ಮುನ್ನೆಚ್ಚರಿಕೆ ಕ್ರಮವಾಗಿ ಕೇಂದ್ರದಿಂದ ಮತ್ತಷ್ಟು ಮಾರ್ಗಸೂಚಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ನ.30 -ದೇಶದಲ್ಲಿ ಈವರೆಗೂ ರೂಪಾಂತರಿ ಓಮಿಕ್ರಾನ್ ಸೋಂಕು ಪತ್ತೆಯಾಗಿಲ್ಲ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ್ ಮಾಂಡವೀಯ ರಾಜ್ಯಸಭೆಗೆ ತಿಳಿಸಿದ್ದಾರೆ. ಈ ನಡುವೆ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೂ ಸ್ಪಷ್ಟ ಸೂಚನೆ ನೀಡಿದ್ದು, ಕೋವಿಡ್ ಆರ್‍ಟಿಪಿಸಿಆರ್ ಪರೀಕ್ಷೆಗಳ ಪ್ರಮಾಣವನ್ನು ಹೆಚ್ಚಿಸಲು ಸೂಚಿಸಿದೆ.

ರಾಜ್ಯಸಭೆ ಪ್ರಶ್ನೋತ್ತರ ಅವಧಿಯಲ್ಲಿ ಉತ್ತರ ನೀಡಿರುವ ಕೇಂದ್ರ ಸಚಿವರು, ಕಳೆದ ವಾರ ವಿಶ್ವ ಆರೋಗ್ಯ ಸಂಸ್ಥೆ ಬಿ.1.1.52 ಸೋಂಕಿನ ಬಗ್ಗೆ ಎಚ್ಚರಿಕೆ ನೀಡಿದ್ದು, ಇದು ಜಾಗತಿಕವಾಗಿ ಅಪಾಯವೊಡ್ಡುವ ಸಾಧ್ಯತೆಗಳ ಬಗ್ಗೆ ಸುಳಿವು ನೀಡಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ ಎಂದರು.

ವಿಶ್ವದಲ್ಲಿ ಈವರೆಗೂ 14 ದೇಶಗಳಲ್ಲಿ ಓಮಿಕ್ರಾನ್ ಪತ್ತೆಯಾಗಿದೆ. ಭಾರತದಲ್ಲಿ ಇವರೆಗೂ ಯಾವ ಪ್ರಕರಣಗಳು ವರದಿಯಾಗಿಲ್ಲ. ನಾವು ಸಾಧ್ಯವಾದಷ್ಟು ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಹೇಳಿದರು.

ಸೋಂಕು ಪತ್ತೆಹಚ್ಚಲು ಜಿನೊಮೆ ಸೀಕ್ವೆನ್ಸಿಂಗ್ ತಂತ್ರಜ್ಞಾನವನ್ನು ಬಳಸುತ್ತಿದ್ದೇವೆ. ಈ ಸಲಕರಣಿಗಳು ಗಂಟಲು ದ್ರವದ ಮಾದರಿಯಲ್ಲಿ ಸೋಂಕನ್ನು ನಿಖರವಾಗಿ ಗುರುತಿಸಲು ಸಹಾಯ ಮಾಡುತ್ತವೆ. ಯಾವುದೇ ರೂಪಾಂತರ ಸೋಂಕಿದ್ದರೂ ಭಾರತ ಬಳಸುತ್ತಿರುವ ತಂತ್ರಜ್ಞಾನದಲ್ಲಿ ಪತ್ತೆಹಚ್ಚಲು ಸುಲಭವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಕೊರೊನಾ ನಿಯಂತ್ರಣದಲ್ಲಿದೆ. ಆದರೆ ಸಂಪೂರ್ಣ ನಿವಾರಣೆಯಾಗಿಲ್ಲ. ದೇಶದ 124 ಕೋಟಿ ಡೋಸ್ ಲಸಿಕೆಯನ್ನು ಉಚಿತವಾಗಿ ನೀಡಲಾಗಿದೆ ಎಂದು ಹೇಳಿದ್ದಾರೆ.

ಈ ನಡುವೆ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ರಾಜ್ಯ ಸರ್ಕಾರ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಜೊತೆ ಇಂದು ಬೆಳಗ್ಗೆ ಮಹತ್ವದ ಸಭೆ ನಡೆಸಿದ್ದು, ಸೋಂಕನ್ನು ಪತ್ತೆಹಚ್ಚಲು ಪರೀಕ್ಷೆಗಳನ್ನು ಹೆಚ್ಚಿಸಲು ಸಲಹೆ ನೀಡಿದ್ದಾರೆ.

ಹೊಸ ರೂಪಾಂತರಿ ಸೋಂಕು ಆರ್‍ಟಿಪಿಸಿಆರ್ ಮತ್ತು ಆರ್‍ಎಟಿ ಪರೀಕ್ಷೆಯಲ್ಲಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಮನೆಯಲ್ಲಿ ಪ್ರತ್ಯೇಕವಾಗಿರುವವರಿಗೆ ಸೂಕ್ತ ನಿಗಾವಣೆ ಹಾಗೂ ಸೌಕರ್ಯಗಳನ್ನು ಒದಗಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.

ಹೊಸ ಸೋಂಕಿನ ಅಪಾಯದ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು, ಕಂಟೋನ್ಮೆಂಟ್ ಜೋನ್‍ಗಳನ್ನು ಗುರುತಿಸುವುದು, ಸಕ್ರಿಯ ಪ್ರಕರಣಗಳ ಮೇಲೆ ನಿಗಾವಹಿಸುವುದು, ಅಪಾಯಕಾರಿ ಪ್ರದೇಶಗಳನ್ನು ಗುರುತಿಸುವುದು, ಎಲ್ಲರಿಗೂ ಲಸಿಕೆ ನೀಡುವುದು, ಆರೋಗ್ಯ ಸೌಕರ್ಯಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ನ.28ರಂದು ಬರೆದಿರುವ ಪತ್ರದಲ್ಲಿನ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಅವರು ಸಭೆಯಲ್ಲಿ ಸಲಹೆ ಮಾಡಿದ್ದಾರೆ.

ಓಮಿಕ್ರಾನ್ ಪತ್ತೆಯಾಗಿರುವ ಬ್ರಿಟನ್, ಅಮೆರಿಕ, ದ.ಆಫ್ರಿಕಾ, ಬ್ರೆಜಿಲ್, ಬಾಂಗ್ಲಾದೇಶ, ಬೋಟ್ಸಾನ, ಚೀನಾ, ನ್ಯೂಜಿಲೆಂಡ್, ಜಿಂಬಾವ್ವೆ, ಮಾಲ್ಡೀವ್, ಸಿಂಗಾಪುರ, ಹಾಂಗ್‍ಕಾಂಗ್, ಜಪಾನ್ ಮತ್ತು ಇಸ್ರೇಲ್ ದೇಶಗಳ ಪ್ರಯಾಣಿಕರನ್ನು ತಪಾಸಣೆಗೊಳಪಡಿಸುವಂತೆ ಸೂಚಿಸಿದ್ದಾರೆ.
ತಪಾಸಣೆ ಮತ್ತು ಚಿಕಿತ್ಸೆಗೆ ಅಗತ್ಯವಿರುವ ಜೀವ ರಕ್ಷಕ ಸಲಕರಣೆಗಳು, ಔಷಗಳು, ಟೆಸ್ಟ್ ಕಿಟ್‍ಗಳು, ಪಿಪಿಪಿಇ ಕಿಟ್, ವೈದ್ಯಕೀಯ ಉಪಕರಣಗಳನ್ನು ಸಜ್ಜಗೊಳಿಸಿರಬೇಕು ಎಂದು ಅವರು ಸೂಚನೆ ನೀಡಿದ್ದಾರೆ.

Facebook Comments