ಸಯ್ಯದ್ ಮುಸ್ತಾಕ್ ಅಲಿ ಟ್ರೋಫಿ : ಹ್ಯಾಟ್ರಿಕ್ ಪ್ರಶಸ್ತಿಯತ್ತ ಕರ್ನಾಟಕ ಚಿತ್ತ

ಈ ಸುದ್ದಿಯನ್ನು ಶೇರ್ ಮಾಡಿ

ಕೋಲ್ಕತ್ತಾ, ನ. 21- ವಿದರ್ಭ ವಿರುದ್ಧ ಸೆಮಿಫೈನಲ್‍ನಲ್ಲಿ 4 ರನ್‍ಗಳ ರೋಚಕ ಗೆಲುವಿನಿಂದ ಫೈನಲ್ ತಲುಪಿರುವ ಮನೀಷ್ ಪಾಂಡೆ ನಾಯಕತ್ವದ ಕರ್ನಾಟಕ ತಂಡವು ವಿಜಯ್‍ಶಂಕರ್ ಸಾರಥ್ಯದ ತಮಿಳುನಾಡು ತಂಡ ನಾಳೆ ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಸವಾಲನ್ನು ಎದುರಿಸಲಿದೆ.
ಸಯ್ಯದ್ ಮುಸ್ತಾಕ್ ಅಲಿಯ ಎರಡು ಋತು ಗಳಲ್ಲೂ ರಾಜಸ್ಥಾನ ಹಾಗೂ ತಮಿಳುನಾಡು ತಂಡವನ್ನು ಮಣಿಸುವ ಮೂಲಕ ಚಾಂಪಿ ಯನ್ ಆಗಿರುವ ಕರ್ನಾಟಕ ಈ ಬಾರಿಯೂ ಗೆಲುವು ಸಾಸಿ ಹ್ಯಾಟ್ರಿಕ್ ಗೆಲುವು ಸಾಸುವತ್ತ ಚಿತ್ತ ಹರಿಸಿದೆ.

ಕಳೆದ ವರ್ಷ ಕರ್ನಾಟಕ ವಿರುದ್ಧ ಫೈನಲ್ ಪಂದ್ಯದಲ್ಲಿ ಕೇವಲ 1 ರನ್‍ಗಳಿಂದ ಸೋಲು ಕಂಡಿರುವ ತಮಿಳುನಾಡು ತಂಡವು ಈ ಬಾರಿ ಬಲಿಷ್ಠವಾಗಿದ್ದು, ಕರ್ನಾಟಕ ವನ್ನು ಅಂತಿಮ ಪಂದ್ಯದಲ್ಲಿ ಸೋಲಿಸುವ ಮೂಲಕ ಪ್ರತೀಕಾರ ಹೇಳಲು ಸಜ್ಜಾಗಿದೆ.

ತ್ರಿಮೂರ್ತಿಗಳ ಬ್ಯಾಟಿಂಗ್ ಅಬ್ಬರ: ಆರಂಭಿಕ ಪಂದ್ಯದಿಂದಲೂ ಬ್ಯಾಟಿಂಗ್‍ನಲ್ಲಿ ಅಬ್ಬರಿಸುತ್ತಿರುವ ಬಂದಿರುವ ಕರ್ನಾಟಕದ ಬ್ಯಾಟಿಂಗ್ ದೈತ್ಯರಾದ ನಾಯಕ ಮನೀಷ್ ಪಾಂಡೆ ( 259 ರನ್, 3 ಅರ್ಧಶತಕ), ಕರುಣ್‍ನಾಯರ್ (223 ರನ್, 2 ಅರ್ಧಶತಕ) ಹಾಗೂ ಸೆಮಿಫೈನಲ್‍ನಲ್ಲಿ ವಿದರ್ಭ ವಿರುದ್ಧ ಆಕರ್ಷಕ ಅರ್ಧಶತಕ ಗಳಿಸಿದ ರೋಹನ್ ಕದಮ್ (150 ರನ್, 1 ಅರ್ಧಶತಕ) ಅವರು ಫೈನಲ್‍ನಲ್ಲೂ ತಮಿಳುನಾಡಿನ ಬೌಲರ್‍ಗಳನ್ನು ದಿಟ್ಟವಾಗಿ ಎದುರಿಸುವ ಮೂಲಕ ಬೃಹತ್ ರನ್‍ಗಳನ್ನು ಕಲೆಹಾಕಲು ಕಾತರಿಸುತ್ತಿದ್ದರೆ, ಇವರಿಗೆ ಬೆಂಬಲ ನೀಡುವಂತೆ ಬ್ಯಾಟಿಂಗ್ ಮಾಡುವ ಜವಾಬ್ದಾರಿಯೂ ಅಭಿನವ್ ಮನೋಹರ್, ಅನಿರುದ್ಧ್ ಜೋಷಿ, ವಿಕೆಟ್ ಕೀಪರ್ ಬಿ.ಆರ್.ಶರತ್ ಮೇಲಿದೆ.

ಆದರೆ ವಿದರ್ಭ ವಿರುದ್ಧದ ಸೆಮಿಫೈನಲ್‍ನಲ್ಲಿ ಒಂದೇ ಓವರ್‍ನಲ್ಲಿ 4 ವಿಕೆಟ್‍ಗಳನ್ನು ಕಳೆದುಕೊಂಡಿರುವುದನ್ನು ಮರೆತು ಬ್ಯಾಟ್ಸ್‍ಮನ್‍ಗಳು ಉತ್ತಮ ಹೋರಾಟ ತೋರಿದರೆ ಮಾತ್ರ ತಮಿಳುನಾಡಿನ ಬ್ಯಾಟ್ಸ್‍ಮನ್‍ಗಳಿಗೆ ಸವಾಲಿನ ಮೊತ್ತವನ್ನು ನೀಡಲು ಸಹಕಾರಿಯಾಗುತ್ತದೆ.

ವೇಗಿ- ಸ್ಪಿನ್ ಮೋಡಿ:
ಈ ಬಾರಿ ಕರ್ನಾಟಕ ತಂಡದ ಬೌಲಿಂಗ್‍ನಲ್ಲಿ ಅನುಭವಿ ಬೌಲರ್‍ಗಳ ಕೊರತೆ ಕಂಡರೂ ಕೂಡ ಯುವ ಆಟಗಾರರು ಉತ್ತಮ ಬೌಲಿಂಗ್ ಪ್ರದರ್ಶನ ನೀಡುತ್ತಿದೆ. ವೇಗದ ಅಸ್ತ್ರದ ರೂವಾರಿಗಳಾಗಿರುವ ವಿದ್ಯಾಧರ್ ಪಟೇಲ್ (4 ವಿಕೆಟ್), ವೈಶಾಖ್(7 ವಿಕೆಟ್), ಎಂ.ಬಿ.ದರ್ಶನ್ (6 ವಿಕೆಟ್) ಇದುವರೆಗೂ ಉತ್ತಮ ಬೌಲಿಂಗ್ ಪ್ರದರ್ಶನ ನೀಡುವ ಮೂಲಕ ಎದುರಾಳಿ ಬ್ಯಾಟ್ಸ್‍ಮನ್‍ಗಳ ರನ್ ದಾಹಕ್ಕೆ ಬ್ರೇಕ್ ಹಾಕಿದ್ದರೆ, ಸ್ಪಿನ್ನರ್‍ಗಳಾದ ಕೆ.ಸಿ.ಕಾರ್ಯಪ್ಪ (10 ವಿಕೆಟ್) ಹಾಗೂ ಸುಚಿತ್ (6 ವಿಕೆಟ್ ಸ್ಪಿನ್ ಮೋಡಿ ಪ್ರದರ್ಶಿಸಿದರೂ ಕೂಡ ಫೈನಲ್‍ನಲ್ಲಿ ಭಾರತ ಎ ತಂಡಕ್ಕೆ ಆಯ್ಕೆಯಾಗಿರುವ ದೇವದತ್ ಪಡಿಕ್ಕಲ್ ಹಾಗೂ ಸ್ಪಿನ್ನರ್ ಕೃಷ್ಣಪ್ಪ ಗೌತಮ್ (7 ವಿಕೆಟ್)ರ ಕೊರತೆ ಎದ್ದು ಕಾಣುತ್ತಿದೆ.

ಶರವಣಕುಮಾರ್ ಮಿಂಚಲು ರೆಡಿ:
ಸೆಮಿಫೈನಲ್‍ನಲ್ಲಿ ಆಂಧ್ರಪ್ರದೇಶದ ವಿರುದ್ಧ 5 ವಿಕೆಟ್ ಪಡೆದು ತಮಿಳುನಾಡನ್ನು ಫೈನಲ್‍ಗೆ ತಲುಪಿಸಿದ ಪಿ.ಶರವಣಕುಮಾರ್ ಫೈನಲ್‍ನಲ್ಲೂ ಮಿಂಚಲು ಸಜ್ಜಾಗಿದ್ದರೆ, ಇವರಿಗೆ ಸಾಥ್ ನೀಡಲು ಸಂದೀಪ್ ವಾರಿಯರ್, ಆರ್. ಸಾಯಿಕಿಶೋರ್, ಎಂ.ಮುರುಗನ್ ಅಶ್ವಿನ್, ಆರ್. ಸಂಜಯ್ ಯಾದವ್ ಅವರು ಕೂಡ ಕರ್ನಾಟಕದ ಬ್ಯಾಟ್ಸ್‍ಮನ್‍ಗಳಿಗೆ ಲಗಾಮು ಹಾಕಲು ಸಜ್ಜಾಗಿದ್ದಾರೆ.

ಮಿಂಚು ಹರಿಸುವರೇ ವಿಜಯ್ ಶಂಕರ್..?
ತಮಿಳುನಾಡಿನ ನಾಯಕ ವಿಜಯ್‍ಶಂಕರ್ ಉತ್ತಮ ಬ್ಯಾಟಿಂಗ್ (181 ರನ್, 1 ಅರ್ಧಶತಕ) ಪ್ರದರ್ಶನ ನೀಡುತ್ತಿದ್ದು ಫೈನಲ್‍ನಲ್ಲೂ ಅದೇ ಲಯವನ್ನು ಪ್ರದರ್ಶಿಸಲು ಸಜ್ಜಾಗಿದ್ದಾರೆ. ಇವರಿಗೆ ಎನ್.ಜಗದೀಶನ್ (163 ರನ್, 1 ಅರ್ಧಶತಕ), ಸಿ.ಹರಿ ನಿಶಾಂತ್ (177 ರನ್) ಬೆಂಬಲ ನೀಡಲಿದ್ದಾರಾದರೂ ಶಾರುಖ್‍ಖಾನ್‍ನ ಕಳಪೆ ಬ್ಯಾಟಿಂಗ್ ತಂಡಕ್ಕೆ ತಲೆ ನೋವಾಗಿದೆ.
ಒಟ್ಟಾರೆ ನಾಳೆ ನಡೆಯಲಿರುವ ಸಯ್ಯದ್ ಮುಸ್ತಾಕ್ ಅಲಿ ಫೈನಲ್ ಪಂದ್ಯದಲ್ಲಿ ಕರ್ನಾಟಕ ಹ್ಯಾಟ್ರಿಕ್ ಚಾಂಪಿಯನ್ ಆಗುವತ್ತ ಚಿತ್ತ ಹರಿಸಿದ್ದರೆ, ತಮಿಳುನಾಡು ಸೇಡು ತೀರಿಸಲು ಹಾತೊರೆಯುತ್ತಿದೆ.

Facebook Comments