ಭಾರತದ ಜೊತೆ ಮೈತ್ರಿಗೆ ಮನವಿ ಮಾಡಿದ ತಾಲಿಬಾನ್ ಉಗ್ರರು..!

ಈ ಸುದ್ದಿಯನ್ನು ಶೇರ್ ಮಾಡಿ

ಕಾಬೂಲ್, ಅ.16- ಅಫ್ಘಾನಿಸ್ತಾನ ಮರುನಿರ್ಮಾಣಕ್ಕೆ ಭಾರತದ ಬೆಂಬಲ ಅತ್ಯಗತ್ಯವಾಗಿದ್ದು, ಅದರೊಂದಿಗೆ ಮೈತ್ರಿ ಬಯಸುವುದಾಗಿ ತಾಲಿಬಾನ್ ಉಗ್ರಗಾಮಿ ಸಂಘಟನೆ ಹೇಳಿದೆ.
ಭಾರತ ಸೇರಿದಂತೆ ವಿಶ್ವದ ಇತರ ಯಾವುದೇ ದೇಶಗಳೊಂದಿಗೆ ತಾವು ಮೈತ್ರಿಯನ್ನು ಮಾತ್ರ ಹೊಂದಲು ಪ್ರಯತ್ನಿಸುತ್ತಿದ್ದೇವೆ ಎಂದು ತಾಲಿಬಾನ್ ಸಮೂಹದ ಅಧಿಕೃತ ಪ್ರತಿನಿಧಿ ಮುಹಮ್ಮದ್ ಸುಹೇಲ್‍ಶಾಹೀನ್ ಹೇಳಿದ್ದಾರೆ.

ಸೇನಾ ಕ್ರಮಗಳಿಂದ ಏನನ್ನೂ ಸಾಧಿಸಲಾಗದು ಶಾಂತಿಯುತ ಚರ್ಚೆಗಳ ಮೂಲಕವೇ ಎಲ್ಲ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ. ತಮ್ಮ ದೇಶದಿಂದ ಅಮೆರಿಕಾ ಸೇನಾ ಪಡೆಗಳನ್ನು ಹಿಂದಕ್ಕೆ ಕರೆಸಿಕೊಂಡ ಮಾತ್ರಕ್ಕೆ ಭಾರತ ಭಯಪಡಬೇಕಾದ ಅಗತ್ಯವಿಲ್ಲ. ಅಫ್ಘಾನಿಸ್ತಾನದಲ್ಲಿ ನಿಯೋಜಿಸಲಾಗಿರುವ ತಮ್ಮ ಸೈನ್ಯದ ಮೇಲೆ ದಾಳಿ ನಡೆಸಲಿದೆ ಎಂದು ತಾಲಿಬಾನ್ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ ಟ್ರಂಪ್ ಆರೋಪಿಸಿದ್ದಾರೆ. ಯಾರ ಮೇಲೂ ತಾಲಿಬಾನ್ ದಾಳಿ ನಡೆಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಶಾಹೀನ್ ತಮ್ಮ ನೀತಿಗಳನ್ನು ಸ್ಪಷ್ಟಪಡಿಸಿದರು. ಕಳೆದ 18 ವರ್ಷಗಳಿಂದ ಸೇನೆಯ ಮೂಲಕ ಅಮೆರಿಕಾ ನಡೆಸಿದ ಪ್ರಯತ್ನಗಳು ಯಾವುದೇ ಉತ್ತಮ ಫಲಿತಾಂಶ ನೀಡಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಅಫ್ಘಾನಿಸ್ತಾನ ಸಮಸ್ಯೆಗೆ ಅಮೆರಿಕ ಪರಿಹಾರ ಹೊಂದಿದ್ದರೆ, ನಾವು ಶಾಂತಿ ಒಪ್ಪಂದಕ್ಕೆ ಸಹಿ ಹಾಕಲು ಸಿದ್ಧರಿದ್ದೇವೆ.

ಆ ರೀತಿ ನಡೆಯದಿದ್ದರೆ ಅವರು ಕಹಿ ಅನುಭವಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ತಾಲಿಬಾನ್ ಉಗ್ರಗಾಮಿ ಸಂಘಟನೆಯ ಈ ಹೊಸ ಪ್ರಸ್ತಾವದ ಬಗ್ಗೆ ಭಾರತ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Facebook Comments