ಶಾಕಿಂಗ್ : ಕೊರೋನಾ ತವರು ಚೀನಾದಲ್ಲಿ ಮತ್ತೊಂದು ಅಪಾಯಕಾರಿ ವೈರಸ್ ಪತ್ತೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೀಜಿಂಗ್, ಜೂ.30-ಇಡೀ ವಿಶ್ವಕ್ಕೆ ವಿನಾಶಕಾರಿ ಕೊರೊನಾ ವೈರಸ್‍ನನ್ನು ಕೊಡುಗೆಯಾಗಿ ನೀಡಿ ಭಾರೀ ಸಾವು-ನೋವು ಮತ್ತು ಅಪಾರ ನಷ್ಟಕ್ಕೆ ಕಾರಣವಾಗಿರುವ ಚೀನಾದಿಂದ ಜಗತ್ತಿಗೆ ಈಗ ಮತ್ತೊಂದು ಗಂಡಾಂತರ ಎದುರಾಗಿದೆ.

ಅತ್ಯಂತ ಅಪಾಯಕಾರಿ ಮತ್ತು ಭಾರೀ ವಿಶಾಶಕ್ಕೆ ಕಾರಣವಾಗಬಲ್ಲ ಹಂದಿ ಜ್ವರದ ಹೊಸ ವೈರಸ್ ಚೀನಾದಲ್ಲಿ ಪತ್ತೆಯಾಗಿದೆ. ಇದಕ್ಕೆ ಜಿ-4 ವೈರಸ್ ಎಂದು ಹೆಸರಿಡಲಾಗಿದ್ದು, ಇದು ಕೂಡ ವ್ಯಾಪಕ ಸೋಂಕು ಹಬ್ಬಲು ಕಾರಣವಾಗುತ್ತದೆ ಎಂಬ ಆತಂಕವಿದೆ.

ಚೀನಾದ ಹಂದಿಗಳಲ್ಲಿ ಪತ್ತೆಯಾಗಿರುವ ಸ್ವೈನ್ ಫ್ಲೂ ವೈರಸ್, ಇತರ ಮಾರಕ ವೈರಾಣುಗಿಂತ ಅತ್ಯಂತ ಅಪಾಯಕಾರಿಯಾಗಬಲ್ಲದು ಎಂದು ವರದಿಯೊಂದು ತಿಳಿಸಿದೆ.  ನರಘಾತಕ ವೈರಸ್‍ಗಳಲ್ಲಿರುವ ಎಲ್ಲ ರೀತಿಯ ಅಪಾಯಕಾರಿ ಚಿಹ್ನೆ ಮತ್ತು ಲಕ್ಷಣಗಳನ್ನು ಈ ರೋಗಕಾರ ಹಂದಿಜ್ವರ ವೈರಾಣು ಹೋಂದಿದೆ ಎಂಬ ಅಘಾತಕಾರಿ ಸಂಗತಿಯನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ.

ಪಿಎನ್‍ಎಸ್‍ಎ ನಿಯತಕಾಲಿಕದಲ್ಲಿ ಈ ಅಧ್ಯಯನ ವರದಿ ಪ್ರಕಟವಾಗಿದೆ. ಚೀನಾದ ಹಂದಿಗಳ ಮೇಲೆ ಕಳೆದ ಒಂಭತ್ತು ವರ್ಷಗಳಿಂದ ನಡೆಸಲಾದ ಕಣ್ಗಾವಲು ಅಧ್ಯಯನದಿಂದ ಹಂದಿಜ್ವರದ ಇನ್‍ಫ್ಲೂಯೆಂಜ ವೈರಸ್ ಅತ್ಯಂತ ಅಪಾಯಕಾರಿ ಎಂಬುದು ದೃಢಪಟ್ಟಿದೆ.

ಚೀನಾದ ಹಂದಿಗಳಲ್ಲಿ ಕಂಡುಬಂದಿರುವ ವಂಶವಾಹಿ ಧಾತುವಿಗೆ ಜಿ-4 ಜೆನೋಟೈಪ್ ಎಂದು ಹೆಸರಿಡಲಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಚೀನಾದಲ್ಲಿ ಲಕ್ಷಾಂತರ ಹಂದಿಗಳು ಸಾವಿಗೀಡಾಗಲು ಇದೇ ವೈರಸ್ ಕಾರಣ ಎಂಬ ಸಂಗತಿ ಸಹ ಬೆಳಕಿಗೆ ಬಂದಿದೆ.

ಮನುಷ್ಯರಿಗೂ ಅತಿ ಅಪಾಯಕಾರಿ: ಜಿ-4 ವೈರಸ್ ಮನುಷ್ಯನ ಶರೀರದೊಳಗೆ ಪ್ರವೇಶಿಸಿದಲ್ಲಿ ಭಾರೀ ಅಪಾಯ ತಂದೊಡ್ಡುತ್ತದೆ. ಆರಂಭದಲ್ಲಿ ಶೀತ, ನೆಗಡಿ, ಕೆಮ್ಮು, ಉಸಿರಾಟ ತೊಂದರೆ, ಜ್ವರ ಮತ್ತು ಗಮನಾರ್ಹ ತೂಕನಷ್ಟ ಕಂಡುಬಂದು ಜೀವಕ್ಕೇ ಸಂಚಕಾರ ತರುತ್ತದೆ ಎಂದು ಚೀನಾ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರದ ವಿಜ್ಞಾನಿಗಳು ಹೇಳಿದ್ದಾರೆ.

ಸದ್ಯಕ್ಕೆ ಜಿ-4 ವೈರಸ್ ನಿಗ್ರಹಕ್ಕೆ ಯಾವುದೇ ಔಷಧಿ ಅಥವಾ ಲಸಿಕೆ ಲಭ್ಯವಿಲ್ಲ. ಇತರ ವೈರಾಣು ಪ್ರತಿರೋಧ ಔಷಧಿಗಳು ಈ ಸೂಕ್ಷ್ಮಾಣುಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ವಿಜ್ಞಾನಿಗಳ ಸಮೂಹ ಆತಂಕ ವ್ಯಕ್ತಪಡಿಸಿದೆ.

Facebook Comments