‘ಗಜ’ ಚಂಡಮಾರುತದ ಆರ್ಭಟಕ್ಕೆ 28 ಮಂದಿ ಬಲಿ..!

ಈ ಸುದ್ದಿಯನ್ನು ಶೇರ್ ಮಾಡಿ

Gaja--01

ಚೆನ್ನೈ. ನ.17 : ಗಂಟೆಗೆ 120 ಕಿಮೀ ವೇಗದಲ್ಲಿ ತೀರಕ್ಕೆ ಅಪ್ಪಳಿಸುತ್ತಿರುವ ಗಜ ಚಂಡಮಾರುತಕ್ಕೆ ತಮಿಳುನಾಡು ತತ್ತರಿಸಿದ್ದು, ಇದುವರೆಗೂ 28ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ನಿನ್ನೆ ಬೆಳಗಿನ ಜಾವ ನಾಗಪಟ್ಟನಂ ಮತ್ತು ವೇದರಣ್ಯಂ ಪ್ರದೇಶಗಳ ಮೂಲಕ ಗಜ ಸೈಕ್ಲೋನ್ ಮಾರುತಗಳು ತಮಿಳುನಾಡನ್ನು ಪ್ರವೇಶಿಸಿತು. ನಂತರ ಪುದುಕೊಟ್ಟೈ, ರಾಮನಾಥಪುರಂ, ತಿರುವರೂರ್ ಜಿಲ್ಲೆಗಳಿಗೆ ಅಪ್ಪಳಿಸಿದ ಸೈಕ್ಲೋನ್ ತಗ್ಗು ಪ್ರದೇಶಗಳಲ್ಲಿ ಭಾರಿ ಹಾನಿ ಮಾಡಿದೆ. ಈ ಮಧ್ಯೆ ಇಂತಹ ಪ್ರದೇಶಗಳಲ್ಲಿದ್ದ ಸುಮಾರು 80 ಸಾವಿರ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

ಸೈಕ್ಲೋನ್ ಅಬ್ಬರ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ. ಈಗಾಗಲೇ 470ಕ್ಕೂ ಹೆಚ್ಚು ಪರಿಹಾರ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಪರಿಹಾರ ಕಾರ್ಯ ಭರದಿಂದ ನಡೆಸಲಾಗುತ್ತಿದೆ. ಈ ಮಧ್ಯೆ ಮುಖ್ಯಮಂತ್ರಿ ಪಳನಿಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ‘ಮೃತ ಕುಟುಂಬಕ್ಕೆ 10 ಲಕ್ಷ ಪರಿಹಾರ ನೀಡುವುದಾಗಿ’ ತಿಳಿಸಿದ್ದಾರೆ. ಗಜ ಚಂಡಮಾರುತದಿಂದ ತಮಿಳುನಾಡಿನ ಸಮುದ್ರ ತೀರ ಪ್ರದೇಶಗಳಲ್ಲದೇ ನಾಗಪಟ್ಟಣಂ, ಕರೈಕಲ್, ಕಡಲೂರು, ಪುದುಚ್ಚೇರಿ, ತಂಜಾವೂರು ಪ್ರದೇಶಗಳನ್ನು ತಲುಪಿದ್ದು, ಚಂಡಮಾರುತದ ದಾಳಿಗೆ ಜನರು ತತ್ತರಿಸಿ ಕಂಗಲಾಗಿದ್ದಾರೆ.

2004ರ ಭೀಕರ ಸುನಾಮಿ ಸಂಭವಿಸಿದ ದಶಕದ ಬಳಿಕ ನಾಗಪಟ್ಟಣಂನಲ್ಲಿ ಮತ್ತೆ ಅಲ್ಲೋಲ ಕಲ್ಲೋಲ ವಾತಾವರಣ ನಿರ್ಮಾಣವಾಗಿದ್ದು, ತಮಿಳುನಾಡಿನ ಹಲವೆಡೆ ನೂರಾರು ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿವೆ. ಅಲ್ಲದೇ ಸಾವಿರಾರು ಮನೆಗಳಿಗೆ ಹಾನಿ ಆಗಿದೆ.  ಇದುವರೆಗೂ ತಮಿಳುನಾಡಿನ ಒಟ್ಟು 6 ಜಿಲ್ಲೆಗಳಲ್ಲಿ ಸುಮಾರು 80 ಸಾವಿರ ಮಂದಿಯನ್ನು ರಕ್ಷಿಸಲಾಗಿದ್ದು ಅವರಿಗಾಗಿ 300 ಆಶ್ರಯತಾಣಗಳನ್ನು ತೆರೆಯಲಾಗಿದೆ. ನಾಗಪಟ್ಟಣಂನಲ್ಲಿ ಇಂದೂ ಕೂಡಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಜೊತೆಗೆ ಅಪಾಯದಲ್ಲಿ ಸಿಲುಕಿರುವವರ ಸಹಾಯಕ್ಕೆ ರಾಜ್ಯ ಮಟ್ಟದಲ್ಲಿ 1070 ಹಾಗೂ ಜಿಲ್ಲೆಗಳಲ್ಲಿ 1077 ಸಹಾಯವಾಣಿಯನ್ನು ನೀಡಲಾಗಿದೆ.

ಗಜ ಚಂಡಮಾರುತದಿಂದ ತತ್ತರಿಸಿರುವ ತಮಿಳುನಾಡಿಗೆ ಕೇಂದ್ರ ಗೃಹ ಸಚಿವ ರಾಜ್‍ನಾಥ್ ಸಿಂಗ್ ರಕ್ಷಣಾ ಕ್ರಮಕೈಗೊಳ್ಳಲು ಮುಂದಾಗಿದ್ದು, ಗೃಹ ಇಲಾಖೆಯ ನಿರ್ದೇಶಕರಾಗಿರುವ ರಾಜೀವ್ ಅವರಿಗೆ ಸೂಚನೆ ನೀಡಿದ್ದಾರೆ. ಈ ಕುರಿತು ತಮಿಳುನಾಡು ಸಿಎಂ ಪಳನಿಸ್ವಾಮಿ ಅವರಿಂದ ಮಾಹಿತಿ ಪಡೆದಿದ್ದು, ಸನ್ನಿವೇಶದ ಮೇಲ್ವಿಚಾರಣೆ ಹಾಗೂ ಸಹಕಾರ ನೀಡಲಾಗುತ್ತಿದೆ ಎಂದು ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಇತ್ತ ಸಿಎಂ ಕೂಡ ರಾಜ್ಯದ ಜನರ ರಕ್ಷಣೆಗೆ ಮುಂದಾಗಿದ್ದು, ಅಪಾಯದಲ್ಲಿ ಸಿಲುಕಿರುವ ರಕ್ಷಣೆ ಹಾಗೂ ಸಂತ್ರಸ್ತರ ನೆರವಿಗೆ ಧಾವಿಸಿ ಎಂದು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

Facebook Comments