ಮ್ಯೂಸಿಕಲ್ ಚೇರ್ ನಂತಾದ ಆನೇಕಲ್ ತಹಶೀಲ್ದಾರ್ ಕುರ್ಚಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.21- ಆನೇಕಲ್ ತಾಲ್ಲೂಕು ತಹಸೀಲ್ದಾರ್ ಕುರ್ಚಿ ಮ್ಯೂಜಿಕಲ್ ಚೇರ್ ಆಗಿದೆ. ದಿನ ಬೆಳಗಾಗುವುದರೊಳಗೆ ಹೊಸ ತಹಸೀಲ್ದಾರ್‍ರನ್ನು ನೋಡಿ ಜನ ಗೊಂದಲಕ್ಕೊಳಗಾಗುತ್ತಿದ್ದಾರೆ. ಹಾಲಿ ಪ್ರಬಾರ ತಹಸೀಲ್ದಾರ್ ಆಗಿದ್ದ ದಿನೇಶ್ ಅವರನ್ನು ಪ್ರಾದೇಶಿಕ ಆಯುಕ್ತರು ಅಮಾನತ್ತುಗೊಳಿಸಿದ್ದಾರೆ. ವಿಧಾನಪರಿಷತ್‍ಗೆ ಶಿಕ್ಷಕರ ಕ್ಷೇತ್ರದಿಂದ ನಡೆಯುವ ಚುನಾವಣೆಗೆ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ 190 ಮಂದಿ ಅಕ್ರಮವಾಗಿ ಸೇರ್ಪಡೆಯಾಗಿದ್ದಾರೆ ಎಂಬ ಆರೋಪಕ್ಕಾಗಿ ದಿನೇಶ್‍ರನ್ನು ಅಮಾನತ್ತುಗೊಳಿಸಲಾಗಿದೆ.

ಹಿಂದೆ ಆನೇಕಲ್‍ನಲ್ಲಿ ಕೆಲಸ ಮಾಡುತ್ತಿದ್ದ ಮಹದೇವಯ್ಯ ಅವರು ಹೊಸದಾಗಿ ತಹಸೀಲ್ದಾರ್ ಆಗಿರುವುದಾಗಿ ಹೇಳಿಕೊಳ್ಳುತ್ತಿದ್ದಾರೆ. ಆನೇಕಲ್ ತಾಲ್ಲೂಕು ಆಡಳಿತದಲ್ಲಿ ಕಳೆದ ಒಂದು ವರ್ಷದಿಂದ ಭಾರೀ ಗೊಂದಲ ಉಂಟಾಗಿದೆ. ಮಹದೇವಯ್ಯ ಅವರು ಈ ಮೊದಲು ತಹಸೀಲ್ದಾರ್ ಅಗಿದ್ದಾಗ ಎರಡು ಮೂರು ಬಾರಿ ಅಮಾನತ್ತುಗೊಂಡಿದ್ದರು. ರಾಜಕೀಯ ಒತ್ತಡ ಅಥವಾ ನ್ಯಾಯಾಲಯದ ಆದೇಶದ ಪ್ರಕಾರ ಮತ್ತೆ ಆನೇಕಲ್‍ಗೆ ನೇಮಕವಾಗಿದ್ದರು. ಕಳೆದ ಹದಿನೈದು ದಿನಗಳ ಹಿಂದೆ ಮಹದೇವಯ್ಯ ಅವರ ಬದಲಾವಣೆಯಾಗಿ ದಿನೇಶ್ ನೇಮಕವಾಗಿದ್ದರು. ಈಗ ದಿನೇಶ್ ಕೂಡ ಅಮಾನತ್ತುಗೊಂಡಿದ್ದಾರೆ.

ಈ ಮೊದಲು ಆನೇಕಲ್‍ನಲ್ಲಿ ಕೆಲಸ ಮಾಡುವಾಗ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಮತಚಲಾಯಿಸಲು ಮತದಾರಪಟ್ಟಿಗೆ ಸೇಪರ್ಡೆಯಾಗಲು ಸಾಕಷ್ಟು ಮಂದಿ ಅರ್ಜಿ ಸಲ್ಲಿಸಿದ್ದರು. ಅವರಲ್ಲಿ 190 ಮಂದಿ ಹೆಸರು ಅಕ್ರಮವಾಗಿದೆ ಎಂಬ ದೂರುಗಳು ಸಲ್ಲಿಕೆಯಾಗಿವೆ. ಈ ವಿಷಯದಲ್ಲೂ ವಿಚಿತ್ರವಾದ ವಾದಗಳು ಕೇಳಿ ಬರುತ್ತಿವೆ. ಮಹದೇವಯ್ಯ ಅವರು ನಾನು ಅರ್ಜಿಗಳನ್ನು ಮಾತ್ರ ಸ್ವೀಕರಿಸಿದ್ದೇನೆ. ಮತದಾರರ ಪಟ್ಟಿಗೆ ನಾನು ಯಾರನ್ನು ಸೇರಿಸಿಲ್ಲ ಎಂದು ಹೇಳುತ್ತಿದ್ದಾರೆ.

ಇತ್ತ ಅಮಾನತ್ತುಗೊಂಡಿರುವ ದಿನೇಶ್ ಅವರು ಹೇಳುವುದೇ ಬೇರೆ. ಅರ್ಜಿ ಸ್ವೀಕರವಾದ ಹಿನ್ನೆಲೆಯಲ್ಲಿ ಕರಡು ಪಟ್ಟಿ ತಯಾರಿಸಲಾಗಿದೆ. ಮತದರರ ಪಟ್ಟಿ ಇನ್ನೂ ಅಂತಿಮಗೊಂಡಿಲ್ಲ. ಅರ್ಜಿ ಸ್ವೀಕರಿಸಿದ್ದು ನಾನಲ್ಲ, ಪಟ್ಟಿ ತಯಾರಿಸಿದ್ದು ನಾನಲ್ಲ. ಹದಿನೈದು ದಿನಗಳ ಹಿಂದಷ್ಟೆ ನಾನು ಅಧಿಕಾರ ಸ್ವೀಕರಿಸಿದ್ದೆ. ಮತದರಾರರ ಅಕ್ರಮ ಸೇರ್ಪಡೆಯಲ್ಲಿ ನನ್ನ ಪಾಲಿಲ್ಲ ಎಂದು ವಾದಿಸುತ್ತಿದ್ದಾರೆ.

ಕಳೆದ ಒಂದು ವರ್ಷದಿಂದಲೂ ಆನೇಕಲ್ ತಹಸೀಲ್ದಾರ್ ಹುದ್ದೆ ಮ್ಯೂಜಿಕಲ್ ಚೇರ್ ಆಗಿದೆ. ದಿನ ಬೆಳಗಾಗುವುದರೊಳಗೆ ತಹಸೀಲ್ದಾರ್ ಬದಲಾಗುತ್ತಿದ್ದಾರೆ. ನಿನ್ನೆ ಸಂಜೆ ನೋಡಿದ ತಹಸೀಲ್ದಾರ್ ಮುಖ ನಾಳೆ ಬೆಳಗ್ಗೆ ಬದಲಾಗಿರುತ್ತದೆ. ಸಾರ್ವಜನಿಕರಿಗೂ ಪದೇ ಪದೇ ತಹಸೀಲ್ದಾರ್ ಬದಲಾವಣೆ ನೋಡಿ ಬೇಸತ್ತು ಹೋಗಿದೆ.

Facebook Comments