ಸ್ವಿಸ್ ಬ್ಯಾಂಕ್‍ಗಳಲ್ಲಿ ಹಣ ಹೂಡಿಕೆಯಲ್ಲಿ ಭಾರತಕ್ಕೆ 77ನೇ ಸ್ಥಾನ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಜ್ಯೂರಿಚ್, ಜೂ.26- ಸ್ವಿಟ್ಜರ್‍ಲೆಂಡ್‍ನ ಪ್ರತಿಷ್ಠಿತ ಬ್ಯಾಂಕುಗಳಲ್ಲಿ ವಿಶ್ವದ ವಿವಿಧ ದೇಶಗಳ ನಾಗರಿಕರು ಮತ್ತು ಉದ್ಯಮಿಗಳು ಇಟ್ಟಿರುವ ಭಾರೀ ಹಣದ ಪ್ರಮಾಣದಲ್ಲಿ ಭಾರತಕ್ಕೆ 77ನೆ ಸ್ಥಾನ ಲಭಿಸಿದೆ. ಯುನೈಟೆಡ್ ಕಿಂಗ್‍ಡಂ ಎಂದಿನಂತೆ ಅಗ್ರಸ್ಥಾನದಲ್ಲೇ ಮುಂದುವರಿದಿದೆ. ಸ್ವಿಸ್ ನ್ಯಾಷನಲ್ ಬ್ಯಾಂಕ್ (ಎಸ್‍ಎನ್‍ಬಿ) ಬಿಡುಗಡೆ ಮಾಡಿರುವ ಇತ್ತೀಚಿನ ಅಂಕಿ ಅಂಶಗಳ ಮಾಹಿತಿಯಂತೆ, 2019ರ ವರ್ಷಾಂತ್ಯದಲ್ಲಿ ಭಾರತವು 77ನೇ ಸ್ಥಾನದಲ್ಲಿದೆ. 2018ರಲ್ಲಿ ದೇಶವು 74ನೇ ಸ್ಥಾನದಲ್ಲಿತ್ತು.

ಈ ಹಿಂದೆ ಇದ್ದ ಶ್ರೇಣಿಗಿಂತ ಮೂರು ಸ್ಥಾನಗಳಷ್ಟು ಕೆಳಗೆ ಇಳಿದಿರುವುದು ಅಂಕಿ ಅಂಶಗಳಿಂದ ದೃಢಪಟ್ಟಿದೆ. ಬ್ರಿಟನ್ ಎಂದಿನಂತೆ ಅಗ್ರಸ್ಥಾನದಲ್ಲೇ ಮುಂದುವರಿದಿದ್ದು, ಅಮೆರಿಕ, ವೆಸ್ಟ್ ಇಂಡೀಸ್, ಫ್ರಾನ್ ಮತ್ತು ಹಾಂಕಾಂಗ್ ಅನುಕ್ರಮವಾಗಿ ಟಾಪ್ ಫೈವ್ ರಾಷ್ಟ್ರಗಳಲ್ಲಿ ಸ್ಥಾನ ಪಡೆದಿವೆ.ಸ್ವಿಸ್ ಬ್ಯಾಂಕ್‍ಗಳಲ್ಲಿ ಭಾರತೀಯರು ಮತ್ತು ಉದ್ಯಮಿಗಳ ಹಣ ಹೂಡಿಕೆ ಪ್ರಮಾಣದಲ್ಲಿ ಶೇ.5.8ರಷ್ಟು ಇಳಿದಿದೆ.

ಸ್ವಿಟ್ಜರ್‍ಲೆಂಡ್‍ನ ಪ್ರತಿಷ್ಠಿತ ಬ್ಯಾಂಕುಗಳಲ್ಲಿ ಭಾರತೀಯರು ಹೂಡಿರುವ ಒಟ್ಟು ಮೊತ್ತ 6,625 ಕೋಟಿ ರೂ.ಗಳಷ್ಟಿದೆ. ಮೊದಲ ಸ್ಥಾನದಲ್ಲಿರುವ ಇಂಗ್ಲೆಂಡ್ ವಿಶ್ವದ ವಿವಿಧ ದೇಶಗಳ ಒಟ್ಟು ಹಣ ಹೂಡಿಕೆಯಲ್ಲಿ ಶೇ.27ರಷ್ಟು ಪಾಲು ಹೊಂದಿದ್ದರೆ, ಭಾರತದ್ದು ಶೇ.0.06ರಷ್ಟಿದೆ. ಟಾಪ್ 10 ದೇಶಗಳ ಪಟ್ಟಿಯಲ್ಲಿ ಜರ್ಮನಿ, ಲಕ್ಸೆಮ್‍ಬರ್ಗ್, ಬಹಮಾಸ್, ಸಿಂಗಪುರ್ ಮತ್ತು ಕೇಮ್ಯಾನ್ ಐಲ್ಯಾಂಡ್ಸ್ ಸ್ಥಾನ ಪಡೆದಿವೆ.

ಭಾರತವು 1996 ಮತ್ತು 2007ರ ನಡುವೆ ಸತತವಾಗಿ ಟಾಪ್-50 ದೇಶಗಳಲ್ಲಿ ಸ್ಥಾನ ಪಡೆದಿತ್ತು. ಆದರೆ ಭಾರತದ ಶ್ರೇಣಿಯು ಆಂತರ ಇಳಿಯತೊಡಗಿತು. 2009 ಮತ್ತು 2010ರಲ್ಲಿ 59ನೇ ಸ್ಥಾನ, 2011ರಲ್ಲಿ 55, 2012ರಲ್ಲು 71,ಮತ್ತು 2013ರಲ್ಲಿ 58ನೇ ಸ್ಥಾನದಲ್ಲಿತ್ತು.

Facebook Comments