ಅಧಿಕಾರದ ಆಸೆಗಾಗಿ ಜೆಡಿಎಸ್‍ಗೆ ದ್ರೋಹ ಬಗೆಯಲ್ಲ : ಜವರಾಯಿಗೌಡ

ಈ ಸುದ್ದಿಯನ್ನು ಶೇರ್ ಮಾಡಿ

ಯಶವಂತಪುರ, ಅ.28- ಅಧಿಕಾರದ ಆಸೆಗಾಗಿ ಜೆಡಿಎಸ್‍ಗೆ ದ್ರೋಹ ಬಗೆದು ಯಾವುದೇ ಕಾರಣಕ್ಕೂ ಪಕ್ಷಾಂತರ ಮಾಡುವುದಿಲ್ಲ ಎಂದು ಯಶವಂತಪುರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಟಿ.ಎನ್. ಜವರಾಯಿಗೌಡ ಸ್ಪಷ್ಟಪಡಿಸಿದ್ದಾರೆ. ಉಪ ಚುನಾವಣೆ ಹಿನ್ನೆಲೆಯಲ್ಲಿ ಮಾಗಡಿ ಮುಖ್ಯರಸ್ತೆ ಲಕ್ಕುಪ್ಪೆ ಗ್ರಾಮದಲ್ಲಿ ನಡೆದ ಚನ್ನೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ಕಾಂಗ್ರೆಸ್ ನವರು ಪಕ್ಷಕ್ಕೆ ಬಂದರೆ ಟಿಕೆಟ್ ನೀಡಿ ಎಂಎಲ್‍ಎ ಮಾಡುವುದಾಗಿ ತಿಳಿಸಿದ್ದಾರೆ. ಅದೇ ರೀತಿ ಬಿಜೆಪಿಯವರು ಉಪ ಚುನಾವಣೆಗೆ ನಿಲ್ಲಬೇಡಿ ಕೂಡಲೇ ನಿಗಮ ಮಂಡಳಿಯ ಅಧ್ಯಕ್ಷನಾಗಿ ನೇಮಿಸುತ್ತೇವೆ. ಎಂಎಲ್‍ಸಿ ಮಾಡುತ್ತೇವೆ ಎಂದು ಒತ್ತಾಯಿಸುತ್ತಿದ್ದರೂ ಅವರ ಪ್ರಸ್ತಾಪವನ್ನು ನಯವಾಗಿ ತಿರಸ್ಕರಿಸಿದ್ದೇನೆ ಎಂದರು.

ಕಳೆದೆರಡು ಚುನಾವಣೆಗಳಲ್ಲಿ ನಾನು ಸೋತಿದ್ದರೂ ಲಕ್ಷಕ್ಕೂ ಅಧಿಕ ಮತ ಗಳಿಸಿರುವ ಕಾರಣದಿಂದ ರಾಷ್ಟ್ರೀಯ ಪಕ್ಷಗಳು ನನ್ನನ್ನು ಆಹ್ವಾನಿಸಿವೆ ಎಂಬುದು ಗೊತ್ತಿದೆ. ಕಷ್ಟ ಕಾಲದಲ್ಲೂ ಪಕ್ಷ ಹಾಗೂ ಕಾರ್ಯಕರ್ತರು ಜತೆಗಿರುವುದು ನನ್ನ ಸುದೈವ. ಯಶವಂತಪುರ ನನ್ನ ಕರ್ಮಭೂಮಿ, ಜೆಡಿಎಸ್ ನಿಂದಲೇ ರಾಜಕಾರಣ. ಆದ್ದರಿಂದ ಎಂದೂ ಪಕ್ಷ ಬಿಡುವ ವಿಚಾರ ಮಾಡಿಲ್ಲ ಮುಂದೆಯೂ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಜನಾನುರಾಗಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಅಧಿಕಾರದಿಂದ ಕೆಳಗಿಳಿಸಿರುವುದು, ಎರಡು ಬಾರಿ ಅಲ್ಪಮತದಿಂದ ನಾನು ಸೋತಿರುವುದು ಹಾಗೂ ಮತದಾರರ ತೀರ್ಪಿಗೆ ವಿರುದ್ಧವಾಗಿ ಉಪಚುನಾವಣೆ ಬಂದಿರುವುದು ಜೆಡಿಎಸ್ ಪಾಲಿಗೆ ವರದಾನವಾಗಿದೆ.

ಕಾರ್ಯಕರ್ತರು ಮುಖಂಡರು ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ ಕೆಲಸ ಮಾಡಿ ಎಂದು ಸಲಹೆ ನೀಡಿದರು. ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವನ್ನು ಮತ್ತಷ್ಟು ಸದೃಢಗೊಳಿಸಲು ಹಾಗೂ ಜನಸೇವೆಗೆ ನಾನು ಶಾಸಕನಾಗಬೇಕಿದೆ. ಮುಂಬರುವ ಗ್ರಾಮ ಪಂಚಾಯಿತಿ ಸೇರಿ ಸ್ಥಳೀಯ ಚುನಾವಣೆಗಳಿಗೆ ಇದು ಸಹಕಾರಿಯಾಗಲಿದ್ದು ನನ್ನ ಗೆಲುವಿಗೆ ಸಹಕರಿಸಿ ಎಂದು ಮನವಿ ಮಾಡಿದರು.

ಕನ್ನಲ್ಲಿ ಹಾಗೂ ಸೀಗೇಹಳ್ಳಿ ಘನತ್ಯಾಜ್ಯ ಘಟಕಗಳನ್ನು ಮುಚ್ಚಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಇದೇ ವೇಳೆ ಭರವಸೆ ನೀಡಿದರು. ತಾವರೆಕೆರೆ ಹೋಬಳಿ ಜೆಡಿಎಸ್ ಅಧ್ಯಕ್ಷ ಶಂಕರೇಗೌಡ, ಗ್ರಾಪಂ ಮಾಜಿ ಅಧ್ಯಕ್ಷ ಜಿ.ಮನೋಹರ್, ಮುಖಂಡರಾದ ಕೃಷ್ಣಮೂರ್ತಿ, ಗೋಪಾಲï, ಗಂಗರುದ್ರಯ್ಯ ರಾಜಣ್ಣ, ಚನ್ನಭೈರಪ್ಪ, ಕುಮಾರ್, ಕೃಷ್ಣಪ್ಪ ಮೊದಲಾದವರು ಇದ್ದರು.

Facebook Comments

Sri Raghav

Admin