ತನ್ವೀರ್ ಸೇಠ್‍ಗೆ ಸಚಿವ ಸ್ಥಾನ ನೀಡುವಂತೆ ಮೈಸೂರು ಪಾಲಿಕೆ ಸದಸ್ಯರ ಒತ್ತಡ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಜೂ. 22- ಶಾಸಕ ತನ್ವೀರ್ ಸೇಠ್‍ಗೆ ಸಚಿವ ಸ್ಥಾನ ನೀಡುವಂತೆ ಪಾಲಿಕೆ ಸದಸ್ಯರು ಒತ್ತಡ ಹೇರುತ್ತಿದ್ದು ಸರ್ಕಾರ ಉಳಿಯುವ ಬಗ್ಗೆ ಸಂದೇಹ ಸೃಷ್ಠಿಯಾಗಿರುವ ಸಂದರ್ಭದಲ್ಲಿ ಕಾಂಗ್ರೆಸ್ ಸದಸ್ಯರ ಈ ನಡೆ ಟೀಕೆಗೆ ಗುರಿಯಾಗಿದೆ.

ಖಾಸಗಿ ಹೊಟೇಲ್‍ನಲ್ಲಿ ಮೇಯರ್ ಹಾಗೂ ಕಾಂಗ್ರೆಸ್ ಪಾಲಿಕೆ ಸದಸ್ಯರು ಸಭೆ ನಡೆಸಿ ಶಾಸಕ ತನ್ವೀರ್ ಸೇಠ್‍ಗೆ ಸಚಿವ ಸ್ಥಾನ ನೀಡಲೇಬೇಕೆಂದು ಆಗ್ರಹಿಸಿದ್ದಾರೆ. ಕಳೆದ ಎರಡು ದಿನಗಳ ಹಿಂದಷ್ಟೆ ಕೆಪಿಸಿಸಿಗೆ ರಾಜೀನಾಮೆ ನೀಡಿದ್ದ ತನ್ವೀರ್ ಸೇಠ್ ಬೆಂಬಲಿಗರು ಕಾಂಗ್ರೆಸ್ ಮುಖಂಡರ ಗಮನ ಸೆಳೆಯುವ ಯತ್ನ ನಡೆಸಿದ್ದರು. ಇದೀಗ ಸಚಿವ ಸ್ಥಾನ ನೀಡಲು ಪುರಪಿತೃಗಳು ಪಟ್ಟು ಹಿಡಿಯುವ ಮೂಲಕ ಒತ್ತಡ ಹಾಕಿದ್ದಾರೆ.

ತನ್ವೀರ್ ಸೇಠ್‍ಗೆ ಸಚಿವ ಸ್ಥಾನ ನೀಡದಿದ್ದರೆ ಪಾಲಿಕೆ ಸದಸ್ಯರು ಸಾಮೂಹಿಕ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ಅಲ್ಲದೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಪಕ್ಷ ಉಳಿಯಬೇಕೆಂದರೆ ತನ್ವೀರ್ ಸೇಠ್ ಅವರಿಗೆ ಸಚಿವ ಸ್ಥಾನ ನೀಡಲೇಬೇಕು ಎಂದು ಸದಸ್ಯರು ಆಗ್ರಹಿಸಿದ್ದಾರೆ.

ಕಾಂಗ್ರೆಸ್ ಹಾಗು ಪಕ್ಷೇತರರು ಸೇರಿ ಒಟ್ಟು 18 ಪಾಲಿಕೆ ಸದಸ್ಯರು ಸಭೆಯಲ್ಲಿ ಭಾಗಿಯಾಗಿ ಮುಖಂಡರ ಮೇಲೆ ಒತ್ತಡ ಹೇರಿದ್ದಾರೆ. ಜೊತೆಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ.

ಮೈತ್ರಿ ಸರ್ಕಾರದಲ್ಲಿ ಮಧ್ಯಂತರ ಚುನಾವಣೆ ಭೀತಿ ಎದುರಾಗಿದ್ದು, ಇದಕ್ಕೆ ದೇವೇಗೌಡರು ನೀಡಿರುವ ಹೇಳಿಕೆ ರಾಜಕೀಯ ವಲಯದಲ್ಲಿ ಸಾಕಷ್ಟು ತಲ್ಲಣವನ್ನೇ ಸೃಷ್ಟಿಸಿದೆ. ಇವೆಲ್ಲದರ ನಡುವೆ ಸರ್ಕಾರ ಉಳಿಸಿಕೊಳ್ಳಲು ಮೈತ್ರಿ ಪಕ್ಷಗಳ ಮುಖಂಡರು ಕಸರತ್ತು ನಡೆಸುತ್ತಿದ್ದು, ತನ್ವೀರ್ ಸೇಠ್ ಬೆಂಬಲಿಗರ ಈ ನಡೆಗೆ ಖಂಡನೆ ವ್ಯಕ್ತವಾಗಿದೆ.

Facebook Comments

Sri Raghav

Admin