ಕಾಂಗ್ರೆಸ್ ಜಮೀರ್ ಅಹಮದ್ ಅವರನ್ನು ಸಿಎಂ ಮಾಡಲಿ : ಶರವಣ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.18- ಮಾಜಿ ಸಚಿವ ಜಮೀರ್ ಅಹಮ್ಮದ್ ಅವರನ್ನು ಕಾಂಗ್ರೆಸ್ ಪಕ್ಷ ಮುಖ್ಯಮಂತ್ರಿ ಮಾಡುವುದಾಗಿ ಘೋಷಣೆ ಮಾಡಲಿ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ, ಜೆಡಿಎಸ್ ವಕ್ತಾರ ಶರವಣ ಇಂದಿಲ್ಲಿ ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಮೀರ್ ಅವರನ್ನು ಸಿಎಂ ಮಾಡುವುದಾಗಿ ಕಾಂಗ್ರೆಸ್ ಘೋಷಣೆ ಮಾಡಿದರೆ ತಮ್ಮದೇನೂ ಆಕ್ಷೇಪವಿಲ್ಲ. ಜೆಡಿಎಸ್‍ನಲ್ಲಿ ಅಲ್ಪಸಂಖ್ಯಾತರನ್ನು ಸಿಎಂ ಮಾಡಲಿ ಎಂದು ಜಮೀರ್ ಹೇಳಿದ್ದಾರೆ. ಬೇರೆಯವರನ್ನು ಸಿಎಂ ಮಾಡುವುದಕ್ಕಿಂತ ಜಮೀರ್ ಅವರೇ ಸಿಎಂ ಆಗಲಿ ಎಂದರು.

ಕಾಂಗ್ರೆಸ್‍ನಲ್ಲಿ ಅಲ್ಪಸಂಖ್ಯಾತ ನಾಯಕರನ್ನು ಮುಗಿಸಿದಂತೆ ಜಮೀರ್ ಅವರನ್ನು ಮುಗಿಸುತ್ತಾರೋ ಎಂಬ ಆತಂಕವಿದೆ. ಮರಳಿ ಜಮೀರ್ ಜೆಡಿಎಸ್‍ಗೆ ಬರುವುದಾದರೆ ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

ವಿಧಾನಸಭೆ ಕಲಾಪ ನೋಡಲಾಗದೆ ಕಣ್ಣೀರು ಹಾಕುತ್ತಿದ್ದ ಜಮೀರ್ ಅವರನ್ನು ಬೆನ್ನು ತಟ್ಟಿ ಶಾಸಕರನ್ನಾಗಿ ಮತ್ತು ಸಚಿವರನ್ನಾಗಿ ಮಾಡಿದ್ದು ಯಾರು, ಯಾವ ಪಕ್ಷ ಎಂದು ಹೇಳಬೇಕು. ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್‍ನ ಅಧಿಕೃತ ಅಭ್ಯರ್ಥಿ ತಮ್ಮ ಕುಲಬಾಂಧವರನ್ನು ಬೆಂಬಲಿಸಿದೆ. ಬೈರತಿ ಸುರೇಶ್ ಅವರನ್ನು ಬೆಂಬಲಿಸಿದ್ದಲ್ಲದೆ, ಅವರನ್ನು ಬೆಂಬಲಿಸಿ ಎಂದು ಎಚ್.ಡಿ.ಕುಮಾರಸ್ವಾಮಿ ಅವರನ್ನು ಕೋರಿ ಬಂದಿದ್ದವರು ಯಾರು ಎಂದು ಪ್ರಶ್ನಿಸಿದರು.

ತಮ್ಮ ಪಕ್ಷದ ರಾಜ್ಯಸಭಾ ಅಭ್ಯರ್ಥಿಯಾಗಿದ್ದ ಫಾರೂಕ್ ಅವರ ಗೆಲುವಿಗೆ ಏಕೆ ಶ್ರಮಿಸಲಿಲ್ಲ ಎಂದು ಶರವಣ ವಾಗ್ದಾಳಿ ನಡೆಸಿದರು.
ಕುಮಾರಸ್ವಾಮಿ ಅವರು ಅಲ್ಪಸಂಖ್ಯಾತರ ವಿಚಾರದಲ್ಲಿ ಐದು ನಿದರ್ಶನಗಳನ್ನು ನೀಡಿದ್ದಾರೆ. ಅದರ ಬಗ್ಗೆ ಕಾಂಗ್ರೆಸಿಗರಿಂದ ಸೂಕ್ತ ಉತ್ತರ ಸಿಕ್ಕಿಲ್ಲ. ಬದಲಾಗಿ ಜೆಡಿಎಸ್ ಮತ್ತು ಕುಮಾರಸ್ವಾಮಿ ವಿರುದ್ಧ ಟೀಕೆ ಮಾಡಿದ್ದಾರೆ. ಅಲ್ಪಸಂಖ್ಯಾತರ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ ನಾಯಕರಿಗಿಲ್ಲ ಎಂದು ಹೇಳಿದರು.

ಕುಮಾರಣ್ಣ ಅವರನ್ನು ಇಂದ್ರ-ಚಂದ್ರ ಎನ್ನುತ್ತಿದ್ದ ಜಮೀರ್ ಅವರು ಈಗ ಆರೋಪ ಮಾಡುತ್ತಿದ್ದಾರೆ. ಹಾಗಾದರೆ ವಿಧಾನ ಪರಿಷತ್‍ನಲ್ಲಿ ಸಿಎಂ ಇಬ್ರಾಹಿಂ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಮಾಡಲು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಸ್ಥಾನವನ್ನು ಅಲ್ಪಸಂಖ್ಯಾತರಿಗೆ ನೀಡುವುದಾಗಿ ಘೋಷಣೆ ಮಾಡಲಿ ಎಂದು ವಾಗ್ದಾಳಿ ನಡೆಸಿದರು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ತಮ್ಮ ಆಡಳಿತಾವಯಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡಿದರು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಐದು ವರ್ಷದಲ್ಲಿ ಅಲ್ಪಸಂಖ್ಯಾತರಿಗೆ ಯಾವ ಕೊಡುಗೆ ನೀಡಿದ್ದಾರೆ ಎಂಬುದನ್ನು ಹೇಳಲಿ. ಕೇವಲ ಮತಕ್ಕಾಗಿ ಅಲ್ಪಸಂಖ್ಯಾತರನ್ನು ಓಲೈಸುವುದಲ್ಲ ಎಂದರು.

ಸಿದ್ದರಾಮಯ್ಯ ಅವರನ್ನು ರಾಷ್ಟ್ರ ರಾಜಕಾರಣಕ್ಕೆ ಕಳುಹಿಸಲು ಕಾಂಗ್ರೆಸ್‍ನಲ್ಲೇ ಪಿತೂರಿ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ಅಲ್ಪಸಂಖ್ಯಾತರಿಗೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ನೀಡಬೇಕಿತ್ತು. ನಿಜವಾಗಲೂ ಅಭಿಮಾನವಿದ್ದರೆ ಜೆಡಿಎಸ್ ಅಭ್ಯರ್ಥಿಗಳ ಗೆಲುವಿಗೆ ಕಾಂಗ್ರೆಸ್ ಬೆಂಬಲ ನೀಡಬೇಕಿತ್ತು ಎಂದು ಹೇಳಿದರು.

ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರನ್ನು ಶಾಸಕ ಮತ್ತು ಸಚಿವರನ್ನಾಗಿ ಮಾಡಿದ್ದು ಯಾರು? ಯಾವ ಪಕ್ಷ ಎಂಬುದನ್ನು ಅರ್ಥ ಮಾಡಿಕೊಳ್ಳಲಿ ಎಂದು ಟೀಕಾ ಪ್ರಹಾರ ನಡೆಸಿದರು.

ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಸಮಾನ ಅಂತರ ಕಾಯ್ದುಕೊಂಡು ಜೆಡಿಎಸ್ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ವಂತ ಶಕ್ತಿ ಮೇಲೆ ಅಕಾರಕ್ಕೆ ಬರುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಇದೇ ವೇಳೆ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಹಿರಿಯ ಉಪಾಧ್ಯಕ್ಷ ಸಯ್ಯದ್ ಶಫೀವುಲ್ಲಾ, ಪ್ರಧಾನ ಕಾರ್ಯದರ್ಶಿ ರೋಷನ್ ಅಬ್ಬಾಸ್ ಉಪಸ್ಥಿತರಿದ್ದರು.

Facebook Comments