ಟಿ.ಎನ್. ಶೇಷನ್ ನಿಧನಕ್ಕೆ ಗಣ್ಯರ ಸಂತಾಪ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ನ.11- ಕೇಂದ್ರ ಚುನಾವಣಾ ಆಯೋಗದ ಮಾಜಿ ಮುಖ್ಯ ಆಯುಕ್ತ ಮತ್ತು ವರ್ಣರಂಜಿತ ವ್ಯಕ್ತಿತ್ವದ ಮಾಜಿ ಐಎಎಸ್ ಅಧಿಕಾರಿ ಟಿ.ಎನ್. ಶೇಷನ್ ಅವರ ನಿಧನಕ್ಕೆ ಮಾಜಿ ಪ್ರಧಾನಿಗಳಾದ ಎಚ್.ಡಿ.ದೇವೇಗೌಡರು, ಡಾ.ಮನಮೋಹನಸಿಂಗ್ ಸೇರಿದಂತೆ ಅನೇಕ ಗಣ್ಯಾತಿಗಣ್ಯರು ಸಂತಾಪ ಸೂಚಿಸಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ , ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಗುಲಾಂ ನಬಿ ಆಜಾದ್ ಸೇರಿದಂತೆ ಅನೇಕ ನಾಯಕರು ಶೇಷನ್ ಅವರ ನಿಧನಕ್ಕೆ ದುಃಖ ವ್ಯಕ್ತಪಡಿಸಿದ್ದಾರೆ. ಶೇಷನ್ ಅವರು ಭಾರತೀಯ ಚುನಾವಣಾ ವ್ಯವಸ್ಥೆಯಲ್ಲಿ ಮಹತ್ವದ ಪರಿವರ್ತನೆ ಮತ್ತು ಸುಧಾರಣೆಗಳನ್ನು ತರುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಅತ್ಯಂತ ದಕ್ಷ ಮತ್ತು ಕರ್ತವ್ಯ ನಿಷ್ಠೆಯ ಶೇಷನ್ ಅವರು ಪಾರದರ್ಶಕ ಮತ್ತು ನ್ಯಾಯ ಸಮ್ಮತ ಚುನಾವಣಾ ಪ್ರಕ್ರಿಯೆಗೆ ಭದ್ರ ಬುನಾದಿ ಹಾಕಿದವರು ಎಂದು ಗಣ್ಯರು ಗುಣಗಾನ ಮಾಡಿದ್ದಾರೆ.

ಶೇಷನ್ ಅವರು ನಿನ್ನೆ ರಾತ್ರಿ ಚೆನ್ನೈನಲ್ಲಿ ತೀವ್ರ ಹೃದಯಾ ಘಾತ ದಿಂದ ನಿಧನರಾದರು. ಅವರ ನಿಧನಕ್ಕೆ ರಮಾನಾಥ ಕೋವಿಂದ್, ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು , ಎಲ್ಲಾ ರಾಜ್ಯಗಳ ಮುಖ್ಯಮಂತ್ರಿ ಗಳು, ವಿವಿಧ ಪಕ್ಷಗಳ ಮುಖಂಡರು ನಿನ್ನೆಯೇ ಸಂತಾಪ ಸೂಚಿಸಿದರು.

ಚುನಾವಣಾ ಆಯೋಗದಲ್ಲಿ ತಮ್ಮ ಅಧೀನ ಆಯುಕ್ತರೊಂದಿಗೆ ಭಿನ್ನಾಭಿಪ್ರಾಯದ ಮೂಲಕ ಶೇಷನ್ ವಿವಾದಕ್ಕೂ ಗುರಿಯಾಗಿದ್ದರು. ಆಯೋಗದ ಕರ್ತವ್ಯ ನಿಷ್ಠೆಯಲ್ಲಿ ಅವರು ದಕ್ಷರಾಗಿದ್ದರು. ಭಾರತೀಯ ಚುನಾವಣಾ ವ್ಯವಸ್ಥೆಯಲ್ಲಿ ಮತದಾನ ಅತ್ಯಂತ ಪವಿತ್ರ ಹಕ್ಕು ಎಂಬ ಆಂದೋಲನವನ್ನು ತಮ್ಮ ಅಧಿಕಾರದುದ್ದಕ್ಕೂ ಪ್ರತಿಪಾದಿಸಿದವರು ಹಲವು ಸುಧಾರಣೆಗಳಿಗೆ ಕಾರಣ ಕರ್ತರಾಗಿದ್ದವರು.

Facebook Comments