ಭಾರತ ಟಿ-20 ವಿಶ್ವಕಪ್ ಗೆದ್ದರೆ ನನ್ನ ಶ್ರಮ ಸಾರ್ಥಕ ; ಶಾಸ್ತ್ರಿ

ಈ ಸುದ್ದಿಯನ್ನು ಶೇರ್ ಮಾಡಿ

ಲಂಡನ್,ಸೆ.18-ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಸೇವೆ ಸಲ್ಲಿಸಿದ್ದು ನನಗೆ ತೃಪ್ತಿ ತಂದಿದೆ. ಇದರ ಜತೆಗೆ ಅಲ್ಪ ಪ್ರಮಾಣದ ಬೇಸರವೂ ಇದೆ ಎಂದು ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ. ಟಿ20 ವಿಶ್ವಕಪ್ ನಂತರ ತಂಡದ ಮುಖ್ಯ ಕೋಚ್ ಹುದ್ದೆಯಿಂದ ಕೆಳಗಿಳಿಯಲಿರುವ ರವಿಶಾಸ್ತ್ರಿ ನನ್ನ ಅವಧಿಯಲ್ಲಿ ತಂಡ ಹಲವಾರು ಮಹತ್ವದ ಪಂದ್ಯಗಳನ್ನು ಗೆದ್ದುಕೊಂಡಿದೆ.ಆದರೆ ಇನ್ನಷ್ಟು ಸಾಧನೆ ಮಾಡಬಹುದಿತ್ತು ಎಂದು ಈಗ ಅನಿಸುತ್ತಿದೆ ಎಂದು ಹೇಳಿದ್ದಾರೆ.

59 ವರ್ಷದ ಶಾಸ್ತ್ರಿ ಅವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು ಸದ್ಯ ಕ್ವಾರಂಟೈನ್‍ನಲ್ಲಿದ್ದು, ಡಿ ಗಾರ್ಡಿಯನ್ ಪತ್ರಿಕೆಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಅಕ್ಟೋಬರ್ 17 ರಿಂದ ಸಂಯುಕ್ತ ಅರಬ್ ರಾಷ್ಟ್ರದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಗೆಲ್ಲುವುದೆ ನಮ್ಮ ಮುಂದಿರುವ ಸವಾಲು. ಈಗಾಗಲೆ ನಮ್ಮ ತಂಡದ ಸದಸ್ಯರು ಅದಕ್ಕಾಗಿ ಎಲ್ಲ ಸಿದ್ದತೆ ನಡೆಸಿದ್ದಾರೆ ಎಂದು ಅವರು ವಿವರಿಸಿದ್ದಾರೆ.

ನಾನು ಕೋಚ್ ಆಗಿ ಸೇವೆ ಸಲ್ಲಿಸುತ್ತಿದ್ದ ಅವಧಿಯಲ್ಲಿ ಭಾರತ ಸತತವಾಗಿ ಟೆಸ್ಟ್ ಕ್ರಿಕೆಟ್‍ನಲ್ಲಿ ನಂಬರ್ ಒನ್ ಸ್ಥಾನದಲ್ಲಿತ್ತು ಎನ್ನುವುದು ನನಗೆ ಹೆಮ್ಮೆ ತರಿಸುವ ವಿಚಾರ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಇದರ ಜೊತೆಗೆ ಆಸ್ಟ್ರೇಲಿಯಾ ವಿರುದ್ದ ಎರಡು ಬಾರಿ ಹಾಗೂ ಇಂಗ್ಲೆಂಡ್‍ನಲ್ಲಿ ಒಂದು ಬಾರಿ ಗೆಲುವು ಸಾಧಿಸಿರುವುದು ಸಾಮಾನ್ಯದ ಸಂಗತಿಯಲ್ಲ ಎಂದಿದ್ದಾರೆ.

ದಕ್ಷಿಣ ಆಫ್ರಿಕಾ, ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‍ನಲ್ಲಿ ನಡೆದು ಚುಟುಕು ಪಂದ್ಯಗಳಲ್ಲೂ ಭಾರತ ವಿಜಯಪತಾಕೆ ಹಾರಿಸಿದ್ದು ಶಾಸ್ತ್ರಿ ಅವಧಿಯಲ್ಲೇ ಎನ್ನುವುದು ವಿಶೇಷ. ಟಿ20 ವಿಶ್ವಕಪ್ ಗೆಲ್ಲಲು ಎಲ್ಲಾ ತಂಡಗಳು ಶ್ರಮ ವಹಿಸುತ್ತಿವೆ ಒಂದು ವೇಳೆ ಭಾರತ ವಿಶ್ವಕಪ್ ಗೆದ್ದರೆ ನನ್ನ ಉತ್ಸಾಹಕ್ಕೆ ಎಲ್ಲೆ ಇರುವುದಿಲ್ಲ ಎಂದು ರವಿಶಾಸ್ತ್ರಿ ಹೇಳಿದ್ದಾರೆ.

Facebook Comments