ಒಂದೇ ರಸ್ತೆಯಲ್ಲಿ ಹಾಲಿ ಸಿಎಂ ಸೇರಿ ಮೂವರು ಮಾಜಿ ಸಿಎಂಗಳ ಮನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.28- ನಗರದ ಒಂದೇ ರಸ್ತೆಯಲ್ಲಿ ಮೂವರು ಮಾಜಿ ಮುಖ್ಯಮಂತ್ರಿಗಳ ಮತ್ತು ಒಬ್ಬರು ಹಾಲಿ ಮುಖ್ಯಮಂತ್ರಿ ಅವರ ನಿವಾಸಗಳಿವೆ. ಬೆಂಗಳೂರಿನಲ್ಲಿ ಡಾಲರ್ಸ್ ಕಾಲೋನಿ ಹೊರತು ಪಡಿಸಿದರೆ ಅತಿಹೆಚ್ಚು ಪ್ರಭಾವಿ ರಾಜಕಾರಣಿಗಳಿರುವ ಪ್ರದೇಶ ಆರ್.ಟಿ.ನಗರ. ಅದರಲ್ಲೂ ತರಳಬಾಳು ಮುಖ್ಯರಸ್ತೆ ಮೂವರು ಮಾಜಿ ಮುಖ್ಯಮಂತ್ರಿಗಳು ಹಾಗೂ ಹಾಲಿ ಮುಖ್ಯಮಂತ್ರಿಗಳ ನಿವಾಸಗಳನ್ನು ಹೊಂದಿದೆ.

ಆರ್.ಟಿ.ನಗರದ ತರಳಬಾಳುರಸ್ತೆಯುದ್ದಕ್ಕೂ ಮಾಜಿ ಮುಖ್ಯಮಂತ್ರಿಗಳಾದ ಆರ್.ಗುಂಡುರಾವ್, ವೀರಪ್ಪಮೊಯ್ಲಿ ಅವರ ನಿವಾಸಗಳಿದ್ದು, ಧರ್ಮಸಿಂಗ್ ಕೂಡ ಅದೇ ರಸ್ತೆಯಲ್ಲಿ ವಾಸಿಸುತ್ತಿದ್ದರು. ಈಗ ಹೊಸದಾಗಿ ಮುಖ್ಯಮಂತ್ರಿಯಾಗಿರುವ ಬಸವರಾಜ ಬೊಮ್ಮಾಯಿ ಕೂಡ ಅದೇ ರಸ್ತೆಯಲ್ಲಿ ವಾಸಿಸುತ್ತಿದ್ದಾರೆ.

ರಸ್ತೆಯಲ್ಲಿ ಮೊದಲು ಸಿಗುವುದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರ ಮನೆ, ಕೊನೆಯಲ್ಲಿ ಮಾಜಿ ಮುಖ್ಯಮಂತ್ರಿ ಆರ್.ಗುಂಡುರಾವ್ ಅವರ ನಿವಾಸವಿದೆ. ಗುಂಡರಾವ್ ಅವರ ನಿವಾಸದಲ್ಲಿ ಈಗ ಅವರ ಪುತ್ರರಾದ ಶಾಸಕ ದಿನೇಶ್ ಗುಂಡುರಾವ್ ವಾಸಿಸುತ್ತಿದ್ದಾರೆ. ಅದರ ಪಕ್ಕದಲ್ಲಿ ಧರ್ಮಸಿಂಗ್ ಅವರ ಮನೆಯಿತ್ತು. ಧರ್ಮಸಿಂಗ್ ಮುಖ್ಯಮಂತ್ರಿಯಾಗುವಾಗ ಅದೇ ನಿವಾಸದಲ್ಲಿ ವಾಸವಿದ್ದರು. ಬಳಿಕ ಸರ್ಕಾರಿ ನಿವಾಸಕ್ಕೆ ಸ್ಥಳಾಂತರಗೊಂಡರು. ಇತ್ತೀಚೆಗೆ ಅವರ ಪುತ್ರರಾದ ಅಜಯ್ ಧರ್ಮಸಿಂಗ್ ಸದಾಶಿವನಗರದಲ್ಲಿ ಹೊಸ ಮನೆ ನಿರ್ಮಿಸಿಕೊಂಡು ಸ್ಥಳಾಂತರವಾಗಿದ್ದಾರೆ.

ಧರ್ಮಸಿಂಗ್ ವಾಸಿಸುತ್ತಿದ್ದ ಮನೆಯ ಪಕ್ಕದಲ್ಲಿ ಬಸವರಾಜ ಬೊಮ್ಮಾಯಿ ಅವರ ನಿವಾಸವಿದೆ. ಗೃಹ ಸಚಿವರಾಗಿದ್ದರೂ ಹೆಚ್ಚು ಆಡಂಬರ ಇಲ್ಲದೆ ಅಕ್ಕಪಕ್ಕದವರಿಗೆ ತೊಂದರೆಯಾಗದಂತೆ ಬೊಮ್ಮಾಯಿ ವಾಸಿಸುತ್ತಿದ್ದರು. ಜೀರೋ ಟ್ರಾಫಿಕ್, ಪೊಲೀಸರ ಬಿಗಿ ಭದ್ರತೆಯ ಕಿರಿಕಿರಿ ಆ ಭಾಗದ ಜನರಿಗೆ ಇರಲಿಲ್ಲ.

ಆದರೆ ನಿನ್ನೆ ಮುಖ್ಯಮಂತ್ರಿಯಾಗಿ ಘೋಷಣೆಯಾಗುತ್ತಿದ್ದಂತೆ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ರಸ್ತೆಗೆ ಬ್ಯಾರಿಕೇಡ್ ಹಾಕಿ ಸಾರ್ವಜನಿಕ ಸಂಚಾರದ ಮಾರ್ಗ ಬದಲಾಯಿಸಲಾಗಿದೆ. ಅತ್ಯಂತ ಸರಳವಾಗಿ ವಾಸಿಸುತ್ತಿದ್ದ ಬೊಮ್ಮಾಯಿ ಅವರ ಈ ಬದಲಾವಣೆ ಹುಬ್ಬೆರಿಸುವಂತೆ ಮಾಡಿದೆ. ತರಳಬಾಳು ರಸ್ತೆಯಲ್ಲಿ ವಾಸಿಸುತ್ತಿದ್ದ ಧರ್ಮಸಿಂಗ್ ಕೂಡ ಆಕಸ್ಮಿಕ ಸಂದರ್ಭದಲ್ಲಿ ಅಧಿಕಾರಕ್ಕೇರಿದರು. ಈಗ ಬೊಮ್ಮಾಯಿ ಅವರಿಗೂ ಅದೇ ರೀತಿ ಅದೃಷ್ಟ ಒಲಿದು ಬಂದಿದೆ.

Facebook Comments