ಸಂಕಷ್ಟ ಸಮಯದಲ್ಲೂ ತೆರಿಗೆ ವಸೂಲಿಗೆ ಸರ್ಕಾರ ಅಧಿಕಾರಿಗಳಿಗೆ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.2- ಲಾಕ್ ಡೌನ್ ನಿಂದಾಗಿ ಆರ್ಥಿಕ ಚಟುವಟಿಕೆಗಳು ಕುಸಿದು ಹೋಗಿದ್ದು, ಜನ ಹಣಕಾಸಿನ ಮುಗ್ಗಟ್ಟಿನಿಂದ ಪರದಾಡುತ್ತಿದ್ದಾರೆ. ಸಂಕಷ್ಟ ಸಮಯದಲ್ಲೂ ರಾಜ್ಯ ಸರ್ಕಾರ ನಿಷ್ಕರುಣಿಯಾಗಿ ವಿವಿಧ ರೀತಿಯ ತೆರಿಗೆಗಳ ವಸೂಲಿಗೆ ಕಿರುಕೂಳ ನೀಡಲಾರಂಭಿಸಿದೆ. ಕೊರೊನಾ ಸೋಂಕಿನ ಪ್ರಮಾಣವನ್ನು ಮತ್ತಷ್ಟು ತಗ್ಗಿಸಲು ಈವರೆಗೂ 28 ದಿನಗಳ ಲಾಕ್ ಡೌನ್ ಘೋಷಣೆ ಮಾಡಲಾಗಿದೆ, ಅದನ್ನು ಮತ್ತೆ ಒಂದು ವಾರ ವಿಸ್ತರಣೆ ಮಾಡುವ ಚರ್ಚೆಗಳು ನಡೆಯುತ್ತಿವೆ.

ಬೆಳಗ್ಗೆ ಆರು ಗಂಟೆಯಿಂದ 10 ಗಂಟೆಯವರೆಗೆ ಮಾತ್ರ ಅಗತ್ಯ ವಸ್ತುಗಳ ಮಾರಾಟಕ್ಕೆ ಸರ್ಕಾರ ಅನುಮತಿ ನೀಡಿದೆ. ಹೂ, ಹಣ್ಣು, ತರಕಾರಿ, ದಿನಗಳು, ಮಧ್ಯ, ಆಹಾರ ಪದಾರ್ಥಗಳನ್ನು ಹೊರತು ಪಡಿಸಿ ಉಳಿದೆಲ್ಲಾ ಚಟುವಟಿಕೆಗಳಿಗೆ ಕಡಿವಾಣ ಇದೆ. ಉಳಿದ ವ್ಯಾಪಾರೋದ್ಯಮಗಳು ಮತ್ತಷ್ಟು ಶೋಚನಿಯ ಸ್ಥಿತಿಗೆ ತಲುಪಿವೆ. ಸುಮಾರು ಒಂದು ವರ್ಷದಿಂದ ವ್ಯಾಪಾರೋದ್ಯಮಗಳು ಕುಸಿದು ಜನರ ಆದಾಯ ಮಟ್ಟವೇ ಇಳಿಮುಖವಾಗಿದೆ. ಇನ್ನೇನು ಚೇತರಿಕೆಯ ಹಂತದಲ್ಲಿತ್ತು ಎಂಬ ಹಂತದಲ್ಲಿ ಮತ್ತೊಮ್ಮೆ ಲಾಕ್ ಡೌನ್ ಜಾರಿ ಮಾಡಿರುವುದು ಐಸಿಯುನಲ್ಲಿದ್ದ ರೋಗಿಗೆ ವೆಂಟಿಲೆಟರ್ ತೆಗೆದಂತಾಗಿದೆ. ಬಹುತೇಕ ಉದ್ಯಮಗಳು ಕುಟುಕು ಜೀವಕ್ಕಾಗಿ ಗುಟಕರಿಸುತ್ತಿವೆ.

ಇಂತಹ ಸಂದರ್ಭದಲ್ಲಿ ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳು ಬಾಕಿ ವಸೂಲಿಗೆ ಕಿರುಕೂಳ ನೀಡಿರುವದರಿಂದ ಜನ ಸಾಮಾನ್ಯರು ಹೈರಾಣಾಗಿ ಹೋಗಿದ್ದಾರೆ. ಅಬಕಾರಿ, ಆಸ್ತಿ, ವ್ಯಾಟ್, ಜಿಎಸ್ ಟಿ, ವಾಹನ ತೆರಿಗೆ ಸೇರಿ ಬಹಳಷ್ಟು ಬಾಕಿ ಸಂಪನ್ಮೂಲಗಳನ್ನು ವಸೂಲಿಗೆ ಸರ್ಕಾರ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದೆ.

ರಾಜ್ಯದ ಪ್ರಮುಖ ಆದಾಯದ ಮೂಲವಾಗಿರುವ ಜಿಎಸ್ಟಿ ತೆರಿಗೆ ವಸೂಲಿಯಲ್ಲಿ ಬಹಳಷ್ಟು ಹಿನ್ನೆಡೆಯಾಗಿದೆ, ತಿಂಗಳಿಗೆ ಕನಿಷ್ಠ 10 ಸಾವಿರ ಕೋಟಿಗಿಂತಲೂ ಹೆಚ್ಚಿನ ಜಿಎಸ್ ಟಿ ವಸೂಲಿಯಾಗುವುದು ವಾಡಿಕೆ. ಆದರೆ ಮೇ ತಿಂಗಳಿನಲ್ಲಿ ಸರಿ ಸುಮಾರು 500ರಷ್ಟು ಕುಸಿತವಾಗಿದೆ. ಅಬಕಾರಿ ಆದಾಯದಲ್ಲೂ ಶೇ.40ರಷ್ಟು ಕುಸಿತವಾಗಿದೆ.

ಮುದ್ರಾಂಕ-ನೋಂದಣಿ ಕಚೇರಿಗಳು ಚಾಲನೆಯಲ್ಲಿದ್ದರೂ ಕಾರ್ಯಾಭಾರ ನಡೆಯದೆ ಸಂಪನ್ಮೂಲ ಕ್ರೋಢಿಕರಣವಾಗುತ್ತಿಲ್ಲ. ಸಾರಿಗೆ ಇಲಾಖೆಯಲ್ಲಿನ ಆದಾಯವೂ ಬಹುತೇಕ ಹಳ್ಳ ಹಿಡಿದೆ. ವಿದ್ಯುತ್ ಇಲಾಖೆಯ ಆದಾಯ ಮತ್ತು ಖರ್ಚು ಅಲ್ಲಿಗೆ ಸರಿ ಹೊಂದುತ್ತಿದೆ, ಸಾರಿಗೆ ಸಂಸ್ಥೆಗಳ ಬಸ್ ಗಳು ನಿಂತಿರುವುದರಿಂದ ಈ ತಿಂಗಳೂ ಸರ್ಕಾರವೇ ವೇತನ ನೀಡಬೇಕಾದ ಅನಿವಾರ್ಯತೆ ಇದೆ. ಕಳೆದೆರಡು ತಿಂಗಳಿಂದ ವೇತನ ನೀಡಲು ಪರದಾಟುತ್ತಿರುವ ಸಾರಿಗೆ ಸಂಸ್ಥೆ ಮಾರ್ಚ್ ನಲ್ಲಿ ಮುಷ್ಕರದಿಂದ ನಿಷ್ಕ್ರೀಯವಾಗಿತ್ತು, ಮುಷ್ಕರ ಅಂತ್ಯವಾಗುತ್ತಿದ್ದಂತೆ ಲಾಕ್ ಡೌನ್ ನಿಂದಾಗಿ ಸಂಸ್ಥೆಗಳು ಆದಾಯ ಮೂಲಗಳಿಲ್ಲದೆ ಗರ ಬಡಿದಂತಾಗಿವೆ.

ಸ್ಥಳೀಯ ಆಡಳಿತ ಸಂಸ್ಥೆಗಳ ಆದಾಯದ ಮೂಲವಾಗಿರುವ ಆಸ್ತಿ ತೆರಿಗೆ, ನೀರು ಹಾಗೂ ನಿರ್ಮಾಣ ಶುಲ್ಕಗಳು ನಿರೀಕ್ಷಿತ ಮಟ್ಟದಲ್ಲಿ ವಸೂಲಿಯಾಗುತ್ತಿಲ್ಲ. ಇದರಿಂದ ರಾಜ್ಯ ಸರ್ಕಾರದ ಬೋಕ್ಕಸದ ತಳದಲ್ಲಿ ಕೊನೆ ಅಗಳಿನಂತೆ ಹಣಕಾಸು ಉಳಿದಿದೆ. ಆದರೆ ಆರ್ಥಿಕ ನೆರವಿಗಾಗಿ ಹಸಿದ ಜೀವಗಳ ಅಂಗಲಾಚುವಿಕೆ ಅಪಾರವಾಗಿದೆ. ಇದರಿಂದ ದಿಕ್ಕು ತೋಚದಂತಾಗಿರುವ ಸರ್ಕಾರ ಸರ್ಕಾರ ಮತ್ತೆ ಜನರಿಂದಲೇ ಬಾಕಿ ವಸೂಲಿಗೆ ಮುಂದಾಗಿದೆ.

ಆಸ್ತಿ ತೆರಿಗೆ, ಜಿ ಎಸ್ ಟಿ, ವ್ಯಾಟ್ ಬಾಕಿ, ವಾಹನ ನೋಂದಣಿ ಶುಲ್ಕ, ಅಬಕಾರಿ ತೆರಿಗೆ ಸೇರಿ ಎಲ್ಲಾ ರೀತಿಯ ಬಾಕಿಗಳನ್ನು ವಸೂಲಿ ಮಾಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದೆ. ಲಾಕ್ ಡೌನ್ ಸಂದರ್ಭದಲ್ಲಿ ಶೇ.50ರಷ್ಟು ಸಿಬ್ಬಂದಿಗಳೊಂದಿಗೆ ಕೆಲಸ ಮಾಡುತ್ತಿರುವ ವಿವಿಧ ಇಲಾಖೆಗಳು ತೆರಿಗೆ ಬಾಕಿ ಉಳಿಸಿಕೊಂಡಿರುವವರಿಗೆ ನೋಟಿಸ್ ನೀಡಿ ವಸೂಲಿಗೆ ಪ್ರಯತ್ನಿಸುತ್ತಿದ್ದಾರೆ. ಈಗಾಗಲೇ ಆರ್ಥಿಕ ಸಂಕಷ್ಟದಿಂದ ಬಳಲಿ ಬೆಂಡಾಗಿರುವ ವರ್ತಕರು, ತೆರಿಗೆದಾರರು ಬಾಕಿ ವಸೂಲಿಗೆ ನೋಟಿಸ್ ಬರುತ್ತಿದ್ದಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಕರೆ ಮಾಡಿ ವಗ್ವಾದ ನಡೆಸುತ್ತಿದ್ದಾರೆ.

ಬಹಳಷ್ಟು ಇಲಾಖೆಗಳ ಅಧಿಕಾರಿಗಳು ಸಂದಿಗ್ಧತೆಗೆ ಸಿಲುಕಿದ್ದಾರೆ. ಸರ್ಕಾರದ ಆದೇಶದ ಪ್ರಕಾರ ಬಾಕಿ ವಸೂಲಿ ಮಾಡಬೇಕು. ಆದರೆ ನೋಂದಿರುವ ಜನ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಹಿರಿಯ ಅಧಿಕಾರಿಗಳು ಅವಕಾಶ ನೀಡುತ್ತಿಲ್ಲ. ಸೌಜನ್ಯ, ಸಹನೆಯಿಂದಲೇ ಬಾಕಿ ವಸೂಲಿಗೆ ಪ್ರಯತ್ನಿಸಿ ಎಂದು ಸರ್ಕಾರ ಕಟ್ಟಪ್ಫಣೆ ಮಾಡಿದೆ. ಲಾಕ್ ಡೌನ್ ನಲ್ಲಿ ಮನೆಯಲ್ಲಿದ್ದರೂ ಕೆಲವು ಇಲಾಖೆಗಳ ಅಧಿಕಾರಿಗಳಿಗೆ ಬಾಕಿ ವಸೂಲಿಯಿಂದ ನೆಮ್ಮದಿ ಇಲ್ಲವಾಗಿದೆ.

ಇನ್ನೂ ಬ್ಯಾಂಕ್, ವಿಮಾ ಕಂಪೆನಿಗಳು, ಇತರ ಹಣಕಾಸು ಸಂಸ್ಥೆಗಳು ಕೂಡ ಬಾಕಿ ಅಥವಾ ಸಾಲ ವಸೂಲಿಗೆ ಗ್ರಾಹಕರ ಬೆನ್ನು ಬಿದ್ದಿವೆ. ಸರ್ಕಾರದಿಂದ ಸ್ಪಷ್ಟವಾದ ಯಾವುದೇ ನಿರ್ದೇಶನ ಇಲ್ಲದೆ ಇರುವುದರಿಂದ ಬಾಕಿ ಪಾವತಿಸಲೇ ಬೇಕು ಎಂದು ಹಣಕಾಸು ಸಂಸ್ಥೆಗಳು ಕಿರುಕುಳ ನೀಡುತ್ತಿವೆ.

ಕೊರೊನಾ ಸೋಂಕನ್ನು ನಿಯಂತ್ರಣಕ್ಕೆ ತರಲು ಲಾಕ್ ಡೌನ್ ಘೋಷಣೆ ಮಾಡಿದ ಸರ್ಕಾರ, ಅದರಿಂದ ಜನರ ಮೇಲಾಗುವ ಪರಿಣಾಮಗಳ ಬಗ್ಗೆ ಕಾಳಜಿ ವಹಿಸಿಲ್ಲ. ಇನ್ನೂ ದುರಂತವೆಂದರೆ ಸರ್ಕಾರವೇ ಬಾಕಿ ವಸೂಲಿಗೆ ಇಳಿಯುವ ಮೂಲಕ ಜನರನ್ನು ಸುಲಿಗೆ ಮಾಡುತ್ತಿದೆ, ಖಾಸಗಿ ಸಂಸ್ಥೆಗಳನ್ನು ಸರ್ಕಾರವನ್ನೂ ಮೀರಿ ಕಿರುಕೂಳ ನೀಡುತ್ತಿವೆ.

ಮೊದಲ ಹಂತದ ಲಾಕ್ ಡೌನ್ ವೇಳೆ ಕೇಂದ್ರ ಸರ್ಕಾರ ಬ್ಯಾಂಕ್ ಗಳ ಸಾಲ ವಸೂಲಿ ಸೇರಿದಂತೆ ಇತರ ಬಾಕಿ ವಸೂಲಿಗೆ ಮೂರು ತಿಂಗಳ ಕಾಲಾವಕಾಶ ನೀಡಿತ್ತು. ಈ ಬಾರಿ ಕೇಂದ್ರ ಸರ್ಕಾರ ತನ್ನ ಜವಾಬ್ದಾರಿಯಿಂದ ನುಣಚಿಕೊಂಡಿದ್ದು, ಲಾಕ್ ಡೌನ್ ಹೊಣೆಗಾರಿಕೆಯನ್ನು ರಾಜ್ಯ ಸರ್ಕಾರಗಳಿಗೆ ಬಿಟ್ಟು ಬಿಟ್ಟಿದೆ. ತೀವ್ರ ಸಂಕಷ್ಟದಲ್ಲಿರುವ ಬಡ ಹಾಗೂ ವೃತ್ತಿ ನಿರತರಿಗಾಗಿ ಒಂದುಕಾಲು ಸಾವಿರ ಕೋಟಿ ಪ್ಯಾಕೇಜ್ ಘೋಷಣೆ ಮಾಡಿದ ಸರ್ಕಾರ ಅದನ್ನು ನೀಡಲು ಸಾಧ್ಯವಾಗದೆ ಇನ್ನೂ ಅರ್ಜಿಗಳ ಸ್ವೀಕರಾಕ್ಕೆ ವಾರದ ಬಳಿಕ ಮುಂದಾಗಿದೆ.

10 ಸಾವಿರ ಕೋಟಿ ರೂಪಾಯಿ ಜಿಎಸ್ ಟಿ ವಸೂಲಿಯಾಗುತ್ತಿದ್ದ ಜಾಗದಲ್ಲಿ, 5734 ಕೋಟಿ ಮಾತ್ರ ಮೇನಲ್ಲಿ ವಸೂಲಿಯಾಗಿದೆ. ಇದು ಸರ್ಕಾರಿ ನೌಕರರ ವೇತನ ಸೇರಿ ಯೋಜನೇತರ ವೆಚ್ಚಗಳಿಗೆ ಸಾಲುತ್ತಿಲ್ಲ. ಸಾಲದ ಮೇಲಿನ ಬಡ್ಡಿ ಕಟ್ಟಲಾದೆ ರಾಜ್ಯ ಸರ್ಕಾರವೇ ಸುಸ್ತಿದಾರನಾಗುವ ಪರಿಸ್ಥಿತಿ ಬಂದಿದೆ. ಸಂಕಷ್ಟ ಸಮಯದಲ್ಲಿ ರಾಜ್ಯಕ್ಕೆ ಬರಬೇಕಿದ್ದ 2020-21ನೇ ಸಾಲಿನ 11 ಸಾವಿರ ಕೋಟಿ ರೂಪಾಯಿಗಳ ಜಿಎಸ್ಟಿ ಪರಿಹಾರ ಬಾಕಿಯನ್ನಾದರೂ ನೀಡಿ ಎಂದು ಕೇಂದ್ರ ಸರ್ಕಾರದ ಮುಂದೆ ರಾಜ್ಯ ಸರ್ಕಾರ ಅಂಗಲಾಚಿದೆ. ಆದರೆ ಕೇಂದ್ರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಕೇಂದ್ರದ ಬಾಬ್ತುಗಳಾದ ಆದಾಯ, ಕಸ್ಟಮ್ಸ್ ತೆರಿಗೆಗಳಲ್ಲಿ ಕರ್ನಾಟಕ ಹೆಚ್ಚು ಪಾವತಿಸುವ ಎರಡನೇ ರಾಜ್ಯವಾಗಿದ್ದರೂ ಕೇಂದ್ರದಿಂದ ನಿರೀಕ್ಷಿತ ನೆರವು ಸಿಗುತ್ತಿಲ್ಲ.

ಕೊರೊನಾ, ಬ್ಲಾಕ್ ಫಂಗಸ್ ಭಯ, ಬೆಡ್, ಔಷಧಿ, ಆಕ್ಸಿಜನ್ ಕೊರತೆಗಳ ರೇಜಿಗೆಯಲ್ಲಿ ಜನ ಸಾಲ ಹಾಗೂ ಬಾಕಿ ವಸೂಲಿಗಾಗಿ ನಡೆಯುತ್ತಿರುವ ಕಿರುಕೂಳವನ್ನು ಮರೆತಿದ್ದರು. ಒಂದು ವೇಳೆ ಲಾಕ್ ಡೌನ್ ತೆರವಾಗುತ್ತಿದ್ದಂತೆ ಈಗಾಗಲೇ ನೋಟಿಸ್ ನೀಡಿರುವ ಅಧಿಕಾರಿಗಳು ಬಾಕಿ ವಸೂಲಿಗೆ ಮುಗಿ ಬಿದ್ದಾಗ ಜನರಿಗೆ ನಿಜವಾದ ಸಂಕಷ್ಟ ಎದುರಾಗಲಿದೆ.

Facebook Comments