ಯಲಹಂಕದಲ್ಲಿ ಬ್ಲಾಸ್ಟ್..! ಕಾರ್ಮಿಕನಿಗೆ ಗಂಭೀರ ಗಾಯ, ಬೆಚ್ಚಿಬಿದ್ದ ಸ್ಥಳೀಯರು ..!

ಈ ಸುದ್ದಿಯನ್ನು ಶೇರ್ ಮಾಡಿ

ಯಲಹಂಕ,ಸೆ.20-ಮನೆಯೊಂದರಲ್ಲಿ ಬಾಂಬ್ ಸ್ಫೋಟದಂತೆ ಭಾರೀ ಶಬ್ದದೊಂದಿಗೆ ವಸ್ತುವೊಂದು ಸಿಡಿದು ಬೆಂಕಿ ಹೊತ್ತಿಕೊಂಡ ಪರಿಣಾಮ ಕಾರ್ಮಿಕ ಗಾಯಗೊಂಡಿರುವ ಘಟನೆ ಚಿಕ್ಕಜಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ.

ಘಟನೆಯಲ್ಲಿ ಅಕ್ಕಪಕ್ಕದ ಮನೆಯ ಗೋಡೆಗಳು ಬಿರುಕು ಬಿಟ್ಟಿದೆಯಲ್ಲದೆ ಕಿಟಕಿಗಾಜುಗಳು ಹಾಗೂ ಬಾಗಿಲುಗಲು ಸಹ ಜಖಂಗೊಂಡಿದೆ. ಯಲಹಂಕದ ಚಿಕ್ಕಜಾಲ ಬಳಿಯ ಕೋಡಗಲಹಟ್ಟಿ ನಿವಾಸಿಯಾದ ರಮೇಶ್ ಎಂಬುವರ ತಮ್ಮ ಒಂದು ಮನೆಯನ್ನು ಬಾಡಿಗೆಗೆ ನೀಡಿದ್ದು, ಈ ಮನೆಯಲ್ಲಿ ಕಲ್ಲು ಕ್ವಾರಿ ಕೆಲಸ ಮಾಡುವ ಕಾರ್ಮಿಕರು ವಾಸವಾಗಿದ್ದಾರೆ.

ಈ ಮನೆಯಲ್ಲಿ ಕೆಲಸಕ್ಕೆ ಬಳಸುವ ಜೆಲಿಟಿನ್ ಕಡ್ಡಿಗಳನ್ನು ಶೇಖರಿಸಿಟ್ಟಿದ್ದರು ಎನ್ನಲಾಗಿದೆ. ಮೂರ್ನಾಲ್ಕು ಮಂದಿ ಕಾರ್ಮಿಕರು ವಾಸವಾಗಿದ್ದು ಇಂದು ಬೆಳಗ್ಗೆ 8 ಗಂಟೆ ಸುಮಾರಿನಲ್ಲಿ ಪವನ್‍ಕುಮಾರ್ ಎಂಬಾತ ಮಾತ್ರ ಮನೆಯಲ್ಲಿದ್ದನು. ಈ ವೇಳೆ ಪವನ್ ಕಾಫಿ ಮಾಡಲು ಹೋದಾಗ ಬಾಂಬ್ ರೀತಿ ಶಬ್ದವಾಗಿ ಭಾರೀ ಬೆಂಕಿ ಆವರಿಸಿಕೊಂಡಿದೆ. ಪರಿಣಾಮ ಪವನ್‍ಗೆ ಸುಟ್ಟಗಾಯಗಳಾಗಿದ್ದು, ಮನೆಯಿಂದ ಹೊರಗೆ ಓಡಿಬಂದು ಪ್ರಾಣ ಉಳಿಸಿಕೊಂಡಿದ್ದಾರೆ.

ನೋಡು ನೋಡುತ್ತಿದ್ದಂತೆ ಮನೆಯೊಳಗೆ ಬೆಂಕಿ ಎಲ್ಲ ಕಡೆ ಆವರಿಸಿ ಹೊತ್ತಿ ಉರಿಯುತ್ತಿದ್ದುದನ್ನು ಕಂಡ ಸ್ಥಳೀಯ ನಿವಾಸಿ ತಕ್ಷಣ ಅಗ್ನಿಶಾಮಕ ದಳ ಹಾಗೂ ಪೊಲೀಸರಿಗೆ ತಿಳಿಸಿದ್ದಾರೆ.
ಒಂದು ರೀತಿ ಬಾಂಬ್ ಸ್ಫೋಟದಂತೆ ಭಾರೀ ಶಬ್ದ ಕೇಳಿಬಂದಿದ್ದರಿಂದ ಆತಂಕದಿಂದಲೇ ಸ್ಥಳೀಯ ನಿವಾಸಿಗಳು ಮನೆಗಳಿಂದ ಹೊರಬಂದಿದ್ದಾರೆ.

ಕೂಡಲೇ ಅಗ್ನಿಶಾಮಕ ಸಿಬ್ಬಂದಿಗಳು, ವಾಹನಗಳೊಂದಿಗೆ ಆಗಮಿಸಿ ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಮೊದಲು ಮೊದಲು ಸಿಲಿಂಡರ್ ಟಗೊಂಡಿರಬಹುದೆಂದೇ ಭಾವಿಸಲಾಗಿತ್ತು. ತದನಂತರ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಮನೆಯೊಳಗೆ ಹೋಗಿ ನೋಡಿದಾಗ ಸಿಲಿಂಡರ್‍ಗೆ ಯಾವುದೇ ಹಾನಿಯಾಗದಿರುವುದು ಕಂಡುಬಂದಿದೆ. ನಂತರ ರೂಮ್‍ಗೆ ಹೋಗಿ ನೋಡಿದಾಗ ಜೆಲಿಟಿನ್ ಕಡ್ಡಿಗಳು ಶೇಖರಣೆಯಾಗಿರುವುದು ಕಂಡುಬಂದಿದೆ.

ಈ ಕಡ್ಡಿಗಳಿಗೆ ಬೆಂಕಿ ತಗುಲಿದ್ದರಿಂದ ಸ್ಫೋಟಗೊಂಡಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ವಸ್ತುವನ್ನು ಕಲ್ಲುಬಂಡೆ ಒಡೆಯಲು ಬಳಸಲಾಗುವುದರಿಂದ ಅಪಾಯಕಾರಿಯಾಗಿರುತ್ತದೆ. ಇವುಗಳನ್ನು ಮನೆಯಲ್ಲಿ ಸಂಗ್ರಹಿಸಿಟ್ಟಿರುವುದು ಅಪಾಯಕಾರಿ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯಲ್ಲಿ ಗಾಯಗೊಂಡಿರುವ ಪವನ್ ಕುಮಾರ್‍ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕ್ಕಜಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Facebook Comments

Sri Raghav

Admin