ಸಾರಿಗೆ ಸಚಿವರ ಸಲಹೆ ಪಡೆದ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ತಾರಾ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.28- ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ತಾರಾ ಅನುರಾಧ ಅವರು ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ಅವರನ್ನು ಭೇಟಿಯಾಗಿ ಸಲಹೆ ಹಾಗೂ ಮಾರ್ಗದರ್ಶನವನ್ನು ಪಡೆದುಕೊಂಡರು. ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಮುಖ್ಯಮಂತ್ರಿಯವರ ಹಾಗೂ ತಮ್ಮ ಸಲಹೆಯಂತೆ ಹಲವಾರು ಅಭಿವೃದ್ಧಿ ಹಾಗೂ ಪರಿಸರ ಸ್ನೇಹಿ ಕಾರ್ಯಕ್ರಮಗಳನ್ನು ರಾಜ್ಯದಾದ್ಯಂತ ನಿಗಮದ ವತಿಯಿಂದ ಹಮ್ಮಿಕೊಳ್ಳಲಾಗುತ್ತಿದೆ ಎಂದು ಈ ವೇಳೆ ತಾರಾ ತಿಳಿಸಿದರು.

ದೇಶದ ರಾಜಧಾನಿ ದೆಹಲಿ ಇದೀಗ ವಾಯುಮಾಲಿನ್ಯ ದಿಂದಾಗಿ ಜನಜೀವನ ಕಷ್ಟ ಎಂಬಂತಹ ಸ್ಥಿತಿಗೆ ಬಂದಿದೆ. ವಾಯು ಮಾಲಿನ್ಯದಿಂದಾಗುವ ದುಷ್ಪರಿಣಾಮದಿಂದಾಗಿ ಜನರು ಹೊರಗೆ ಬರುವುದಕ್ಕೆ ಆತಂಕಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮ ರಾಜ್ಯದಲ್ಲೂ ಇಂತಹ ಪರಿಸ್ಥಿತಿ ಬರದಂತೆ ಈಗಿನಿಂದಲೇ ಮುನ್ನೆಚ್ಚರಿಕೆ ವಹಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.

ಪ್ರಸ್ತುತ ಸಾರಿಗೆ ಇಲಾಖೆಗೆ ಸಂಬಂಧಿಸಿದಂತೆ, ಒಂದು ವಾಹನಕ್ಕೆ-ಒಂದು ಗಿಡ ಎಂಬ ದ್ಯೇಯದೊಂದಿಗೆ ತಮ್ಮ ನೇತೃತ್ವದಲ್ಲಿ ಸಾರಿಗೆ ಇಲಾಖೆಯ ಸಹಯೋಗದೊಂದಿಗೆ ರಾಜ್ಯದ ಎಲ್ಲಾಬಸ್ ನಿಲ್ದಾಣ, ಬಸ್ ಘಟಕ, ತರಬೇತಿ ಕೇಂದ್ರ ಹಾಗೂ ಇತರೆ ಎಲ್ಲಾ ಸಾರಿಗೆ ಕಛೇರಿಗಳ ಆವರಣದಲ್ಲಿ ಗಿಡ ಬೆಳೆಸುವ ಮೂಲಕ ವಾಯು ಮಾಲಿನ್ಯ ನಿಯಂತ್ರಿಸಲು ಹಾಗೂ ಪರಿಸರ ಸ್ನೇಹಿ ಸಾರಿಗೆ ಇಲಾಖೆಯನ್ನಾಗಿಸಲು ನಿಗಮವು ಉದ್ದೇಶಿಸಿದೆ.

ಇದಕ್ಕೆ ಅಗತ್ಯ ಕ್ರಮ ಕೈಗೊಳ್ಳಲು ಸಾರಿಗೆ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲು ಹಾಗೂ ಈ ಯೋಜನೆಗೆ ಬೆಂಗಳೂರಿನ ಕೇಂದ್ರ ಕಚೇರಿ ಅಥವಾ ತಾವು ತಿಳಿಸಿದ ಸ್ಥಳದಲ್ಲಿ ಚಾಲನೆ ನೀಡಲು ದಿನಾಂಕ ನಿಗದಿಪಡಿಸಿ ತಿಳಿಸುವಂತೆ ಲಕ್ಷ್ಮಣ ಸವದಿ ಅವರನ್ನು ತಾರಾ ಕೋರಿದರು.

Facebook Comments