ಉದ್ಘಾಟನೆಗೆ ಸಜ್ಜಾದ ಗೌರಿಬಿದನೂರು ಮಿನಿ ವಿಧಾನಸೌಧ

ಈ ಸುದ್ದಿಯನ್ನು ಶೇರ್ ಮಾಡಿ

ಗೌರಿಬಿದನೂರು, ಜ.5- ತಾಲೂಕಿನ ಜನತೆ ಬಹು ದಿನಗಳಿಂದ ನಿರೀಕ್ಷಿಸಿದ್ದ ಮಿನಿ ವಿಧಾನಸೌಧದ ಕಾಮಗಾರಿ ಮುಕ್ತಾಯವಾಗಿದ್ದು, ಜ.7ರಂದು ಲೋಕಾರ್ಪಣೆಗೆ ಸಜ್ಜಾಗಲಿದೆ.
ನಗರದಲ್ಲಿ ಬ್ರಿಟೀಷರ ಕಾಲದಲ್ಲಿ ನಿರ್ಮಾಣವಾಗಿದ್ದ ಕಟ್ಟಡದಲ್ಲಿ ಇಲ್ಲಿಯವರೆಗೆ ತಾಲೂಕು ಕಚೇರಿ ಇತ್ತು. ಆದರೆ ಕಟ್ಟಡದಲ್ಲಿ ಜಗವಿಲ್ಲದ ಕಾರಣ ಬೆರಳೆಣಿಕೆಯಷ್ಟು ಇಲಾಖೆಗಳು ಮಾತ್ರ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದವು.

ವಿವಿಧ ಕೆಲಸಗಳಿಗೆಂದು ಬರುತ್ತಿದ್ದ ಜನ ಬೇರೆಡೆ ಇರುವ ಕಚೇರಿಗಳಿಗಾಗಿ ಅಲೆದಾಡಬೇಕಿತ್ತು. ಆದರೆ ಈಗ ಒಂದೇ ಸೂರಿನಡಿ ಎಲ್ಲ ಇಲಾಖೆಗಳನ್ನು ಒಳಗೊಂಡಿರುವ ಮಿನಿ ವಿಧಾನಸೌಧ 15 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದೆ. ಗೌರಿಬಿದನೂರು ಪುರಸಭೆ ನಗರಸಭೆಯಾದ ಬೆನ್ನಲ್ಲೇ ಮಿನಿ ವಿಧಾನಸೌಧ ಲೋಕಾರ್ಪಣೆಗೆ ಸಿದ್ಧಗೊಂಡಿದೆ.

ಎರಡು ಅಂತಸ್ತಿನ ಭವ್ಯ ಕಟ್ಟಡ  ಮಿನಿ ವಿಧಾನಸೌಧವೆಂಬುದು ತಾಲೂಕಿನ ಮಟ್ಟಿಗೆ ಶಕ್ತಿ ಸೌಧ ಹಾಗೂ ಆಡಳಿತ ಕೇಂದ್ರ. ಸುದೀರ್ಘ ಕಾಲ ಜನರ ಸೇವೆಗೆ ಒಲಿಯಬೇಕು. ಆದ್ದರಿಂದ ಶಿವಶಂಕರ ರೆಡ್ಡಿ ಹಾಗೂ ಅಧಿಕಾರಿಗಳ ತಂಡ ರಾಜ್ಯದ ವಿವಿಧೆಡೆ ನಿರ್ಮಿಸಿರುವ ಮಿನಿ ವಿಧಾನಸೌಧಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಯಲಹಂಕದಲ್ಲಿ ನಿರ್ಮಿಸಿರುವ ಆಕರ್ಷಕ ಮಾದರಿಯಲ್ಲಿ ಮಿನಿ ವಿಧಾನಸೌಧ ನಿರ್ಮಿಸಲಾಗಿದೆ.

ಸಿರುಗುಪ್ಪ ಸಕ್ಕರೆ ಕಾರ್ಖಾನೆ ಬಳಿ ಕರ್ನಾಟಕ ಗೃಹ ಮಂಡಳಿಯ ವತಿಯಿಂದ ಸುಮಾರು 15 ಕೋಟಿ ರೂ. ವೆಚ್ಚದಲ್ಲಿ ಮಿನಿ ವಿಧಾನಸೌಧ ಕಾಮಗಾರಿಯನ್ನು ಪೂರ್ಣಗೊಳಿಸಿದ್ದಾರೆ.
ಒಂದೇ ಸೂರಿನಡಿ ಎಲ್ಲ ಕಚೇರಿ ತಹಸೀಲ್ದಾರ್ ಕಚೇರಿ, ತಹಸೀಲ್ದಾರ್ ನ್ಯಾಯಾಲಯ ಭವನ, ತಹಸೀಲ್ದಾರ್ ಕಚೇರಿಯ ಸಿಬ್ಬಂದಿ ಕಚೇರಿ, ಆಹಾರ ಇಲಾಖೆ, ಸರ್ವೇ ಇಲಾಖೆ, 250 ಮಂದಿ ಕೂರುವ ಸಭಾ ಭವನ, ಖಜಾನೆ, ಕಾರ್ಮಿಕ ಇಲಾಖೆ, ನೆಮ್ಮದಿ, ಭೂಮಿ, ಸಕಾಲ, ಗ್ರೇಡ್ 2 ತಹಸೀಲ್ದಾರ್, ಶಾಸಕರ ಕಚೇರಿ, ಅಬಕಾರಿ ಇಲಾಖೆ, ಕೃಷಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಕಚೇರಿಗಳು ನೂತನ ಕಟ್ಟಡದಲ್ಲಿ ಮುಂದಿನ ದಿನಗಳಲ್ಲಿ ಸೇವೆ ನೀಡಲಿದೆ.

ಯಲಹಂಕದ ಮಿನಿ ವಿಧಾನಸೌಧವನ್ನು ನಿರ್ಮಿಸಿದ್ದ ಸಂಸ್ಥೆಯವರೇ ಇಲ್ಲಿನ ಮಿನಿ ವಿಧಾನಸೌಧ ನಿರ್ಮಾಣ ಕಾರ್ಯವನ್ನು ನಡೆಸಿದ್ದಾರೆ. ಆಡಳಿತದ ಹಿತದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಗೌರಿಬಿದನೂರನ್ನು ಪ್ರತ್ಯೇಕ ಉಪ ವಿಭಾಗದ ವ್ಯಾಪ್ತಿಗೆ ತರುವುದು ಶಾಸಕ ಶಿವಶಂಕರರೆಡ್ಡಿರವರ ಉದ್ದೇಶವಾಗಿದೆ. ಆಗ ಮಿನಿ ವಿಧಾನಸೌಧದಲ್ಲೇ ಉಪ ವಿಭಾಗಾಧಿಕಾರಿ ಕಚೇರಿ ಕೂಡ ಕಾರ್ಯ ನಿರ್ವಹಿಸಲಿದೆ. ಶಿವಶಂಕರ ರೆಡ್ಡಿ ಆಡಳಿತದ ಅವಧಿಯಲ್ಲಿ ನಡೆದ ವಿವಿಧ ಅಭಿವೃದ್ಧಿ ಕೆಲಸಗಳ ಪೈಕಿ ಮಿನಿ ವಿಧಾನ ಸೌಧ ನಿರ್ಮಾಣ ಸುವರ್ಣಾಕ್ಷರಗಳಲ್ಲಿ ದಾಖಲಾಗಲಿದೆ.

# ಒಂದೇ ಸೂರಿನಡಿ ಎಲ್ಲ ಇಲಾಖೆ ಕಚೇರಿಗಳನ್ನು ಒಳಗೊಂಡ ತಾಲೂಕು ಆಡಳಿತ ಭವನ ನಿರ್ಮಿಸಬೇಕು ಎಂಬುದು ತಾಲೂಕಿನ ಜನತೆ ಹಾಗೂ ನನ್ನ ಬಹುದಿನಗಳ ಕನಸಾಗಿತ್ತು. ಈಗ ಕನಸು ನನಸಾಗುತ್ತಿದೆ. ಜನತೆ ಶಾಶ್ವತವಾದ ಅಭಿವೃದ್ಧಿ ಕೆಲಸಗಳನ್ನು ಒದಗಿಸುವುದು ನನ್ನ ಗುರಿಯಾಗಿದ್ದು, ಮುಂದುವರೆಸುತ್ತೇನೆ ಎಂದು ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಭರವಸೆ ನೀಡಿದ್ದಾರೆ.

ಕ್ಷೇತ್ರದ ಅಭಿವೃದ್ಧಿಯ ಹರಿಕಾರ ಶಾಸಕ ಎನ್.ಎಚ್.ಶಿವಶಂಕರ ರೆಡ್ಡಿ ಅವರ ದೂರದೃಷ್ಟಿಯ ಫಲವಾಗಿ ಭವ್ಯವಾದ ಆಡಳಿತ ಭವನ ನಿರ್ಮಾಣವಾಗಿದೆ. ಮುಂದೆ ಉಪ ವಿಭಾಗವಾದಲ್ಲಿ ಜನತೆಗೆ ಇನ್ನಷ್ಟು ಅನುಕೂಲವಾಗಲಿದೆ.-ಲೋಕೇಶ್ ,ತಾ.ಪಂ.ಅಧ್ಯಕ್ಷ

ನಗರದ ಸ್ವಂತ ಕಟ್ಟಡಗಳನ್ನು ಹೊಂದಿರುವ ಕಚೇರಿಗಳನ್ನು ಹೊರತು ಪಡಿಸಿ ಉಳಿದೆಲ್ಲಾ ಕಚೇರಿಗಳು ಸಹ ಜ.7 ರಂದು ಮಿನಿ ವಿಧಾನಸೌಧ ಲೋಕಾರ್ಪಣೆಗೊಂಡ ಬಳಿಕ ಸ್ಥಳಾಂತರಗೊಳ್ಳಲಿದೆ, ನಗರಸಭೆ ತಾಲೂಕು ಕಚೇರಿ ಕಟ್ಟಡಕ್ಕೆ, ನಗರ ಪೊಲೀಸ್ ಠಾಣೆ ನಗರಸಭೆ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದೆ ಎಂದು ತಹಶೀಲ್ದಾರ್ ಎಚ್.ಶ್ರೀನಿವಾಸ್ ತಿಳಿಸಿದ್ದಾರೆ.

Facebook Comments