ಕಾರ್ಮಿಕರ ಸಂಕಷ್ಟಕ್ಕೆ ಸ್ಪಂದಿಸಲು ಸರ್ಕಾರ ರಚಿಸಿದ್ದ ಟಾಸ್ಕ್‍ಫೋರ್ಸ್ ನಿಷ್ಕ್ರಿಯ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 29- ಕೊರೊನಾ ಸಂದರ್ಭದಲ್ಲಿ ಕಾರ್ಮಿಕರ ಸಂಕಷ್ಟಗಳಿಗೆ ಸ್ಪಂದಿಸಲು ರಚಿಸಲಾಗಿದ್ದ ಮಹತ್ವದ ಸಮಿತಿ ಸಂಪೂರ್ಣ ನಿಷ್ಕ್ರಿಯವಾಗಿದ್ದು, ಸರ್ಕಾರದ ಉದ್ದೇಶ ವಿಫಲಗೊಂಡಿದೆ. ಕೊರೊನಾ ಸೋಂಕು ಹೆಚ್ಚಾಗಿ ಲಾಕ್‍ಡೌನ್ ಘೋಷಣೆಯಾದ ಬಳಿಕ ಎಲ್ಲಾ ಆರ್ಥಿಕ ಚಟುವಟಿಕೆಗಳು, ವಹಿವಾಟು, ಉತ್ಪಾದನೆಗಳು ಸ್ಥಗಿತಗೊಂಡವು. ಆ ಸಂದರ್ಭದಲ್ಲಿ ಉದ್ಯಮಿಗಳು ಆರ್ಥಿಕ ನಷ್ಟದಿಂದ ಪಾರಾಗಲು ಸಿಬ್ಬಂದಿಗಳು ಹಾಗೂ ಕಾರ್ಮಿಕರ ವೇತನ ಕಡಿತಕ್ಕೆ ಮುಂದಾದರು. ಇದು ಕಾರ್ಮಿಕ ವಲಯದಲ್ಲಿ ಹಾಹಾಕಾರ ಸೃಷ್ಟಿಸಿತು.

ಕಾರ್ಮಿಕರಲ್ಲಿ ಆತ್ಮವಿಶ್ವಾಸ ತುಂಬಲು, ಅವರ ಕಷ್ಟಗಳಿಗೆ ಸ್ಪಂದಿಸಲು ಸಂಘಟಿತ ಹಾಗೂ ಅಸಂಘಟಿತ ಕಾರ್ಮಿಕರ ವೇತನ ಸಂಬಂಧಿತ ಹಾಗೂ ಕೆಲಸದಿಂದ ವಜಾಗೊಳಿಸದಿರುವ ಬಗ್ಗೆ ಅವಹವಾಲುಗಳನ್ನು ಪರಿಶೀಲಿಸಲು ಏ.3ರಂದು ರಾಜ್ಯ ಸರ್ಕಾರ ಟಾಸ್ಕ್‍ಪೋರ್ಸ್ ಸಮಿತಿಯನ್ನು ರಚನೆ ಮಾಡಿತ್ತು.

ಕಾರ್ಮಿಕ ಇಲಾಖೆಯ ಅಪರ ಕಾರ್ಮಿಕ ಆಯುಕ್ತರು ಅಧ್ಯಕ್ಷರಾಗಿದ್ದರು. ಕೈಗಾರಿಕೆ ಸುರಕ್ಷೆ ಮತ್ತು ಸ್ವಾಸ್ಥ್ಯ ಇಲಾಖೆಯ ನಿರ್ದೇಶಕರು, ಕ್ರಡೈ ಸಂಸ್ಥೆಯ ಅಧ್ಯಕ್ಷರು, ಎಫ್‍ಕೆಸಿಸಿಐ, ಕಾಸಿಯಾ, ಸಿಐಐ, ಪೀಣ್ಯ ಕೈಗಾರಿಕಾ ಸಂಘದ ಪ್ರತಿನಿಧಿಗಳು, ಎಐಟಿಯುಸಿ, ಸಿಐಟಿಯು, ಇಂಟೆಕ್ ಸೇರಿ ಸುಮಾರು 13 ಸಂಘಟನೆಗಳ ಪ್ರತಿನಿಧಿಗಳನ್ನು ಸದಸ್ಯರನ್ನಾಗಿ ನೇಮಿಸಲಾಯಿತು.

ಈ ಟಾಸ್ಕ್‍ಪೋರ್ಸ್ ಕಡ್ಡಾಯವಾಗಿ ಎರಡು ದಿನಗಳಿಗೊಮ್ಮೆ ಸಭೆ ಸೇರಬೇಕು. ಕಾರ್ಮಿಕರ ಸಮಸ್ಯೆಗಳಿಗೆ ಧ್ವನಿಯಾಗಬೇಕು ಎಂದು ಸೂಚಿಸಲಾಗಿತ್ತು. ಆದರೆ ಎರಡು ದಿನಕ್ಕೊಮ್ಮೆ ಸಭೆ ನಡೆದಿಲ್ಲ. ಮೇ 4 ಮತ್ತು 18ರಂದು ಎರಡು ಸಭೆಗಳು ನಡೆದಿವೆ. ಈ ಸಭೆಗಳ ಮುಂದೆ ಸುಮಾರು ಒಂದು ಸಾವಿರಕ್ಕೂ ಹೆಚ್ಚಿನ ಅಹವಾಲುಗಳು ಸಲ್ಲಿಕೆಯಾಗಿವೆ. ಸರಿಸುಮಾರು 2ಸಾವಿರಕ್ಕೂ ಹೆಚ್ಚಿನ ಅಹವಾಲುಗಳನ್ನು ಬಗೆಹರಿಸುವುದು ಕಾರ್ಮಿಕ ಇಲಾಖೆಗೆ ತಲೆನೋವಿನ ಸಂಗತಿಯಾಗಿತ್ತು.

ಆದರೂ, ಕಾರ್ಮಿಕ ಇಲಾಖೆಯ ಕಾರ್ಯದರ್ಶಿಯಾಗಿದ್ದ ಮಣಿವಣ್ಣನ್ ಅವರು, ಕಾರ್ಮಿಕರಿಗೆ ವೇತನ ಕೊಡದ, ಕೆಲಸದಿಂದ ತೆಗೆಯುವ ಉದ್ಯಮಿಗಳಿಗೆ ನೋಟಿಸ್ ನೀಡುವಂತೆ ಕೆಳ ಹಂತದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಟಾಸ್ಕ್‍ಪೋರ್ಸ್ ಸಮಿತಿ ನೋಟಿಸ್ ನೀಡಲು ಮುಂದಾಗಿತ್ತು. ಆದರೆ, ಕಾರ್ಮಿಕ ಸಚಿವರು ಮಧ್ಯ ಪ್ರವೇಶ ಮಾಡಿ ಉದ್ಯಮಿಗಳಿಗೆ ನೋಟಿಸ್ ನೀಡದಂತೆ ಅಡ್ಡಿಪಡಿಸಿದರು. ಐಟಿ-ಬಿಟಿ, ಗಾರ್ಮೆಂಟ್ಸ್ ಸೇರಿದಂತೆ ಹಲವಾರು ವಲಯಗಳಿಂದ ಕಾರ್ಮಿಕ ಇಲಾಖೆಗೆ ದೂರುಗಳ ಮಹಾಪೂರವೇ ಹರಿದು ಬಂದಿದೆ.

ಇದನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಲು ಟಾಸ್ಕ್ ಪೋರ್ಸ್ ಸಮಿತಿಯಲ್ಲಿ ಚರ್ಚೆ ನಡೆಸಿದಾಗ ಸಚಿವ ಹಸ್ತಕ್ಷೇಪ ಮುಜುಗರ ಉಂಟು ಮಾಡಿದೆ.  ಹೀಗಾಗಿ ಸಭೆ ನಡೆಸಿ ಪ್ರಯೋಜನವೇನು ಎಂಬ ನಿರ್ಧಾರಕ್ಕೆ ಅಧಿಕಾರಿಗಳು ಬಂದು ತಟಸ್ಥ ನಿಲುವು ತೆಗೆದುಕೊಂಡಿದ್ದಾರೆ.

ಹೀಗಾಗಿ ಪ್ರತಿ ಎರಡು ದಿನವಿರಲಿ ವಾರಕ್ಕೊಮ್ಮೆ ಸಭೆಯೂ ನಡೆಯುತ್ತಿಲ್ಲ. ಮುಖ್ಯಮಂತ್ರಿಯಡಿಯೂರಪ್ಪ ಅವರು ಕಾರ್ಮಿಕರ ಕಷ್ಟಗಳಿಗೆ ಸ್ಪಂದಿಸುವ ಮಹತ್ವಾಕಾಂಕೆಯೊಂದಿಗೆ ರಚಿಸಿದ ಸಮಿತಿ ನಿರರ್ತಕವಾಗಿದೆ. ಕಾರ್ಮಿಕರ ಖಾಸಗಿ ವಲಯದ ನೌಕರರ ಗೋಳು ಕೇಳುವವರು ಇಲ್ಲದಂತಾಗಿದೆ.

Facebook Comments