ಕೆರೆ ಬಳಿ ಬರ್ತ್ ಡೇ ಪಾರ್ಟಿ ಮಾಡಲು ಹೋಗಿ ನೀರು ಪಾಲಾದ ಮೂವರು ಯುವಕರು..!

ಈ ಸುದ್ದಿಯನ್ನು ಶೇರ್ ಮಾಡಿ

ಗೌರಿಬಿದನೂರು, ಮೇ 26- ಸ್ನೇಹಿತನ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಪಾರ್ಟಿ ಮಾಡಲು ಕೆರೆ ಬಳಿ ಹೋಗಿ ನೀರು ಪಾಲಾಗಿದ್ದ ಮೂವರು ಯುವಕರ ಮೃತದೇಹಗಳು ಇಂದು ಬೆಳಗ್ಗೆ ಪತ್ತೆಯಾಗಿವೆ.

ಬೆಂಗಳೂರಿನ ರಾಮಮೂರ್ತಿನಗರದ ಚಂದ್ರ (20), ರಾಜು (19) ಮತ್ತು ನವೀನ್ (24) ಮೃತದೇಹಗಳನ್ನು ಅಗ್ನಿಶಾಮಕ ಸಿಬ್ಬಂದಿಗಳು ಕೆರೆಯಿಂದ ಹೊರ ತೆಗೆದಿದ್ದಾರೆ.

ಸ್ನೇಹಿತನ ಹುಟ್ಟುಹಬ್ಬದ ಅಂಗವಾಗಿ ರಾಮಮೂರ್ತಿ ನಗರದಿಂದ ನಾಲ್ಕು ಬೈಕ್‍ಗಳಲ್ಲಿ ಘಾಟಿ ದೇವಸ್ಥಾನಕ್ಕೆಂದು ನಿನ್ನೆ ನಾಲ್ವರು ಯುವಕರು, ನಾಲ್ವರು ಯುವತಿಯರು ತೆರಳಿದ್ದರು.

ಲಾಕ್‍ಡೌನ್ ಹಿನ್ನೆಲೆಯಲ್ಲಿ ದೇವಾಲಯದ ಬಾಗಿಲು ಮುಚ್ಚಿದ್ದರಿಂದ ಹೊರಗಿನಿಂದಲೇ ಕೈ ಮುಗಿದು ನಂತರ ತಾಲ್ಲೂಕಿನ ಗಡಿ ಭಾಗಕ್ಕೆ ಅಂಟಿಕೊಂಡಿರುವ ತಿಪ್ಪಗಾನಹಳ್ಳಿ ಕೆರೆ ಬಳಿ ಪಾರ್ಟಿ ಮಾಡಲು ಹೋಗಿದ್ದಾರೆ.

ಈ ಸಂದರ್ಭದಲ್ಲಿ ಚಂದ್ರ, ರಾಜು ಮತ್ತು ನವೀನ್ ಕೆರೆಯಲ್ಲಿ ಈಜಲು ನೀರಿಗಿಳಿದಾಗ ಉಸಿರುಗಟ್ಟಿ ಮೂವರೂ ನೀರು ಪಾಲಾಗಿದ್ದಾರೆ. ಇದರಿಂದ ಗಾಬರಿಗೊಂಡ ಸ್ನೇಹಿತರು ಸಹಾಯಕ್ಕಾಗಿ ಗ್ರಾಮಸ್ಥರನ್ನು ಕೂಗಿಕೊಂಡರೂ ಪ್ರಯೋಜನವಾಗಿಲ್ಲ.

ಸುದ್ದಿ ತಿಳಿದ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಅಗ್ನಿಶಾಮಕ ದಳ ಹಾಗೂ ಈಜು ತಜ್ಞರಿಂದ ಮೃತದೇಹಗಳಿಗಾಗಿ ಹುಡುಕಾಟ ನಡೆಸಿದರಾದರೂ ಪತ್ತೆಯಾಗಿರಲಿಲ್ಲ.

ಇಂದು ಬೆಳಗ್ಗೆ ಮತ್ತೆ ಹುಡುಕಾಟ ಆರಂಭಿಸಿದಾಗ ದೇಹಗಳು ಪತ್ತೆಯಾಗಿವೆ. ಮೃತರ ಪೋಷಕರು ಹಾಗೂ ಸಂಬಂಧಿಕರು ಕೆರೆ ಬಳಿ ಜಮಾಯಿಸಿದ್ದರು. ಅವರ ರೋಧನ ಮುಗಿಲು ಮುಟ್ಟಿತ್ತು.  ಘಟನೆ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments