಡು ತಿಂಗಳ ಗರ್ಭಿಣಿಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಹಾಲನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಯರಗನಹಳ್ಳಿ ನಿವಾಸಿ ಸೌಮ್ಯ (23) ಮೃತಪಟ್ಟ ಗರ್ಭಿಣಿ.  ವರುಣ ಹೋಬಳಿ, ಮಾರಶೆಟ್ಟಿಹಳ್ಳಿ ನಿವಾಸಿಯಾದ ಸೌಮ್ಯ ಒಂದು ವರ್ಷದ ಹಿಂದೆ ಯರಗನಹಳ್ಳಿಯ ಚಾಲಕ ಶಿವು ಎಂಬುವವರ ಜತೆ ವಿವಾಹವಾಗಿದ್ದು, ಸೌಮ್ಯ ಎರಡು ತಿಂಗಳ ಗರ್ಭಿಣಿಯಾಗಿದ್ದರು.

ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಸೌಮ್ಯ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದು, ಮನೆಗೆ ಬಂದ ಪತಿ ಶಿವು ಗಮನಿಸಿ ಆಕೆಯನ್ನು ನೇಣಿನಿಂದ ಇಳಿಸಿ ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಸೌಮ್ಯಳ ಫೋಷಕರಿಗೆ ದೂರವಾಣಿ ಮೂಲಕ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ತಮ್ಮ ಮಗಳು ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದು, ಆಕೆಯನ್ನು ಆಸ್ಪತ್ರೆಗೆ ಸೇರಿಸಿರುವುದಾಗಿ ತಿಳಿಸಿದ್ದಾರೆ.

ಫೋಷಕರು ಆಸ್ಪತ್ರೆಗೆ ಆಗಮಿಸುವಷ್ಟರಲ್ಲಿ ಸೌಮ್ಯ ಮೃತಪಟ್ಟಿದ್ದಾಳೆ. ಈ ವೇಳೆ ಎರಡೂ ಕುಟುಂಬಗಳ ನಡುವೆ ಜಗಳ ನಡೆದಿದೆ. ನಂತರ ಪತಿ ಶಿವು, ಅತ್ತೆ ಗೌರಮ್ಮ, ಶಿವು ಅಣ್ಣ ಮನು, ಶಿವು ಅತ್ತಿಗೆ ಸವಿತಾ ಪರಾರಿಯಾಗಿದ್ದಾರೆ. ಈ ಸಂಬಂಧ ಸೌಮ್ಯಳ ಫೋಷಕರು ಹಾಲನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪತಿಯೇ ಆಕೆಯನ್ನು ಕೊಲೆ ಮಾಡಿರುವುದಾಗಿ ದೂರಿದ್ದಾರೆ.

Facebook Comments