ಖ್ಯಾತ ತಮಿಳು ಹಾಸ್ಯ ನಟ ವಿವೇಕ್​ ಇನ್ನಿಲ್ಲ.. !

ಈ ಸುದ್ದಿಯನ್ನು ಶೇರ್ ಮಾಡಿ

ಚೆನ್ನೈ: ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದ ತಮಿಳು ಚಿತ್ರರಂಗದ ಹಿರಿಯ ಹಾಸ್ಯ ಕಲಾವಿದ ವಿವೇಕ್ ಚಿಕಿತ್ಸೆ ಫಲಿಸದೇ ಇಂದು ಬೆಳಗ್ಗೆ ವಿಧಿವಶರಾಗಿದ್ದಾರೆ.​ ಅವರಿಗೆ 59 ವರ್ಷ ವಯಸ್ಸಾಗಿತ್ತು. ತಮಿಳು ಸೇರಿದಂತೆ ಇತರೆ ಭಾಷೆಗಳಲ್ಲಿ 200 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಿನಿಮಾ ಶೂಟಿಂಗ್​ನಲ್ಲಿ ನಿರತರಾಗಿದ್ದ ವೇಳೆಯಲ್ಲಿ ಆರೋಗ್ಯದಲ್ಲಿ ಏರುಪೇರು ಕಂಡು ಬಂದ ಹಿನ್ನೆಲೆ ಕೂಡಲೇ ಅವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಇಂದು ನಿಧನರಾಗಿದ್ದಾರೆ.

ಸೂಪರ್​ಸ್ಟಾರ್​ ರಜಿನಿಕಾಂತ್​ರನ್ನು ತಮಿಳು ಚಿತ್ರರಂಗಕ್ಕೆ ಪರಿಚಯಿಸಿದ ಹಿರಿಯ ನಿರ್ದೇಶಕ ಕೆ. ಬಾಲಚಂದರ್​ ಅವರೇ ವಿವೇಕ್​ರನ್ನು ಸಹ ಪರಿಚಯಿಸಿದರು. ವಿವೇಕ್​ ಸಾಕಷ್ಟು ಚಿತ್ರಗಳಲ್ಲಿ ಹಾಸ್ಯ ಕಲಾವಿದರಾಗಿ ನಟಿಸಿದ್ದಾರೆ. ಖುಷಿ, ಮಿನ್ನಾಲೆ, ಮುಗವರೀ, ದಮ್​ ದಮ್​ ದಮ್​, ಶಿವಾಜಿ ಸೇರಿದಂತೆ ಹಲವಾರು ಪ್ರಮುಖ ಚಿತ್ರಗಳಲ್ಲಿ ವಿವೇಕ್​ ಹಾಸ್ಯದ ಹೊಳೆಯನ್ನೇ ಹರಿಸಿದ್ದಾರೆ.

ಈ ಮೊದಲು ಹೃದಯ ಸಂಬಂಧಿ ಸಮಸ್ಯೆಗೆ ವಿವೇಕ್ ತುತ್ತಾಗಿರಲಿಲ್ಲ. ಇದೇ ಮೊದಲ ಬಾರಿಗೆ ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್ ಸೋಂಕಿನ ಲಕ್ಷಣಗಳೂ ಕಾಣಿಸಿಕೊಂಡಿರಲಿಲ್ಲ. ಆದರೆ ರಕ್ತದೊತ್ತಡದಲ್ಲಿ ಮಾತ್ರ ಕೊಂಚ ಏರುಪೇರಾಗಿತ್ತು. ಹೀಗಾಗಿ ವೈದ್ಯರ ತಂಡ ಆರೋಗ್ಯ ಪರಿಸ್ಥಿತಿಯನ್ನು ಪರಿಶೀಲಿಸಿದ ನಂತರ ಆಯಂಜಿಯೋಗ್ರಾಮ್ ಚಿಕಿತ್ಸೆಗಾಗಿ ದಾಖಲು ಮಾಡಿಕೊಂಡಿದ್ದರು. ಅದಾಗ್ಯೂ ಪರಿಸ್ಥಿತಿ ಗಂಭೀರವಾಗಿತ್ತು. ಇಂದು ಮುಂಜಾನೆ ನಿಧನರಾಗಿದ್ದಾರೆ ಎಂದು ಎಸ್ ಐಎಂಎಸ್ ಆಸ್ಪತ್ರೆಯ ವರದಿ ತಿಳಿಸಿದೆ.

59 ವರ್ಷದ ನಟ ವಿವೇಕ್ ಅವರು ಏಪ್ರಿಲ್ 15ರಂದು ಮೊದಲ ಕೋವಿಡ್ ಲಸಿಕೆಯನ್ನು ಪಡೆದಿದ್ದರು. ಬಳಿಕ ಸುದ್ದಿಗಾರರ ಜತೆ ಮಾತನಾಡಿದ್ದ ಅವರು, ಯಾರೆಲ್ಲಾ ಲಸಿಕೆ ಪಡೆಯಲು ಅರ್ಹರೋ ಅವರೆಲ್ಲರೂ ಲಸಿಕೆ ಪಡೆಯುವಂತೆ ಮನವಿ ಮಾಡಿಕೊಂಡಿದ್ದರು.

ವಿವೇಕ್ 1989ರಲ್ಲಿ ಕೆ.ಎಸ್.ರವಿಕುಮಾರ್ ಅವರ “ಪುದು, ಪುದು ಅರ್ಥಂಗಳ್” ಸಿನಿಮಾದಲ್ಲಿ ನಟಿಸುವ ಮೂಲಕ ಬೆಳ್ಳಿ ತೆರೆಗೆ ಪ್ರವೇಶಿಸಿದ್ದರು. ನೂರಾರು ಸಿನಿಮಾಗಳಲ್ಲಿ ನಟಿಸಿರುವ ವಿವೇಕ್ ದೇಶದ ಪ್ರತಿಷ್ಠಿತ ಪದ್ಮಶ್ರೀ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

Facebook Comments

Sri Raghav

Admin